ಚಳಿಗೆ ಕಾಡುತ್ತಿದೆ ಅನಾರೋಗ್ಯ

FotoJet (1)
Published on

ಹೆಚ್ಚುತ್ತಿದೆ ಶೀತ, ಕೆಮ್ಮು, ಜ್ವರ ಮುಂಜಾಗ್ರತೆಗೆ ಆರೋಗ್ಯ ಇಲಾಖೆ ಸಲಹೆ

ಚಿಕ್ಕಬಳ್ಳಾಪುರ:ಹವಾಮಾನ ವೈಪರೀತ್ಯದಿಂದ ಹಲವು ದಿನಗಳಿಂದಲೂ ವಾತಾವರಣದಲ್ಲಿ ಚಳಿ ಹೆಚ್ಚುತ್ತಿರುವ ನಡುವೆ ಜನರಲ್ಲಿ ಅನಾರೋಗ್ಯ ಸಮಸ್ಯೆಯೂ ಹೆಚ್ಚಾಗುತ್ತಿದೆ.

ಹೌದು! ಒಂದು ವಾರದಿಂದ ಕೆಮ್ಮು, ನೆಗಡಿ, ತಲೆನೋವು, ವಿಷಮಶೀತ ಜ್ವರದ ಪ್ರಕರಣ ಹೆಚ್ಚಾಗಿವೆ. ಅದರಲ್ಲೂ ನ್ಯುಮೋನಿಯಾ ಸಮಸ್ಯೆ ಬಾಧಿಸುತ್ತಿದೆ. ಇದಕ್ಕೆ ಮುಂಜಾಗ್ರತಾ ಕ್ರಮ ಪಾಲಿಸಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ವೃದ್ಧರು, ಮಕ್ಕಳಲ್ಲಿ ಹೆಚ್ಚು: ಜಡಿ ಮಳೆ, ಮಂಜಿನ ವಾತಾವರಣದಿಂದಾಗಿ ವೃದ್ಧರು, ಮಕ್ಕಳಲ್ಲಿ ಹೆಚ್ಚಿನ ಸಮಸ್ಯೆ ಕಂಡುಬರುತ್ತಿವೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲಾಗುತ್ತಿದೆ. ಅಸ್ತಮಾ, ನ್ಯುಮೋನಿಯಾ, ವಿಷಮಶೀತ ಜ್ವರಕ್ಕೆ ವೈದ್ಯರು ರಕ್ತಪರೀಕ್ಷೆಗೆ ಶಿಫಾರಸು ಮಾಡುತ್ತಿದ್ದು, ಹೊರಗಡೆ ಓಡಾಡದಿರಲು ಸೂಚಿಸುತ್ತಿದ್ದಾರೆ. ವಾರದಿಂದಲೂ ಆಸ್ಪತ್ರೆಗೆ ತೆರಳುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಇದೇ ವಾತಾವರಣ ಮುಂದುವರಿದರೆ ರೋಗಿಗಳ ಪ್ರಮಾಣ ಮತ್ತಷ್ಟು ಅಧಿಕವಾಗಲಿದೆ ಎಂದು ಹೇಳಲಾಗುತ್ತಿದೆ.

ಹರಡುತ್ತಿದೆ ಸೋಂಕು

ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪೈಕಿ ಕೆಮ್ಮು ಮತ್ತು ನೆಗಡಿ ಸೇರಿ ಇತರ ಸೋಂಕುಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಇತ್ತೀಚಿಗಿನ ದಿನಗಳಲ್ಲಿ ತರಗತಿಗೆ ಗೈರಾಗುವವರ ಸಂಖ್ಯೆಯು ಹೆಚ್ಚುತ್ತಿದೆ.

ಫೆಂಗಲ್ ಪ್ರಭಾವ

ಜಿಲ್ಲೆಯಾದ್ಯಂತ ನಿರಂತರವಾಗಿ ಜಡಿ ಮಳೆ ಸುರಿಯುತ್ತಿದ್ದು, ಸೋಮವಾರ ಸಹ ಬೆಳಗ್ಗೆಯಿಂದ ನಡುರಾತ್ರಿಯವರೆಗೆ ಹನಿಗಳ ಸಿಂಚನವಾಗುತ್ತಿತ್ತು. ಆಗಾಗ ಜೋರು ಮಳೆ, ಜೋರು ಗಾಳಿ ಕಂಡು ಬಂತು. ಈ ವಾತಾವರಣದ ನಡುವೆ ಪ್ರಮುಖ ರಸ್ತೆಗಳಲ್ಲಿ ಜನರ ಸಂಚಾರವೂ ವಿರಳವಾಗಿತ್ತು. ಮಳೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು.

ನ್ಯುಮೋನಿಯಾ ನಿಯಂತ್ರಣ ಹೇಗೆ?

ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದಲೂ ಶೀತದ ವಾತಾವರಣ ಇರುವುದರಿಂದ ನ್ಯುಮೋನಿಯಾ ಮತ್ತು ಇತರ ಉಸಿರಾಟದ ಕಾಯಿಲೆಗಳು ಹೆಚ್ಚಿಗೆ ಹರಡುವ ಸಾಧ್ಯತೆ ಇದ್ದು, ಮುಂಜಾನೆ ಮತ್ತು ಸಂಜೆ ಹೊರಗಡೆ ಹೋಗುವಾಗ ಮಾಸ್ಕ್ ಸ್ವೆಟರ್, ಟೋಪಿ ಧರಿಸಬೇಕು. ಕುಡಿಯಲು ಬಿಸಿ ನೀರು ಮತ್ತು ಬಿಸಿ ಆಹಾರವನ್ನು ಸೇವಿಸಬೇಕು. ಕೆಮ್ಮುವಾಗ ಇಲ್ಲವೇ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಪ್ಲೂ ಜ್ವರದ ಲಕ್ಷಣಗಳು ಕಂಡು ಬಂದ ತಕ್ಷಣ ಹತ್ತಿರದ ಆಸ್ಪತ್ರೆಯ ವೈದ್ಯರಲ್ಲಿ ತೋರಿಸಿಕೊಳ್ಳುವುದು. ಸ್ವಯಂ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ತಿಳಿಸಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದು ಹಾಗೂ ಚಳಿ ಇರುವುದರಿಂದ ಡಿ.3ರಂದು ಶಾಲಾ ಕಾಲೇಜುಗಳು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸೋಮವಾರ ಸಹ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net