

ಸೋಮವಾರಪೇಟೆ: ಸುಮಾರು 115 ವರ್ಷಗಳ ಇತಿಹಾಸವಿರುವ ಆನೆಕೆರೆ ತಡೆಗೋಡೆ ಬೇಸಿಗೆಯಲ್ಲೇ ಕುಸಿದುಬಿದ್ದಿದ್ದು, ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ.
ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ವಾಹನ ಚಾಲಕರಿಗೆ ರಸ್ತೆಯ ಬಗ್ಗೆ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಅನಾಹುತಗಳು ಸಂಭವಿಸುವ ಮೊದಲು ಪಟ್ಟಣ ಪಂಚಾಯಿತಿ ಅಥವಾ ಲೋಕೋಪಯೋಗಿ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಡಿಕೇರಿ, ಸೋಮವಾರಪೇಟೆ, ಶನಿವಾರಸಂತೆ, ಬೆಂಗಳೂರು ರಾಜ್ಯ ಹೆದ್ದಾರಿ ಪಟ್ಟಣದ ಆನೆಕೆರೆ ತಟದಲ್ಲೇ ಹಾದುಹೋಗಿದೆ. ರಸ್ತೆಯೂ ಕಿರಿದಾಗಿದೆ. ಕೆರೆ ತಡೆಗೋಡೆ ದುಸ್ಥಿತಿಯಲ್ಲಿದ್ದರೂ ಲೋಕೋಪಯೋಗಿ ಇಲಾಖೆ ಭದ್ರವಾದ ರೇಲಿಂಗ್ಸ್ ಅಥವಾ ತಡೆಗೋಡೆಯನ್ನು ನಿರ್ಮಿಸುವುದಕ್ಕೆ ಕ್ರಮಕೈಗೊಂಡಿಲ್ಲ. ಆಕಸ್ಮಿಕವಾಗಿ ವಾಹನಗಳು ಗಟ್ಟಿಯಿಲ್ಲದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದರೆ ವಾಹನ ಕೆರೆಯೊಳಗೆ ಮುಳುಗುವ ಸಂಭವವಿದೆ.
ಅನೇಕ ದಶಕಗಳಿಂದ ಆನೆಕೆರೆ ಅಭಿವೃದ್ಧಿ ಮಾಡಿರಲಿಲ್ಲ. ಹೂಳು ತುಂಬಿ ಪಾಳುಬಿದ್ದಿತ್ತು. ಆನೆಕೆರೆಯ ಪುನಶ್ಚೇತನಕ್ಕೆ ಮುಂದಾದ ಉದ್ಯಮಿ ಹರಪಳ್ಳಿ ರವೀಂದ್ರ ನಾಲ್ಕು ವರ್ಷದ ಹಿಂದೆ ಸುಮಾರು 4 ಲಕ್ಷ ರೂ.ಗಳನ್ನು ಖರ್ಚು ಮಾಡಿ, ಕೆರೆಯ ಹೂಳು ತೆಗೆಸಿದ್ದರು.
ನಂತರ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗಿತ್ತು. ಆದರೆ ಪಟ್ಟಣ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಕೆರೆ ಸುತ್ತ ತಡೆಗೋಡೆ ನಿರ್ಮಿಸಲಿಲ್ಲ. ಇದ್ದ ಹಳೆಯ ಕಾಂಪೌಂಡ್‌ಗೆ ಬಣ್ಣ ಬಳಿದು ಸುಮ್ಮನಾದರು. ಮೂರು ವರ್ಷಗಳ ಹಿಂದೆ ಕಾಂಪೌಂಡ್‌ನ ಸ್ವಲ್ಪ ಭಾಗ ಕುಸಿದಿತ್ತು. ಕುಸಿದಿದ್ದ ಕಡೆ ತಾತ್ಕಾಲಿಕ ಕಾಂಪೌಂಡ್ ನಿರ್ಮಿಸಿದ್ದರು. ಈಗ ಮತ್ತೊಮ್ಮೆ ಕಾಂಪೌಂಡ್ ಕುಸಿದು ಬಿದ್ದಿದೆ. ಈ ಬಾರಿ ರಸ್ತೆಯ ಭಾಗದಲ್ಲಿ ಭದ್ರವಾದ ತಡೆಗೋಡೆ ನಿರ್ಮಿಸಲೇಬೇಕಾಗಿದೆ.
ಪಟ್ಟಣದ ನಿವಾಸಿಗಳ ಧಾರ್ಮಿಕ ಆಚರಣೆಗಳು ಈ ಆನೆಕೆರೆಯಲ್ಲಿ ಗಂಗೆ ಪೂಜೆಯೊಂದಿಗೆ ಪ್ರಾರಂಭವಾಗುತ್ತವೆ. ಈ ಕೆರೆಯನ್ನು ಜನರು ಈಗಲೂ ಭಕ್ತಿಭಾವದಿಂದ ಪೂಜಿಸುತ್ತಾರೆ. ಗಣೇಶ ಚತುರ್ಥಿ ಸಮಯದಲ್ಲಿ ಪಟ್ಟಣದಲ್ಲಿ ಪ್ರತಿಷ್ಠಾಪಿಸುವ ಗೌರಿ-ಗಣೇಶ ಮೂರ್ತಿಗಳನ್ನು ಆನೆಕೆರೆಯಲ್ಲೆ ವಿಸರ್ಜಿಸುವ ಪರಿಪಾಠ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
1910ರಲ್ಲಿ ನಿರ್ಮಾಣ
1910ರಲ್ಲಿ ಆಲೆಕಟ್ಟೆ ಹನುಮ ಮೇಸ್ತ್ರಿ ಅವರು ದೂರದೃಷ್ಟಿ ಇಟ್ಟುಕೊಂಡು ಆನೆಕೆರೆಯನ್ನು ನಿರ್ಮಿಸಿದ್ದರು. ವರ್ಷವಿಡೀ ಕೆರೆ ತುಂಬಿ, ಎರಡು ತೂಬಿನಲ್ಲಿ ನೀರು ಹರಿಯುತ್ತಿದ್ದರಿಂದ ನೂರಾರು ಎಕರೆ ಕೃಷಿ ಭೂಮಿಗೆ ನೀರು ಪೂರೈಕೆಯಾಗುತ್ತಿತ್ತು. ಕೆಳ ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಸಮೃದ್ಧ ಫಸಲು ಪಡೆಯುತ್ತಿದ್ದರು.
