

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಉತ್ತಮ ಸಂದೇಶಗಳಿರುವ ಸಿನಿಮಾ ನಿರ್ಮಾಣ ಹಾಗೂ ಚಿತ್ರಗೀತೆಗಳು ರಚನೆಯಾದರೆ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ನಟ ಹೊನ್ನವಳ್ಳಿ ಕೃಷ್ಣ ಹೇಳಿದರು.
ನಗರದ ವಿದ್ಯಾ ಚೇತನ ಟೆಕ್ನೋ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಬಸವಣ್ಣ ಎಜುಕೇಷನ್ ಟ್ರಸ್ಟ್‌ನಿಂದ ಕಾಲೇಜಿನ ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಸರ್ವಧರ್ಮಗಳ ಉದ್ಧಾರ ಭಗವಂತ ನಿರ್ಧಾರವಾಗಿದ್ದು, ಮನಸ್ಸಿನ ಚೌಕಟ್ಟಿನಲ್ಲಿ ಪ್ರತಿಯೊಬ್ಬರೂ ವಿಷಯವನ್ನು ಅರ್ಥೈಸಿಕೊಳ್ಳಬೇಕಿದೆ. ಕೆಲ ದಶಕಗಳ ಹಿಂದಿನ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ವ್ಯತ್ಯಾಸಗಳಿವೆ. ನಾನು ನಾಲ್ಕನೇ ತರಗತಿ ಮಾತ್ರ ವಿದ್ಯಾಭ್ಯಾಸ ಮಾಡಿದ್ದು, 4 ಕೋಟಿ ಜನರೊಂದಿಗೆ ಬೆರೆತಿದ್ದೇನೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಜತೆಗೆ ಅಭಿನಯ ಕಲೆ ಬೆಳೆಸಿಕೊಳ್ಳಬೇಕಿದೆ. ತರಗತಿಯಲ್ಲಿ ಕೊನೆಯ ಸ್ಥಾನದಲ್ಲಿ ಕುಳಿತುಕೊಳ್ಳವವರು ಬಹತೇಕ ಬುದ್ಧಿವಂತರಾಗಿರುತ್ತಾರೆ ಎಂದ ಅವರು, ಹಿಂದಿನ ಕಾಲದ ಸಿನಿಮಾಗಳು, ಸಿನಿಮಾ ಗೀತೆಗಳು ಸಮಾಜಕ್ಕೆ ಸಾಕಷ್ಟು ಸಂದೇಶವನ್ನು ನೀಡುತ್ತಿದ್ದು, ಇತ್ತೀಚಿನ ಸಿನಿಮಾಗಳು ಯಾವ ರೀತಿ ಸಂದೇಶವನ್ನು ನೀಡುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಕಲಾವಿದರಿಗೆ ಯಾವುದೇ ಜಾತಿ, ಭೇದ ಮತವಿಲ್ಲ. ಕಲೆಯನ್ನೇ ಉಸಿರಾಗಿಸಿಕೊಂಡು ಜನರನ್ನು ರಂಜಿಸುವ ಕಾರ್ಯವಾಗಿರುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲ ಎಂ.ಬಿ.ಮಹದೇವಯ್ಯ ಮಾತನಾಡಿ, 4-5 ವರ್ಷಗಳ ಹಿಂದೆ ಕೇವಲ 35 ವಿದ್ಯಾರ್ಥಿಗಳಿಂದ ಆರಂಭಗೊಂಡ ವಿದ್ಯಾಸಂಸ್ಥೆ, ಇಂದು ಸುಮಾರು 370ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಕಳೆದ ಬಾರಿಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಕಾಲೇಜು 7ನೇಸ್ಥಾನ ಪಡೆದದ್ದು ಹೆಮ್ಮೆಯ ಸಂಗತಿ. ಈ ಬಾರಿಯ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಸತತ ಪ್ರಯತ್ನದಿಂದ ಉತ್ತಮ ಸ್ಥಾನ ಪಡೆಯುತ್ತೇವೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಜಿ.ಕೆ.ಸುಗ್ಗರಾಜು, ಮುಖಂಡ ಅಮಿತ್, ಮಂಜುನಾಥ್, ವಿದ್ಯಾ ಚೇತನ ಟೆಕ್ನೋ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎಂ.ಹೊನ್ನಿಂಗಪ್ಪ, ಮಹೇಶ್, ಜಯಶಂಕರ್, ಹರೀಶ್, ರಾಜೇಶ್ವರಿ, ಹೇಮಂತ್, ಬೃಂದಾ, ಹೇಮಲತಾ, ಕವಿತಾ, ಪ್ರೇರಣಾ, ಜಯಶ್ರೀ, ಇಂದ್ರಮ್ಮ ಮತ್ತಿತರರು ಇದ್ದರು.