

ಆಯನೂರು: ಮಕ್ಕಳ ತಜ್ಞನಾಗಿ ನಾನು ಆರು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಔಷಧಗಳೇ ಸಿಗುತ್ತಿಲ್ಲ. ಮಕ್ಕಳಿಗೆ ಬೇಕಾದ ಸಾಮಾನ್ಯ ಶೀತ- ಜ್ವರ, ಮೂಗಿನ ಡ್ರಾಪ್ಸ್, ಬಿಕಾಂಪ್ಲೆಕ್ಸ್, ಹೊಟ್ಟೆ ನೋವಿನ ಮಾತ್ರೆಗಳೂ ಸಿಗುತ್ತಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡುವುದಾದರೂ ಹೇಗೆ..?
ಹೀಗೆ ಆಯನೂರು ಸಮುದಾಯ ಕೇಂದ್ರದ ಅವ್ಯವಸ್ಥೆಯನ್ನು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹಾಗೂ ಡಿಎಚ್‌ಇ ಡಾ. ರಾಜೇಶ್ ಸುರಗಿಹಳ್ಳಿ ಎದುರು ಎಳೆಎಳೆಯಾಗಿ ಬಿಡಿಸಿಟ್ಟಿದ್ದು ಕೇಂದ್ರದ ಮಕ್ಕಳ ತಜ್ಞ ಡಾ. ಮಲ್ಲಿಕಾರ್ಜುನ್.
ಮಂಗಳವಾರ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ವೈದ್ಯ, ಆಸ್ಪತ್ರೆಯಲ್ಲಿ ಮಾಸಿಕ ಸಭೆ ನಡೆಸಿ ಅಲ್ಲಿ ನಮ್ಮಲ್ಲಿನ ಸಮಸ್ಯೆಗಳು, ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಬೇಕು. ಕಳೆದ ಎರಡು ವರ್ಷಗಳಿಂದ ಯಾವುದೇ ಸಭೆ ನಡೆದಿಲ್ಲ. ಇದರ ಬಗ್ಗೆ ನಾನು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಮಕ್ಕಳಿಗೆ, ರೋಗಿಗಳಿಗೆ ಔಷಧಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವ ಜವಾಬ್ದಾರಿ ಆಡಳಿತ ಮಂಡಳಿಯದ್ದು. ಔಷಧಗಳು ಖಾಲಿಯಾಗುವ ಮುಂಚೆ ಮೀಟಿಂಗ್ ಮಾಡುವ ಮೂಲಕ ಹೆರಿಗೆಗೆ, ಜನರಲ್ ಹಾಗೂ ಮಕ್ಕಳಿಗೆ ಬೇಕಾದ ಔಷಧ ತರಿಸಬೇಕು. ಯಾವ ಔಷಧ ಬೇಕು ಎಂದು ಫಾರ್ಮಸಿಸ್ಟ್ ತಿಳಿಸಬೇಕು. ಈ ಪ್ರಕ್ರಿಯೆ ಎರಡು ವರ್ಷಗಳಿಂದ ನಡೆದಿಲ್ಲ. ಜನರು ಬಂದು ಗಲಾಟೆ ನಡೆಸಿದಾಗ ತರಿಸುವ ವ್ಯವಸ್ಥೆ ಇದೆ. ಹಣವಿದ್ದರೂ ಔಷಧಗಳನ್ನು ಖರೀದಿಸುವ ಕೆಲಸ ಆಗುತ್ತಿಲ್ಲ. ಕೇಂದ್ರದಲ್ಲಿ ಕೆಲಸ ಮಾಡಲು ಇಕ್ಕಟ್ಟಿನ ಸನ್ನಿವೇಶ ಸೃಷ್ಟಿಯಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಇದಕ್ಕೆ ಉತ್ತರಿಸಿದ ಡಿಎಚ್‌ಒ, ಕೇಂದ್ರದಲ್ಲಿ ಸಿಗುವಂತಹ ಮೆಡಿಷನ್ ಪಟ್ಟಿ ಮಾಡಿ ನೋಟಿಸ್ ಬೋರ್ಡ್‌ನಲ್ಲಿ ಹಾಕುವಂತೆ, ಆಸ್ಪತ್ರೆಯಲ್ಲಿ ಸಿಗದಂತಹ ಮೆಡಿಷನ್ ಖರೀದಿಗೆ ಅವಕಾಶವಿದ್ದು ಅವಶ್ಯಕತೆ ಇರುವಂತಹ ಮಾತ್ರೆಗಳನ್ನು ಖರೀದಿಸುವಂತೆ ಸೂಚಿಸಿದರು.
