

ಮೈಸೂರು: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ನಗರದ ಜನತೆಗೆ ಸೋಮವಾರ ಸುರಿದ ಮಳೆ ತಂಪೆರೆಯಿತು.
ಬೇಸಿಗೆ ಆರಂಭಕ್ಕೂ ಮುನ್ನವೇ ತಾಪಮಾನ ಏರಿಕೆಯಿಂದ ಸೆಕೆ ಹೆಚ್ಚಾಗಿತ್ತು. ಬಿಸಿಲಿನ ಝಳದಿಂದ 32ರಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗಿತ್ತು. ರಾತ್ರಿಯ ಉಷ್ಣಾಂಶದಲ್ಲಿಯೂ ಏರಿಕೆ ಕಂಡಿತ್ತು.
ಆದರೆ ಸೋಮವಾರ ಮುಂಜಾನೆ ವರ್ಷದ ಮೊದಲ ತುಂತುರು ಮಳೆ ಆಗಿದ್ದರಿಂದ ಕೊಂಚ ಸೆಕೆ ತಗ್ಗಿತು. ಅಲ್ಲದೆ, ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇದ್ದುದ್ದರಿಂದ ವಾತಾವರಣದಲ್ಲಿಯೂ ತಂಪು ಆವರಿಸಿತ್ತು. ಆದರೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮತ್ತೆ ಕೊಂಚ ಜೋರಾಗಿಯೇ 10 ರಿಂದ 15 ನಿಮಿಷ ಕಾಲ ಮಳೆ ಸುರಿದು ರಸ್ತೆಯಲ್ಲಿ ನೀರು ಹರಿಯಿತು.
ಹೀಗಾಗಿ ವಾತಾವರಣದಲ್ಲಿ ತಂಪು ಆವರಿಸಿ 27 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಇಳಿದಿತ್ತು. ಮಧ್ಯಾಹ್ನ ಏಕಾಏಕಿ ದಿಢೀರ್ ಸುರಿದ ಮಳೆಯಿಂದ ಯಾವುದೇ ತಯಾರಿ ಇಲ್ಲದೇ ಹೊರಗೆ ಹೊರಟವರು, ರಸ್ತೆ ಬದಿ ವ್ಯಾಪಾರಿಗಳು ದ್ವಿಚಕ್ರ ವಾಹನ ಸವಾರರು ಕೊಂಚ ಪರದಾಡುವಂತಾಯಿತು.