

ಅವಿನಾಶ್ ಜೈನಹಳ್ಳಿ ಮೈಸೂರು
ಮಾಗಿಯ ಚಳಿ ಜಿಲ್ಲೆಯ ಜನರನ್ನು ಕಾಡಲು ಶುರು ಮಾಡಿದ್ದು, ಮುಂದಿನ ದಿನಗಳಲ್ಲಿ ಚಳಿಯ ತೀವ್ರತೆ ಹೆಚ್ಚುವ ನಿರೀಕ್ಷೆ ಇದೆ. ಆದರೆ ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿರಲಿದೆ.
ಜಿಲ್ಲೆಯಲ್ಲಿ ವಾರದ ಹಿಂದೆ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬುಧವಾರ ನಗರ ಪ್ರದೇಶದಲ್ಲಿ ಕನಿಷ್ಠ 19, ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಉಷ್ಠಾಂಶ ದಾಖಲಾಗಿದೆ. ಗ್ರಾಮಾಂತರ ಭಾಗದಲ್ಲಿ ಕನಿಷ್ಠ 18, ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿ ಮೈ ನಡುಗಿಸಿದೆ.
ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಈ ಬಾರಿ ಕಳೆದ ವರ್ಷದಷ್ಟು ಚಳಿ ಇರಲ್ಲ. ಹಿಂದಿನ ಎರಡು ವರ್ಷಗಳಲ್ಲೂ ಉತ್ತಮ ಮಳೆ ಬಿದ್ದಿದ್ದ ಹಾಗೂ ನವೆಂಬರ್ ಸಮಯದಲ್ಲೂ ಕೆಆರ್‌ಎಸ್ ಜಲಾಶಯ ತುಂಬಿದ್ದ ಕಾರಣ ಚಳಿ ಹೆಚ್ಚಾಗಿತ್ತು. ಆದರೆ, ಈ ವರ್ಷ ಅಷ್ಟು ಪ್ರಮಾಣದಲ್ಲಿ ಚಳಿ ಇರಲ್ಲ. ಆದರೆ, ಪ್ರತಿ ವರ್ಷದಷ್ಟು ಚಳಿ ಇರಲಿದೆ ಎಂದು ಸಾವಯವ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಬೆಳಗ್ಗೆ ಸೂರ್ಯನ ಕಿರಣಗಳು ಬೀಳುವವರೆಗೂ ಜನರು ಮನೆಗಳಿಂದ ಹೊರಬರುವುದೇ ಕಷ್ಟವೆನಿಸುತ್ತಿದೆ. ಸಂಜೆಯಾಗುತ್ತಿದ್ದಂತೆ ಶೀತಗಾಳಿಯೊಂದಿಗೆ ನಿಧಾನವಾಗಿ ಮೈ ಕೊರೆಯುವ ಚಳಿ ಶುರುವಾಗುತ್ತಿದೆ. ಹಗಲಿನಲ್ಲಿ ಸುಡುವ ಬಿಸಿಲು, ರಾತ್ರಿ ಮೈ ಕೊರೆಯುವ ಚಳಿ. ಇದು ಈಗಿನ ವಾತಾವರಣ. ನಗರದ ಕುಕ್ಕರಹಳ್ಳಿಕೆರೆ, ಮಾನಸಗಂಗೋತ್ರಿ, ಕಾರಂಜಿಕೆರೆ ಸುತ್ತ ವಾಕ್ ಮಾಡುವವರು, ರಾತ್ರಿ ಪಾಳಿಯಲ್ಲಿ ದುಡಿಯುವವರು, ಪೇಪರ್ ಹಾಕುವ ಹುಡುಗರು, ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರು, ಹಾಲು ಹಾಕುವವರು ಮತ್ತಿತರರು ಮಾಗಿಯ ಚಳಿಗೆ ನಲುಗಿಹೋಗಿದ್ದು, ಬೆಚ್ಚನೆ ಉಡುಪುಗಳು ಇಲ್ಲದೆ ಬೀದಿಗಿಳಿಯದಂತಾಗಿದೆ.
ಬೆಚ್ಚನೆ ಉಡುಪುಗಳ ಮೊರೆ: ಮೈ ಕೊರೆಯುವ ಚಳಿಗೆ ತತ್ತರಿಸಿರುವ ನಗರದ ಜನರು ಬೆಚ್ಚನೆಯ ಉಡುಪುಗಳಿಗೆ ಮೊರೆ ಹೋಗುತ್ತಿದ್ದಾರೆ. ಚಳಿ ಹೆಚ್ಚುತ್ತಿರುವುದರಿಂದ ಬೆಚ್ಚನೆ ಉಡುಪುಗಳಾದ ಸ್ವೆಟರ್, ಜಾಕೆಟ್, ಶಾಲು, ಕಾಲುಚೀಲ, ಕೈಚೀಲ, ಟೋಪಿ, ಕಿವಿ ಮುಚ್ಚುವ ಬಟ್ಟೆ ಸೇರಿದಂತೆ ದಪ್ಪನೆಯ ಹೊದಿಕೆಗಳಿಗೆ ಈಗ ಬೇಡಿಕೆ ಬಂದಿದೆ. ಅಂತೆಯೆ, ಅವುಗಳ ಬೆಲೆ ತುಸು ದುಬಾರಿಯಾದರೂ ಭರ್ಜರಿಯಾಗಿ ಮಾರಾಟವಾಗುತ್ತಿವೆ.
