ಮಂಡ್ಯ ಕಾಂಗ್ರೆಸ್‌ನಲ್ಲಿ ಶೀತಲ ಸಮರ: ಪಿಎಂಎನ್, ರಮೇಶ ಬಂಡಿಸಿದ್ದೇಗೌಡ ನಡುವೆ ಕುದಿಮೌನ

Cold War in Congress Mandya
module: a; hw-remosaic: 0; touch: (0.28020835, 0.28020835); modeInfo: ; sceneMode: Auto; cct_value: 0; AI_Scene: (-1, -1); aec_lux: 113.0; hist255: 0.0; hist252~255: 0.0; hist0~15: 0.0;
Published on

ಮಂಡ್ಯ: ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಹಾಗೂ ರಮೇಶ ಬಂಡಿಸಿದ್ದೇಗೌಡ ನಡುವೆ ಶೀತಲ ಸಮರ ನಡೆಯುತ್ತಿದೆ ಎನ್ನುವ ಗುಮಾನಿ ಜೋರಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಇತ್ತೀಚಿನ ಬೆಳವಣಿಗೆ ಸಾಕ್ಷಿಯಾಗುತ್ತಿವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಳಕ್ಕೆ ಪೆಟ್ಟು ಕೊಟ್ಟು ಭರ್ಜರಿ ಜಯ ಗಳಿಸಿದ್ದ ಕಾಂಗ್ರೆಸ್‌ನಲ್ಲಿ ಈಗ ಎಲ್ಲವೂ ಸರಿಯಿಲ್ಲ. ಮೊದಲು ಮದ್ದೂರು ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಭಿನ್ನಮತ, ಇದೀಗ ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ಶಾಸಕರ ನಡುವೆಯೂ ಅಸಮಾಧಾನದ ಹೊಗೆಯಾಡಲಾರಂಭಿಸಿದೆ.
ಅನುಮಾನಕ್ಕೆ ಕಾರಣವೇನು?: ಹಿರಿಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನುವುದಕ್ಕೆ ಮಳವಳ್ಳಿಯಲ್ಲಿ ನಡೆದ ಗಗನಚುಕ್ಕಿ ಜಲಪಾತೋತ್ಸವ, ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆ ಹಾಗೂ ಶ್ರೀರಂಗಪಟ್ಟಣದಲ್ಲಿ ನಡೆದ ಪಾರಂಪರಿಕ ದಸರಾ ಆಚರಣೆ ಪೂರಕವಾಗುತ್ತಿದೆ.
ಸೆ.14 ಮತ್ತು 15ರಂದು ಮಳವಳ್ಳಿ ತಾಲೂಕಿನ ಪ್ರಸಿದ್ಧ ತಾಣ ಗಗನಚುಕ್ಕಿಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ವೈಭವಯುತ ಜಲಪಾತೋತ್ಸವ ಆಯೋಜಿಸಲಾಗಿತ್ತು. ಎರಡು ದಿನದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಚಾಲನೆ ನೀಡಿದ್ದರು. ಮಾತ್ರವಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ರವಿಕುಮಾರ್ ಗಣಿಗ, ಕೆ.ಎಂ.ಉದಯ್, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ ಹಾಗೂ ಮಧು ಮಾದೇಗೌಡ ಪಾಲ್ಗೊಂಡಿದ್ದರು. ಆದರೆ ಈ ಕಾರ್ಯಕ್ರಮದಿಂದ ರಮೇಶ ಬಂಡಿಸಿದ್ದೇಗೌಡ ದೂರ ಉಳಿದರು. ಇದಕ್ಕೆ ಹೆಚ್ಚಿನ ಮಹತ್ವ ಸಿಕ್ಕಿರಲಿಲ್ಲ. ಕಾರಣ ಕೆಲಸದೊತ್ತಡದಿಂದ ಗೈರಾಗಿರಬಹುದೆನ್ನುವ ಮಾತು ಕೇಳಿಬಂತು.
