

ಧಾರವಾಡ: ನಾಗರಿಕರು ಕರೊನಾ ರೋಗವನ್ನು ನಿರ್ಲಕ್ಷಿಸದೇ, ಸರ್ಕಾರ ಜಾರಿಗೊಳಿಸಿದ ನಿರ್ದೇಶನಗಳನ್ನು ಅನುಸರಿಸುವ ಮೂಲಕ ದೇಶ ಮತ್ತು ಜಿಲ್ಲೆಯನ್ನು ಕರೊನಾ ಮುಕ್ತಗೊಳಿಸಲು ಸಹಕರಿಸಬೇಕು ಎಂದು ಎಸಿಪಿ ಅನುಷಾ ಜಿ. ತಿಳಿಸಿದರು.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಆಶ್ರಯದಲ್ಲಿ ಪಾಲಿಕೆ ಕಚೇರಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರೊನಾ ಕುರಿತ ವಿಶೇಷ ಜನ ಆಂದೋಲನ ಅಭಿಯಾನದಲ್ಲಿ ಅವರು ಮಾತನಾಡಿದರು. ಜನನಿಬಿಡ ಪ್ರದೇಶದಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಬಳಕೆ, ಪರಸ್ಪರ ಅಂತರ ಕಾಪಾಡುವ ಹಾಗೂ ಕೈಗಳನ್ನು ಸರಿಯಾಗಿ ತೊಳೆಯುವ ವಿಧಾನಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕರೊನಾ ಅರಿವು ಅಭಿಯಾನ ನಡೆಸಿದ್ದು ಸೂಕ್ತವಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದೀನಕರ ಅವರು ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಕ್ಷೇತ್ರ ಜನಸಂಪರ್ಕ ಇಲಾಖೆ ಸಹಾಯಕ ಮುರಳೀಧರ ಕಾರಭಾರಿ ಮಾತನಾಡಿದರು. ಜಿಪಂ ಸಿಇಒ ಡಾ.ಸುಶೀಲಾ.ಬಿ ಚಾಲನೆ ನೀಡಿ ಮಾತನಾಡಿದರು.
ನಗರದ ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಅಭಿಯಾನ ನಡೆಸಲಾಯಿತು. ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಆರ್.ಎಂ. ಕುಲಕರ್ಣಿ, ಡಾ. ಶಶಿ ಪಾಟೀಲ, ಡಾ.ಶುಭಾ ಮೂಲಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ಕೆ.ಕೆ. ಚವ್ಹಾಣ, ಎ.ಎಂ.ಅಗಡಿ, ರೇಖಾ ಬಾಡಿಗಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪಾಲಿಕೆ ಅಧಿಕಾರಿಗಳು, ಇತರರು ಇದ್ದರು.