ಒಂದು ಶತಮಾನದ ಇತಿಹಾಸ ಒಂದು ಶತಮಾನದ ಇತಿಹಾಸವಿರುವ ಕೆರೆಯಲ್ಲಿ ಕಾಡಾನೆಗಳು ನೀರು ಕುಡಿಯಲು ಬರುತ್ತಿದ್ದು, ಈ ಕಾರಣದಿಂದ ಆನೆಕೆರೆ ಎಂದು ಹೆಸರು ಬಂದಿದೆ ಎನ್ನಲಾಗಿದೆ. ಕೆರೆ ತುಂಬಿ ಕೋಡಿ ಹರಿದರೆ, ಗ್ರಾಮಕ್ಕೆ ಸುಭೀಕ್ಷೆ ಎಂಬ ನಂಬಿಕೆಯಿದ್ದ ಕಾರಣ ಈ ಕೆರೆಯ ಮೇಲೆ ಜನರಲ್ಲಿ ಇವತ್ತಿಗೂ ಪೂಜಾಭಾವನೆಯಿದೆ. ರಾತ್ರಿ ವೇಳೆಯಲ್ಲಿ ಪುಂಡಪೋಕರಿಗಳು ಕೆರೆಯ ಅವರಣದಲ್ಲಿ ಕುಳಿತು ಮದ್ಯಪಾನ ಮಾಡಿ ಬಾಟಲ್‌ಗಳನ್ನು ಕೆರೆಯೊಳಕ್ಕೆ ಎಸೆಯುತ್ತಿದ್ದಾರೆ ಎಂಬ ಆರೋಪವೂ ಇದೆ. ಇನ್ನಾದರೂ ಪಟ್ಟಣ ಪಂಚಾಯಿತಿ ಆನೆಕೆರೆಯ ಅಭಿವೃದ್ಧಿ ಮತ್ತು ಪಾವಿತ್ರ್ಯತೆ ಕಾಪಾಡಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ಮರಳು ಮೂಟೆಗಳನ್ನು ಇರಿಸಿ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸುತ್ತೇವೆ. ಶಾಸಕರೊಂದಿಗೆ ಚರ್ಚಿಸಿ ಕೆರೆಯ ರಸ್ತೆ ಭಾಗದಲ್ಲಿ ಭದ್ರವಾದ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ಬೈಂದೂರು, ವಿರಾಜಪೇಟೆ ರಾಜ್ಯ ಹೆದ್ದಾರಿಗೆ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿರುವುದರಿಂದ ರಸ್ತೆ ವಿಸ್ತರಣೆ ಮಾಡಲೇಬೇಕಾಗಿದೆ. ಕೆರೆ ಪಕ್ಕದಲ್ಲಿ ರಸ್ತೆ ವಿಸ್ತರಣೆ ಆಗಬೇಕು. ಇದೆಲ್ಲಾವನ್ನು ನೋಡಿಕೊಂಡು ತಡೆಗೋಡೆ ಯೋಜನೆ ರೂಪಿಸುತ್ತೇವೆ. ವೆಂಕಟೇಶ್ ನಾಯಕ್ ಎಇಇ, ಲೋಕೋಪಯೋಗಿ ಇಲಾಖೆ ಆನೆಕೆರೆ ಭರ್ತಿಯಾದರೆ ಇಲ್ಲಿನ ಜನರು ಸಂಭ್ರಮಿಸುತ್ತಾರೆ. ಆನೆಕೆರೆ ಅಭಿವೃದ್ಧಿಯಲ್ಲಿ ಪಟ್ಟಣ ಪಂಚಾಯಿತಿಯೂ ಕೈಜೋಡಿಸಿದೆ. ಪಂಚಾಯಿತಿ ವತಿಯಿಂದಲೇ ಸ್ವಚ್ಛ ಮಾಡಲಾಗುತ್ತದೆ. ಕೆರೆಗೆ ಭದ್ರವಾದ ತಡೆಗೋಡೆ ನಿರ್ಮಾಣವಾಗಬೇಕು. ಶಾಸಕ ಡಾ.ಮಂತರ್‌ಗೌಡ ಅವರೊಂದಿಗೆ ಚರ್ಚಿಸಲಾಗಿದೆ. ಲೋಕೋಪಯೋಗಿ ಇಲಾಖೆ ಕಾಮಗಾರಿ ಯೋಜನೆ ರೂಪಿಸಲಿದೆ. ಶೀಲಾ ಡಿಸೋಜ ವಾರ್ಡ್ ಸದಸ್ಯೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