ಇಲ್ಲಿನ ಆಂಬುಲೆನ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸುವಂತೆ, ಚಾಲಕರ ಕೊರತೆ ಇದ್ದರೆ ತಿಳಿಸುವಂತೆ ಹೇಳಿದ ಅವರು, ಆಸ್ಪತ್ರೆಯ ಆವರಣದಲ್ಲಿ ಜಾಗ ನೀಡಿದರೆ ಇಲ್ಲಿಯೇ ಜನೌಷಧ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದರು. ಆಯನೂರಿನಲ್ಲಿ ಒಂದು ಆಯುರ್ವೇದ ಆಸ್ಪತ್ರೆ ತೆರೆಯುವ ಆಲೋಚನೆ ಇದ್ದು ಜಾಗ ನೀಡಿದರೆ 5 ವೈದ್ಯರ, 10 ಹಾಸಿಗೆಯ ಒಂದು ಆಸ್ಪತ್ರೆ ತೆರೆಯಾಗುವುದು ಎಂದು ಭರವಸೆ ನೀಡಿದರು.
ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಆಸ್ಪತ್ರೆಯ ಬಗ್ಗೆ ಜನರಿಂದ ಅನೇಕ ದೂರುಗಳು ಬಂದಿವೆ. ನಾನು ಮೊದಲು ಶಾಸಕಿಯಾಗಿದ್ದಾಗ ಯಾವುದೇ ಸಮಸ್ಯೆಗಳಿರಲಿಲ್ಲ. ಸಿಬ್ಬಂದಿಯಲ್ಲಿ ಹೊಂದಾಣಿಕೆ ಕೊರತೆ ಕಂಡು ಬರುತ್ತಿದೆ. ಆಸ್ಪತ್ರೆಯಲ್ಲಿ ರಾಜಕಾರಣ ಬೇಡ. ನಿಮ್ಮ ಉದ್ದೇಶ ಜನರಿಗೆ ಸೇವೆ ಕೊಡುವುದು ಮಾತ್ರ. ಮೇಲ್ನೊಟಕ್ಕೆ ಇಲ್ಲಿನ ಆಡಳಿತ ವ್ಯವಸ್ಥೆ ಸರಿಯಿಲ್ಲ. ಇದರಿಂದ ರೋಗಿಗಳು ನರಳುವಂತಾಗಬಾರದು ಎಂದು ಎಚ್ಚರಿಕೆ ನೀಡಿದರು.
ಎಲ್ಲ ಮಾತ್ರೆಗಳು ಕೇಂದ್ರದಲ್ಲಿದ್ದು ಕಾರಿಡಾರ್‌ನಲ್ಲಿ ನಿಂತು ಹಾಜರಿ ಪುಸ್ತಕ ಕೇಳುವುದು, ತೊಂದರೆ ಕೊಡುವುದು, ಸಿಬ್ಬಂದಿ ಜತೆ ಗಲಾಟೆ ಮಾಡುತ್ತಾರೆ. ಈ ಬಗ್ಗೆ ದೂರು ನೀಡಲಾಗಿದೆ. ರಾತ್ರಿ ಪಾಳಿಯ ವೈದ್ಯರು ಕೇಂದ್ರದಲ್ಲಿ ಇರುತ್ತಾರೆ ಎಂದು ಆಡಳಿತಾಧಿಕಾರಿ ಡಾ. ಶಿಲ್ಪಾ ಹೇಳಿದರು.
ಟಿಎಚ್‌ಒ ಡಾ. ಚಂದ್ರಶೇಖರ್, ಆರ್‌ಸಿಎಚ್ ನಾಗರಾಜ್ ನಾಯ್ಕ, ಎನ್‌ಎಚ್‌ಒ ಮೋಹನ್, ಆಯನೂರು ಗ್ರಾಪಂ ಅಧ್ಯಕ್ಷೆ ಪದ್ಮಿನಿ, ಮಾಜಿ ಅಧ್ಯಕ್ಷೆ ಲೀಲಾವತಿ, ರಕ್ಷಾ ಸಮಿತಿ ಸದಸ್ಯರಾದ ಸೈಯದ್ ಅಹಮದ್, ಶಿವಕುಮಾರ್, ನಾರಾಯಣ ಗೌಡ, ನಾಗರಾಜ್, ಸಕ್ರಿಬಾಯಿ, ಗ್ರಾಮಸ್ಥರಾದ ಬಸಪ್ಪ ಗೌಡ, ಕರಿಯಲ್ಲಪ್ಪ, ಅವಿನಾಶ್, ಲೋಕೇಶಪ್ಪ, ಲಕ್ಷ್ಮಣಣಪ್ಪ, ನಾರಾಯಣ ಗೌಡ, ರಂಗನಾಥ ಇತರರಿದ್ದರು. ಸಭೆಯಲ್ಲಿ ಸಾರ್ವಜನಿಕರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ, ಕೂಡಲೆ ಆಸ್ಪತ್ರೆ ಆಡಳಿತಾಧಿಕಾರಿ ಬದಲಾಯಿಸಿಕೊಡಿ ಎಂದು ಪಟ್ಟು ಹಿಡಿದರು.