ವರ್ತಕರ, ದಲ್ಲಾಳಿಗಳ ಶೀತಲಸಮತ ಇತ್ಯರ್ಥ

Published on

ಬಳ್ಳಾರಿ : ಕಳೆದ ಹಲವು ದಿನಗಳ ಹಿಂದ ದಲ್ಲಾಳಿ ಹಾಗೂ ವರ್ತಕರ ನಡುವಿನ ವಹಿವಾಟು ನಡುವೆ ಇದ್ದ ಶೀತಲಸಮರ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಇತ್ಯರ್ಥಗೊಂಡು ವ್ಯಾಪಾರ ವಹಿವಾಟು ಆರಂಭವಾಯಿತು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಸಭಾಂಗಣದಲ್ಲಿ ಕಾರ್ಯದರ್ಶಿ ನಂಜುಂಡಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಲ್ಲಾಳಿ ಹಾಗೂ ವರ್ತಕರ ಸಭೆಯಲ್ಲಿ ಆರಂಭದಲ್ಲಿ ಎರಡು ಗುಂಪಿನವರು ವಾದಮಾಡಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ ವರ್ತಕರ ಗುಂಪು ಸಭೆಯಿಂದ ಹೊರನಡೆದರು. ಇಬ್ಬರ ಗುಂಪಿನ ನಡುವೆ ಒಮ್ಮತ ಮೂಡಿಸುವಲ್ಲಿ ಕಾರ್ಯದರ್ಶಿ ವಿಫಲರಾದರು.

ಬಳಿಕ ಎಪಿಎಂಸಿ ಅಧ್ಯಕ್ಷ ನಾಗರಾಜ ಕಟ್ಟೆಮನಿ ಅವರು ಸಭೆಗೆ ಆಗಮಿಸಿ ಎರಡು ಗುಂಪಿನೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಆಲಿಸಿದರು. ನಂತರ ಎರಡು ಗುಂಪಿನವರ ಪದಾಧಿಕಾರಿಗಳನ್ನು ಮನವೊಲಿಸಿ ಯಥಾ ಸ್ಥಿತಿಯಂತೆ ಗುರುವಾರ ಮಧ್ಯಾಹ್ನದಿಂದ ವ್ಯಾಪಾರ ವಹಿವಾಟು ನಡೆಸುವಲ್ಲಿ ಯಶ್ವಸಿಯಾದರು.

ಸಭೆಯಲ್ಲಿ ವರ್ತಕರ ಗುಂಪಿನಯೊಬ್ಬರು ಮಾತನಾಡಿ, ಕೆಲ ದಿನದ ಹಿಂದೆ ಉತ್ತಮ ದರ್ಜೆಯ ಜತೆಗೆ ಕಳಪೆ ಗುಣಮಟ್ಟದ ಧಾನ್ಯಗಳನ್ನು ಸೇರಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ವರ್ತಕರಿಗೆ ನಷ್ಟವಾಗುತ್ತಿದೆ ಎಂದು ಪ್ರಸ್ತಾಪಿಸಿದರು.

ದಲ್ಲಾಳಿ ಸಂಘದ ಅಧ್ಯಕ್ಷ ಪಿ.ಚಿದಾನಂದಪ್ಪ ಪ್ರತಿಕ್ರಿಯಿಸಿ, ಕಳಪೆ ಗುಣಮಟ್ಟದ ಧಾನ್ಯವನ್ನು ಉತ್ತಮ ದರ್ಜೆಯ ಜತೆಗೆ ಸೇರಿಸಿ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಹೇಳುತ್ತಿದ್ದಿರಿ. ಹಾಗದರೆ, ದಿನಾಲೂ ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ನೀವೆ ಚೀಲಗಳನ್ನು ತಂದು ತೂಕ ಹಾಕಿಸಿಕೊಂಡು ತುಂಬಿಕೊಂಡು ಹೋದರೆ ಯಾವ ಸಮಸ್ಯೆಯಿಲ್ಲ. ಅದು ಬಿಟ್ಟು ಟೆಂಡರ್ ಮುಗಿದರೂ ಕೂಡ ಅಂಗಡಿಗಳತ್ತ ಬಾರದೆ ಈ ಆರೋಪ ಮಾಡಿದರೆ ಒಳ್ಳೆಯದಲ್ಲ ಎಂದು ವರ್ತಕರಿಗೆ ಏರುಧ್ವನಿಯಲ್ಲಿ ಉತ್ತರಿಸಿದರು. ಅಲ್ಲದೆ, ವ್ಯಾಪಾರ ನಡೆದ ದಿನವೇ ವರ್ತಕರು ದಲ್ಲಾಳರಿಗೆ ನೀಡಬೇಕಿದ್ದ ಹಣ ನೀಡದೆ ತಿಂಗಳಗಟ್ಟಲೇ ನೀಡುವುದಿಲ್ಲ. ದಲ್ಲಾಳಿಗಳು ಮಾತ್ರ ಬಡ್ಡಿಗೆ ಹಣ ತಂದು ರೈತರಿಗೆ ನೀಡಬೇಕು, ನೀವು ಮಾತ್ರ ವಾರ ಅಥವಾ ತಿಂಗಳದ ಬಳಿಕ ನೀಡುತ್ತಿರಿ. ಆ ವಿಷಯಕ್ಕೆ ಮಾತ್ರ ಯಾರು ಮಾತನಾಡುವುದಿಲ್ಲ ವರ್ತಕರನ್ನು ಪ್ರಶ್ನಿಸಿದರು. ಕಳೆದ ಕೆಲ ತಿಂಗಳ ಹಿಂದೆ ವರ್ತಕರೊಬ್ಬರು ಮೂರು ಕೋಟಿ ರೂ. ಅಧಿಕ ಶೇಂಗಾ ಖರೀದಿಸಿ ಪರಾರಿಯಾಗಿದ್ದರು. ಆಗ ಏಕೆ ವರ್ತಕರು ಯಾರೋ ಆ ವಿಷಯದ ಬಗ್ಗೆ ಗಮನಹರಿಸಿಲ್ಲ ಎಂದು ಅಕ್ರೋಶಭರಿತದರು.

