

ಸಿದ್ದಾಪುರ: ಗಣೇಶ ಚೌತಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಡಕೆ ಕೊಳೆ, ನಾಟಿ ಮಾಡಿದ ಭತ್ತದ ಸಸಿಗಳು ಜಲಾವೃತಗೊಂಡಿರುವುದರಿಂದ ರೈತರಲ್ಲಿ ಹಬ್ಬದ ಉತ್ಸಾಹ ಹೆಚ್ಚು ಕಂಡುಬರುತ್ತಿಲ್ಲ.
ಗೌರಿ- ಗಣೇಶ ಹಬ್ಬ ಶ್ರದ್ಧಾ ಭಕ್ತಿ ಆಚರಣೆಗೆ ಮಾತ್ರ ಸೀಮಿತವಾದಂತೆ ಕಂಡು ಬರುತ್ತಿದೆಯೇ ಹೊರತು ಹಲವು ವರ್ಷಗಳ ಹಿಂದೆ ಇದ್ದ ಉತ್ಸಾಹ ಯಾರಲ್ಲೂ ಕಂಡುಬರುತ್ತಿಲ್ಲ.
ತಾಲೂಕಿನಲ್ಲಿ ಈ ವರ್ಷ 168 ಸ್ಥಳಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಪಟ್ಟಣದಲ್ಲಿ 14 ಹಾಗೂ ಗ್ರಾಮೀಣ ಭಾಗದ 154 ಕಡೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲು ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಸಿದ್ಧತೆ ನಡೆಸುತ್ತಿದ್ದಾರೆ.
ತರಕಾರಿ, ಹಣ್ಣು-ಹೂವಿನ ಬೆಲೆ ಗಗನಕ್ಕೆ: ವಿಪರೀತ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳೆಲ್ಲ ವಿವಿಧ ಕಾರಣಗಳಿಂದ ಹಾನಿ ಅನುಭವಿಸಿದ್ದಾರೆ. ಈ ಸಂದರ್ಭದಲ್ಲೇ ತರಕಾರಿ, ಹಣ್ಣು, ಹೂವಿನ ಬೆಲೆ ಗಗನಕ್ಕೆ ಏರಿದ್ದರಿಂದ ಗಣೇಶ ಚೌತಿಗೆ ಬೆಲೆ ಏರಿಕೆಯ ಬಿಸಿ ಜನರನ್ನು ಕಾಡುತ್ತಿದೆ.
ತಾಲೂಕಿನಲ್ಲಿ ಒಂದು ಅಂದಾಜಿನ ಪ್ರಕಾರ ಎರಡು ನೂರಕ್ಕೂ ಹೆಚ್ಚು ಕಲಾವಿದರು ಕಳೆದ ಒಂದು ತಿಂಗಳಿನಿಂದ ಗಣೇಶ ಮೂರ್ತಿಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಶುಕ್ರವಾರ ಗೌರಿ ತದಿಗೆಯ ದಿನದಂದು ಸಾರ್ವಜನಿಕ ಗಣೇಶೋತ್ಸವದವರು, ಮನೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವವರು ಮೂರ್ತಿ ತಯಾರಿಸುವವರಿಂದ ಮೂರ್ತಿಯನ್ನು ತೆಗದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹಲವು ವಿಘ್ನಗಳ ನಡುವೆ ವಿಘ್ನವಿನಾಶಕ ವಿನಾಯಕನ ಹಬ್ಬವನ್ನು ಭಕ್ತಿಯಿಂದ ಆಚರಿಸುವುದಕ್ಕೆ ಜನರು ಮುಂದಾಗುತ್ತಿದ್ದಾರೆ.