ಪರೀಕ್ಷೆಗಳಿಗೆ ಭಯಪಡದೇ ಸಿದ್ಧತೆ ನಡೆಸಿ

kanakadas new
Published on

ಹುಬ್ಬಳ್ಳಿ : ಶೈಕ್ಷಣಿಕ ಪರೀಕ್ಷೆಗಳಿಗೆ ಭಯಪಡದೆ ಪರಿಪೂರ್ಣ ಸಿದ್ಧರಾಗಿ ಪರೀಕ್ಷೆಗಳನ್ನು ಎದುರಿಸಿ, ಉತ್ತಮ ವಿದ್ಯಾರ್ಥಿಗಳಾಗಬೇಕು ಎಮದು ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವೀಂದ್ರನಾಥ ದಂಡಿನ ಸಲಹೆ ನೀಡಿದರು.

ನಗರದ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಪದವಿ ಪೂರ್ವ ಕಾಲೇಜಿನ ಡಾ. ಬಿ.ಎಫ್ ದಂಡಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾರಿತೋಷಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಓದುವ ಹಂತದಲ್ಲಿ ಬೇರೆ ಕಡೆ ಗಮನಹರಿಸದೆ ಅಭ್ಯಾಸಕ್ಕೆ ಒತ್ತು ನೀಡಿದರೆ ಗುರಿ ತಲುಪುವ ಹಾದಿ ಸುಗಮವಾಗುತ್ತದೆ. ನಿನ್ನೆ ಏನು ಆಯಿತು ಎಂಬ ಅರಿವಿನಿಂದ ಮುಂದೆ ಮಾಡಬಹುದಾದ ಗುರಿ ಸಾಧನೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಸಮಯಕ್ಕೆ ಬೆಲೆ ಕೊಡಬೇಕು ಎಂದು ತಿಳಿಸಿದರು.

ಅತಿಥಿಯಾಗಿದ್ದ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ ವಿಭಾಗದ ಮುಖ್ಯಸ್ಥ ಡಾ. ಗುರುನಾಥ ಬಡಿಗೇರ ಮಾತನಾಡಿ, ಪಿಯು ಶಿಕ್ಷಣ ಜೀವನದ ಬದಲಾವಣೆ ಹಂತ. ಈ ಹಂತದಲ್ಲಿ ಉತ್ತಮ ಸಾಧನೆ ಮಾಡಿದರೆ ವಿಶ್ವವಿದ್ಯಾಲಯದ ಶಿಕ್ಷಣಕ್ಕೆ ಸುಗಮ ದಾರಿಯಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಮಾತನಾಡಿ, ಗುರಿ ಮುಟ್ಟಲು ಶ್ರಮಪಟ್ಟು ಓದಬೇಕು. ಪಾಲಕರ ಮತ್ತು ಶಿಕ್ಷಕರಿಗೆ ಸಾಧನೆಯ ಮೂಲಕ ಕೀರ್ತಿ ಹೆಚ್ಚಿಸುವ ಕಾರ್ಯ ಮಾಡಡಬೇಕು ಎಂದು ಹೇಳಿದರು.

ಪಿಯು ದ್ವಿತೀಯ ವರ್ಷದಲ್ಲಿ ಸಾಧನೆ ಮಾಡಿದ ವಾಣಿಜ್ಯ, ವಿಜ್ಞಾನ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಭೂಗೋಳ ಶಾಸ್ತ್ರ ವಿಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್​ಡಿ ಪದವಿ ಪಡೆದ ಉಪನ್ಯಾಸಕ ಡಾ. ಅಶೋಕ ಗಡಾದ ಅವರನ್ನು ಸತ್ಕರಿಸಲಾಯಿತು.

ಪಿಯು ಪ್ರಾಚಾರ್ಯ ಸಂದೀಪ ಬೂದಿಹಾಳ, ವಿದ್ಯಾರ್ಥಿ ಸಂಘದ ಕಾರ್ಯುಧ್ಯಕ್ಷ ಸುಭಾಷ ಮಾಸಗೋನೆ, ವಿದ್ಯಾರ್ಥಿ ಪ್ರತಿನಿಧಿಗಳಾದ ದೀಪಕ ಒಂಟಿಗಡಾದ, ಸೃಷ್ಠಿ ಪುಣೇಕರ ಹಾಗೂ ಇತರರು ಉಪಸ್ಥಿತರಿದ್ದರು.

ಉಪನ್ಯಾಸಕ ಕೆ.ಬಿ. ಕುರಿ ನಿರೂಪಿಸಿದರು. ಡಾ. ಅಶೋಕ ಗಡಾದ ವಾರ್ಷಿಕ ವರದಿ ವಾಚನ ಮಾಡಿದರು. ಎನ್.ಡಿ. ಹಾದಿಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net