ಬಾಕ್ಸ್ : ವರ್ತಕರಿಂದ ಸಂಗ್ರಹಿಸಬೇಕಿದ್ದ ಶೇ 2% ಕಮಿಷನ್ ಹಣವನ್ನು ರೈತರಿಂದ ಸಂಗ್ರಹಿಸಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ದಲ್ಲಾಳಿಯೊಬ್ಬರು ಸಭೆಯಲ್ಲಿ ಹೇಳಿದರು. ಇದಕ್ಕೆ ಕೆಲ ದಲ್ಲಾಳಿಗಳು ಈ ವಿಷಯ ಪ್ರಸ್ತಾಪ ಬೇಡ ಎಂಬುದಾಗಿ ತಡೆದರು. ವಿಷಯ ಆಲಿಸಿದ ಎಪಿಎಂಸಿ ಕಾರ್ಯದರ್ಶಿ ನಂಜುಂಡ ಸ್ವಾಮಿ ಮೌನವಾಗಿ ಉಳಿದರು.

ಏನಿದು ಘಟನೆ : ಕಳೆದ ವಾರ ವ್ಯಾಪಾರ ವಹಿವಾಟಿನಲ್ಲಿ ಉತ್ತಮ ದರ್ಜೆಯ ಶೇಂಗಾದ ಜತೆ ಸಾಮಾನ್ಯ ದರ್ಜೆಯ ಶೇಂಗಾವನ್ನು ದಲ್ಲಾಳಿಯೊಬ್ಬರು ಸೇರಿಸಿದ್ದಾರೆ ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಆರೋಪಿಸಿ ಆ ಅಂಗಡಿಯನ್ನು ಹತ್ತು ದಿನಗಳವರೆಗೆ ಬಂದ್ ಮಾಡಬೇಕು ಎಂದು ವರ್ತಕರ ಗುಂಪು ಆಗ್ರಹಿಸಿತ್ತು. ಅಲ್ಲದೆ, ಆ ವಾರದ ವ್ಯಾಪಾರದ ವಹಿವಾಟಿನ ದಲ್ಲಾಳಿಗಳಿಗೆ ನೀಡಬೇಕಿದ್ದ ಹಣವನ್ನು ನೀಡುವುದಿಲ್ಲ ಎಂದು ವರ್ತಕರು ಪಟ್ಟು ಹಿಡಿದಿದ್ದರು. ಆದ್ದರಿಂದ, ಬುಧವಾರ ಇಡಿ ದಿನ ಎಪಿಎಂಸಿಯಲ್ಲಿ ವಹಿವಾಟು ಸ್ಥಗಿತಗೊಂಡಿತು. ಆದ್ದರಿಂದ, ವರ್ತಕರ ಹಾಗೂ ದಲ್ಲಾಳಿಗಳ ನಡುವೆ ಎಪಿಎಂಸಿ ಕಾರ್ಯದರ್ಶಿ ಸಭೆ ಆಯೋಜಿಸಿದ್ದರು.

ಕೋಟ್... ದಲ್ಲಾಳಿಗಳು ಕಳಪೆ ಮಟ್ಟದ ಶೇಂಗಾ ಮಾರಾಟ ಮಾಡುವುದರ ಬಗ್ಗೆ ಯಾವುದೇ ಲಿಖಿತ ಪತ್ರದಲ್ಲಿ ವರ್ತಕರು ದೂರು ನೀಡಿಲ್ಲ. ಎರಡು ಗುಂಪುಗಳನ್ನು ಕರೆಸಿ ಚರ್ಚಿಸಲಾಗಿದೆ ಯಥಾಸ್ಥಿತಿಯಂತೆ ವ್ಯಾಪಾರ ವಹಿವಾಟು ನಡೆಯಿತು.

- ನಂಜುಂಡ ಸ್ವಾಮಿ, ಕಾರ್ಯದರ್ಶಿ, ಎಪಿಎಂಸಿ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net