ಆದರೆ ಕಾಂಗ್ರೆಸ್‌ನಲ್ಲಿ ಭಿನ್ನಮತವಿದೆ ಎನ್ನುವುದು ಅ.4ರಿಂದ 7ರವರೆಗೆ ಶ್ರೀರಂಗಪಟ್ಟಣದಲ್ಲಿ ನಡೆದ ಪಾರಂಪರಿಕ ದಸರಾ ಹಬ್ಬ ಸಾಕ್ಷಿಯಾಯಿತು. ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆಯಲ್ಲಿ ನಡೆದ ನಾಲ್ಕು ದಿನದ ಐತಿಹಾಸಿಕ ಕಾರ್ಯಕ್ರಮಕ್ಕೆ ನರೇಂದ್ರಸ್ವಾಮಿ ಭಾಗಿಯಾಗಲೇ ಇಲ್ಲ. ದಸರಾ ಲೋಗೋ ಬಿಡುಗಡೆ ಸೇರಿದಂತೆ ಪೂರ್ವಭಾವಿ ಸಭೆಯಲ್ಲಿಯೂ ಇರಲಿಲ್ಲ. ಪರಿಣಾಮ ಶೀತಲ ಸಮರ ಎನ್ನುವ ಮಾತನ್ನು ಗಟ್ಟಿಗೊಳಿಸಿತು.
ಇದಾದ ಬಳಿಕ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಅ.16ರಂದು ಮಳವಳ್ಳಿ ತಾಲೂಕು ಟಿ.ಕೆ ಹಳ್ಳಿಯಲ್ಲಿ ನಡೆದ ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು ಹಾಗೂ ಹೊರ ಜಿಲ್ಲೆಯ ಶಾಸಕರು ಭಾಗವಹಿಸಿದ್ದರು. ಆದರೆ ಇದಕ್ಕೂ ರಮೇಶ ಬಂಡಿಸಿದ್ದೇಗೌಡ ಗೈರಾದರು. ಇದರೊಂದಿಗೆ ಮಳವಳ್ಳಿ ತಾಲೂಕಿನಲ್ಲಿ ನಡೆದ ಎರಡು ಕಾರ್ಯಕ್ರಮದಲ್ಲಿಯೂ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಉಪಸ್ಥಿತರಿದ್ದರೂ ಶ್ರೀರಂಗಪಟ್ಟಣ ಶಾಸಕ ಪಾಲ್ಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಧಿಕಾರದಲ್ಲಿ ಆರ್‌ಬಿಎಸ್ ಮೇಲುಗೈ
ಮೇಲ್ನೋಟಕ್ಕೆ ಎಲ್ಲವೂ ಸರಿ ಇರುವಂತೆ ಕಂಡರೂ ಪಕ್ಷದೊಳಗೆ ಅಸಮಾಧಾನ ಹೊಗೆಯಾಡುತ್ತಿರುವುದು ಬಹಿರಂಗ ಸತ್ಯ. ಮಾತ್ರವಲ್ಲದೆ ಈ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಅದೆಂದರೆ ಮೂಲ ವರ್ಸಸ್ ವಲಸಿಗ ಎನ್ನುವುದು. ಪಕ್ಷದೊಳಗೆ ಹಿರಿಯ ಶಾಸಕರಾಗಿದ್ದರೂ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಅಧಿಕಾರ ಸಿಕ್ಕಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಹೆಗ್ಗಳಿಕೆ ಪಿಎಂಎನ್‌ಗಿದೆ.