ಕೆಲವು ಮಹಿಳೆಯರು ಚೆನ್ನಾಗಿ ಕಾಣಲು ಚಳಿಯಾದರೂ ಪರವಾಗಿಲ್ಲ ಎಂದು ಫ್ಯಾಷನ್ ಉಡುಪುಗಳನ್ನೇ ಧರಿಸುತ್ತಾರೆ. ಅಂಥ ಮಹಿಳೆಯರಿಗಾಗಿ ಚಳಿಗಾಲದ ಫ್ಯಾಷನ್ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮುಖ್ಯವಾಗಿ ಈ ಬೆಚ್ಚನೆಯ ಉಡುಪುಗಳು ನಗರದ ಪ್ರಮುಖ ಮಾಲ್‌ಗಳು, ಡಿ.ದೇವರಾಜ ಅರಸು ರಸ್ತೆ, ಸಯ್ಯಜಿರಾವ್ ರಸ್ತೆಗಳಲ್ಲಿರುವ ಬಟ್ಟೆ ಮಳಿಗೆಗಳು, ನಗರ ವ್ಯಾಪ್ತಿಯ ಫುಟ್‌ಪಾತ್‌ಗಳಲ್ಲಿ ಹೆಚ್ಚಾಗಿ ವ್ಯಾಪಾರವಾಗುತ್ತಿವೆ.
ಆರೋಗ್ಯದ ಬಗ್ಗೆ ಎಚ್ಚರವಿರಲಿ: ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಶೀತ, ಜ್ವರ ಬರುವ ಸಾಧ್ಯತೆಗಳಿವೆ. ದೇಹದ ಕೈ, ಕಾಲುಗಳ ಚರ್ಮ ಒಡೆಯುವ ಸಾಧ್ಯತೆಯಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ. ಕಳೆದ ವಾರದಿಂದ ಮೈ ಕೊರೆಯುವ ಚಳಿಯ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ವಾತಾವರಣದ ಬದಲಾವಣೆಯಿಂದಾಗಿ ಮಕ್ಕಳಿಗೆ ನೆಗಡಿ, ಕೆಮ್ಮು, ಶೀತ, ಜ್ವರ ಬಾಧಿಸುವುದು ಉಂಟು. ಹೀಗಾಗಿ, ಎಲ್ಲರೂ ಬೆಚ್ಚನೆಯ ಉಡುಪುಗಳನ್ನು ತೊಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ವಿಜಯವಾಣಿ ಕಾಳಜಿ
ಜಿಲ್ಲೆಯಲ್ಲಿ ಎರಡು ಮೂರು ದಿನಗಳಿಂದ ಚಳಿ ಹೆಚ್ಚಾಗಿದೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗದಲ್ಲಿ ಚಳಿ ಹೆಚ್ಚಿದೆ. ಡಿಸೆಂಬರ್‌ನಲ್ಲಿ ಚಳಿಯ ಪ್ರಮಾಣ ಇನ್ನೂ ಹೆಚ್ಚಾಗಲಿದೆ. ಆದರೆ, ಕಳೆದ ವರ್ಷದಷ್ಟು ಚಳಿ ಈ ಬಾರಿ ಇರಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಈ ಬಾರಿ ಹಿಂದಿನ ವರ್ಷಕಿಂತ ಚಳಿ ಕಡಿಮೆ ಪ್ರಮಾಣದಲ್ಲಿ ಇರಲಿದೆ. ಕಳೆದ ಎರಡು ವರ್ಷಗಳಲ್ಲೂ ಉತ್ತಮ ಮಳೆ ಬಿದ್ದಿದ್ದ ಕಾರಣ ಚಳಿ ಹೆಚ್ಚಾಗಿತ್ತು. ಆದರೆ, ಈ ಬಾರಿ ಅಷ್ಟು ಪ್ರಮಾಣದಲ್ಲಿ ಚಳಿ ಇರಲ್ಲ.ಡಾ.ಸಿ.ಗೋವಿಂದರಾಜು, ನಿವೃತ್ತ ಹಿರಿಯ ಕ್ಷೇತ್ರ ಅಧೀಕ್ಷಕ, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರ