ಫೆಬ್ರವರಿವರೆಗೆ ಚಳಿ ಮುಂದುವರಿಕೆ:ಕೆಲವೆಡೆ ಮಂಜು ಅಧಿಕ

Severe Cold
Published on

ಬೆಂಗಳೂರು:ರಾಜ್ಯದಲ್ಲಿ ಫೆಬ್ರವರಿವರೆಗೆ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ವಾಡಿಕೆಗಿಂತ ಮುನ್ನ ಕಾಣಿಸಿಕೊಂಡಿದ್ದ ಚಳಿ ಆರಂಭದಲ್ಲಿ ಮತ್ತು ಡಿಸೆಂಬರ್​ನಲ್ಲಿ ಅಧಿಕವಾಗಿ ಇತ್ತು. ಆದರೆ, ಸಂಕ್ರಾಂತಿ ಮುಗಿದ ಬಳಿಕ ರಾಜ್ಯದಲ್ಲಿ ಥಂಡಿ ವಾತಾವರಣ ತುಸು ಇಳಿಮುಖವಾಗಿದ್ದರೂ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಗಿಂತ ಕಲ್ಯಾಣ ಮತ್ತು ಮಧ್ಯ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸ್ವಲ್ಪ ಹೆಚ್ಚಿದೆ. ಬೀದರ್​, ವಿಜಯಪುರ, ಗದಗ, ರಾಯಚೂರು, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಚಿಂತಾಮಣಿ, ಮೈಸೂರು, ಮಂಡ್ಯ ಮತ್ತು ಶಿವಮೊಗ್ಗದಲ್ಲಿ ಮಂಗಳವಾರ ಕನಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2-3 ಡಿ.ಸೆ.ಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದ್ದು, ಈ ಮೇಲಿನ ಜಿಲ್ಲೆಗಳಲ್ಲಿ ವಾರಾಂತ್ಯವರೆಗೆ ಇದೇ ವಾತಾವರಣ ಇರಲಿದೆ.ಉಳಿದ ಜಿಲ್ಲೆಗಳ ಕನಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ ಉಷ್ಣಾಂಶ ದಾಖಲಾಗುತ್ತಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು,ಬಾಗಲಕೋಟೆ, ಕೊಪ್ಪಳ, ಹಾವೇರಿ, ಉಡುಪಿ ಮತ್ತು ದಕ್ಷಿಣಕನ್ನಡ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ ಉಷ್ಣಾಂಶ ದಾಖಲಾಗುತ್ತಿದೆ.ಮೇಲಿನ ಜಿಲ್ಲೆಗಳ ಉಷ್ಣಾಂಶದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.

ಮಂಜು ಜಾಸ್ತಿ: ಕರಾವಳಿ ವ್ಯಾಪ್ತಿಯ ಕೆಲ ಪ್ರದೇಶಗಳು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಜಾನೆ ಅಧಿಕವಾಗಿ ಮಂಜು ಆವರಿಕೊಳ್ಳುತ್ತಿದೆ. ಕೆಲ ಪ್ರದೇಶಗಳಲ್ಲಿ ರಾತ್ರಿ ವೇಳೆ ಇಬ್ಬನಿಯ ಜತೆಗೆ ತಣ್ಣನೆ ಗಾಳಿಯೂ ಬೀಸುತ್ತಿದೆ. ಇದರಿಂದಾಗಿ ಥಂಡಿ ವಾತಾವರಣ ಮುಂದುವರಿದಿದೆ. ರಾಜ್ಯದಲ್ಲಿ ಫೆಬ್ರವರಿಯಿಂದ ಚಳಿ ಇಳಿಮುಖವಾಗಲಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್​.ಪಾಟೀಲ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net