ರಾಜ್ಯದಲ್ಲಿ 3 ದಿನ ಶೀತದ ಅಲೆ ಎಚ್ಚರಿಕೆ:ಕಲಬುರಗಿ,ವಿಜಯಪುರಕ್ಕೆ ರೆಡ್​ ಅಲರ್ಟ್​​​​

coldwave
Published on

ಬೆಂಗಳೂರು: ರಾಜ್ಯದಲ್ಲಿ ಮುಂದಿನ 3 ದಿನ ತೀವ್ರವಾಗಿ ಶೀತದ ಅಲೆಗಳು(ಕೋಲ್ಡ್​ ವೇವ್​) ಕಾಣಿಸಿಕೊಳ್ಳಲಿವೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದು, ಭೂಮಿಯಲ್ಲಿ ತೇವಾಂಶ ಇರುವುದು, ಮೋಡ ಕವಿದ ವಾತಾವರಣ, ಸೈಕ್ಲೋನ್​ ಉಂಟಾಗಿರುವುದು,ಉತ್ತರದಿಂದ ದಣದತ್ತ ಗಾಳಿ ಬೀಸುತ್ತಿರುವುದೂ ಸೇರಿ ವಿವಿಧ ಕಾರಣಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ 5-6 ಡಿ.ಸೆ.ಉಷ್ಣಾಂಶ ಇಳಿಕೆಯಾಗಿದೆ. ಕಲಬುರಗಿ, ವಿಜಯಪುರದಲ್ಲಿ ಡಿ.17ರಿಂದ ಡಿ.19ರವರೆಗೆ ತೀವ್ರ ಶೀತದ ಅಲೆಗಳು ಬೀಸಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ರೆಡ್​ ಅರ್ಲಟ್​ ಕೊಟ್ಟಿದೆ. ಈ ಸಂದರ್ಭದಲ್ಲಿ ಮೇಲಿನ ಜಿಲ್ಲೆಗಳಲ್ಲಿ ತಾಪಮಾನ 6ರಿಂದ 7 ಡಿ.ಸೆ.ದಾಖಲಾಗಲಿದೆ. ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿನಲ್ಲಿ ಮುಂದಿನ 3 ದಿನ ಶೀತ ವಾತಾವರಣ ಉಂಟಾಗುವ ಸಂಭವ ಇರುವುದರಿಂದ ಯೆಲ್ಲೋ ಅರ್ಲಟ್​ ನೀಡಲಾಗಿದೆ. ಅ ಜಿಲ್ಲೆಗಳಲ್ಲಿ 10 ಡಿ.ಸೆ.ಉಷ್ಣಾಂಶ ಇರಲಿದೆ. ಇದು ವಾಡಿಕೆಗಿಂತ 4-5 .ಸೆ.ಉಷ್ಣಾಂಶ ಕಡಿಮೆ ಇರಲಿದೆ.

ಸೋಮವಾರ ಕನಿಷ್ಠ ತಾಪಮಾನದಲ್ಲಿ ಬೀದರ್​ 7.5, ವಿಜಯಪುರ 8.5, ಧಾರವಾಡ 11.8, ಬಾಗಲಕೋಟೆ, ರಾಯಚೂರು, ಗದಗದಲ್ಲಿ 12 ಡಿ.ಸೆ.ಉಷ್ಣಾಂಶ ದಾಖಲಾಗಿದೆ.ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ವಾಡಿಕೆಗಿಂತ 2-3 ಡಿ.ಸೆ. ಉಷ್ಣಾಂಶ ಇಳಿಕೆಯಾಗಿದೆ. ರಾತ್ರಿ ಮತ್ತು ಮುಂಜಾನೆ ವೇಳೆ ಮಂಜು ಸಹ ಬೀಳುತ್ತಿದೆ. ಮುಂದಿನ 2 ದಿನ ಬೆಂಗಳೂರಿನಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 25 ಮತ್ತು 15 ಡಿ.ಸೆ. ಇರಲಿದೆ. ಬೆಳಗ್ಗಿನ ಜಾವ ದಟ್ಟ ಮಂಜು ಬೀಳಲಿದೆ. ಕೊರೆಯುವ ಚಳಿಯಿಂದ ಈಗಾಗಲೇ ನಡುಗುತ್ತಿರುವ ಜನರು ಅಗತ್ಯ ಎಚ್ಚರಿಕೆವಹಿಸುವುದು ಸೂಕ್ತ.

21ರಿಂದ ರಾಜ್ಯದಲ್ಲಿ ಮತ್ತೆ ಮಳೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಡಿ.21ರಿಂದ ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ ಮತ್ತು ವಿಜಯನಗರದಲ್ಲಿ ಡಿ.21ರಿಂದ ಡಿ.23ರವರೆಗೆ ವರ್ಷಧಾರೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಡಿ.21ರಿಂದ ಮುಂದಿನ 3 ದಿನ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದೆ.

ಹಿಂದೊಮ್ಮೆ ಬೀದರ್​, ವಿಜಯಪುರದಲ್ಲಿ ಕನಿಷ್ಠ ತಾಪಮಾನದಲ್ಲಿ 6 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು. ಇದೀಗ ಆ ಜಿಲ್ಲೆಗಳಲ್ಲಿ 7-8 ಡಿ.ಸೆ.ಉಷ್ಣಾಂಶ ದಾಖಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತವಾಗಿರುವ ಕಾರಣ ರಾತ್ರಿ ಬೆಚ್ಚಿನ ವಾತಾವರಣ ಇರುವುದಿಲ್ಲ. ಗರಿಷ್ಠ ತಾಪಮಾನದಲ್ಲಿಯೂ ವಾಡಿಕೆಗಿಂತ ಉಷ್ಣಾಂಶ ಇಳಿಮುಖವಾದ ಹಿನ್ನೆಲೆಯಲ್ಲಿ ಹಗಲಿನ ವೇಳೆ ಬಿಸಿಲಿನ ಪ್ರಖರತೆ ಅಷ್ಟೇನೂ ಇಲ್ಲ. ಇದರಿಂದಾಗಿ ಚಳಿಯ ತೀವ್ರತೆ ಜಾಸ್ತಿ ಇದೆ. ಡಿ.21ರಿಂದ ರಾತ್ರಿ ವೇಳೆ ಉಷ್ಣತೆ ದಾಖಲಾಗುವ ಕಾರಣ ಚಳಿ ಪ್ರಮಾಣ ತುಸು ಇಳಿಮುಖಬಹುದು.

| ಸಿ.ಎಸ್​.ಪಾಟೀಲ್​.ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net