ಆದರೆ ಕೆಲ ವರ್ಷದ ಹಿಂದಷ್ಟೇ ಕಾಂಗ್ರೆಸ್ ಸೇರಿದ ರಮೇಶ ಬಂಡಿಸಿದ್ದೇಗೌಡ ಮೊದಲ ಬಾರಿ ಸೋಲು ಕಂಡು, ಎರಡನೇ ಸಲ ಆಯ್ಕೆಯಾದರು. ಅದಾಗಲೇ ಚೆಸ್ಕಾಂ ಅಧ್ಯಕ್ಷ ಸ್ಥಾನ ಒಲಿದುಬಂದಿದೆ. ಮಾತ್ರವಲ್ಲದೆ ಪ್ರತಿಷ್ಠಿತ ಎಂಡಿಸಿಸಿ ಬ್ಯಾಂಕ್ ನಾಮನಿರ್ದೇಶನವೂ ಸಿಕ್ಕಿತು. ಇದಲ್ಲದೆ ಮನ್‌ಮುಲ್ ಅಧ್ಯಕ್ಷ ಸ್ಥಾನವನ್ನು ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುವಲ್ಲಿಯೂ ಸಫಲರಾದರು. ಇದು ಸಹಜವಾಗಿಯೇ ಅತೃಪ್ತಿಗೆ ಕಾರಣವಾಗಿದೆ ಎನ್ನುವ ಗುಸುಗುಸು ಮಾತಿದೆ ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ.
ಇದಲ್ಲದೆ, ಕೆಆರ್‌ಎಸ್ ಜಲಾಶಯದಿಂದ ಕೆರೆಗಳಿಗೆ ನೀರು ತುಂಬಿಸುವ ವಿಚಾರವೂ ಇಬ್ಬರ ನಡುವೆ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವುದಿದೆ. ಮಳೆಯಾಶ್ರಿತ ಪ್ರದೇಶವೂ ಆಗಿರುವ ಮಳವಳ್ಳಿ ತಾಲೂಕಿನಲ್ಲಿ ಕೆರೆ ಕಟ್ಟೆ ತುಂಬಿಸುವ ವಿಚಾರದಲ್ಲಿ ಪೂರಕವಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಪಿ.ಎ.ನರೇಂದ್ರಸ್ವಾಮಿ ಕೆಲ ದಿನದ ಹಿಂದೆ ಮಂಡ್ಯ, ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲೆ ಪರಿಶೀಲನೆ ನಡೆಸುವುದರ ಜತೆಗೆ ಮಳವಳ್ಳಿ ತಾಲೂಕಿನ ಕೆರೆ ಕಟ್ಟೆ ತುಂಬಿಸಲು ಭಗೀರಥ ಪ್ರಯತ್ನ ಮಾಡಿದ್ದರು.

ಸಚಿವ ಸ್ಥಾನಕ್ಕೆ ಒತ್ತಾಯ
ಪಕ್ಷದೊಳಗೆ ಹಿರಿತನ ಹೊಂದಿದ್ದರೂ ಅಧಿಕಾರದಿಂದ ವಂಚಿತರಾಗಿರುವ ಪಿ.ಎಂ.ನರೇಂದ್ರಸ್ವಾಮಿಗೆ ಸಚಿವ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಬ್ಯಾಟಿಂಗ್ ಮಾಡುತ್ತಲೇ ಇದ್ದಾರೆ. ಲೋಕಸಭಾ ಚುನಾವಣೆ ಬಳಿಕ ಸಚಿವ ಸ್ಥಾನ ಸಿಗಲಿದೆ ಎನ್ನುವ ಚರ್ಚೆ ಹಿಂದಿನಿಂದಲೂ ಇತ್ತು. ಆದರೆ ಚುನಾವಣೆ ಮುಗಿದು ತಿಂಗಳುಗಳೇ ಕಳೆಯುತ್ತಿದ್ದರೂ ಅಂತಹ ಬೆಳವಣಿಗೆ ಕಾಣುತ್ತಿಲ್ಲ. ಈ ನಡುವೆ ಅ.16ರಂದು ಮಳವಳ್ಳಿ ತಾಲೂಕು ಟಿ.ಕೆ.ಹಳ್ಳಿಗೆ ಕಾರ್ಯಕ್ರಮದ ಸಮಯದಲ್ಲಿಯೇ ಪಿಎಂಎನ್‌ಗೆ ಸಚಿವ ಸ್ಥಾನ ನೀಡುವಂತೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲಿಗರು ಬಹಿರಂಗವಾಗಿಯೇ ಮನವಿ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net