

ತುಮಕೂರು : ಕರೊನಾ 2ನೇ ಅಲೆ ಹಿನ್ನೆಲೆಯಲ್ಲಿ 4 ತಿಂಗಳಿಂದ ಬಾಗಿಲು ಮುಚ್ಚಿದ್ದ ಕಾಲೇಜುಗಳಲ್ಲಿ ಸೋಮವಾರ ವಿದ್ಯಾರ್ಥಿಗಳ ಕಲರವ ಕೇಳಿಬಂತು. ಆನ್‌ಲೈನ್ ಜತೆಗೆ ಆಫ್‌ಲೈನ್ ತರಗತಿಗಳು ನಡೆದಿದ್ದು ಮೊದಲ ದಿನ ಶೇ.30 ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಹಾಜರಾಗಿದ್ದರು.
ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯ 93 ಕಾಲೇಜುಗಳಲ್ಲಿ ಭೌತಿಕ ತರಗತಿಗಳಿಗೆ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಹಾಜರಾಗಿದ್ದು ವಿಶೇಷವಾಗಿತ್ತು. ಆನ್‌ಲೈನ್ ಪಾಠ ಕೇಳಲು ಮೊಬೈಲ್, ಲ್ಯಾಪ್‌ಟ್ಯಾಪ್‌ಗೆ ಮೊರೆ ಹೋಗಿದ್ದ ವಿದ್ಯಾರ್ಥಿಗಳು ಆಫ್‌ಲೈನ್ ತರಗತಿಗಳು ಶುರುವಾಗುವುದನ್ನೇ ಕಾಯುತ್ತಿದ್ದರು. ಕರೊನಾ ಲಸಿಕೆ ಪಡೆದು ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹಾಜರಾಗಲು ಅವಕಾಶವಿದ್ದು ಭೌತಿಕ ತರಗತಿಗಳು ಪ್ರಾರಂಭದೊಂದಿಗೆ ಶೈಕ್ಷಣಿಕ ವ್ಯವಸ್ಥೆ ಯಥಾಸ್ಥಿತಿಗೆ ಮರುಳುವಂತಾಯಿತು.
ಶೇ.30ರಷ್ಟು ವಿದ್ಯಾರ್ಥಿಗಳು ಹಾಜರ್: ಮೊದಲ ದಿನ ಶೇ.30 ವಿದ್ಯಾರ್ಥಿಗಳು ಆಫ್‌ಲೈನ್ ತರಗತಿಗಳಿಗೆ ಹಾಜರಾಗಿದ್ದರು. ವಿವಿ ವ್ಯಾಪ್ತಿಯ 93 ಪದವಿ ಕಾಲೇಜುಗಳಲ್ಲಿ 35,580 ಪದವಿ ಹಾಗೂ 3,220 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿ ಒಟ್ಟು 38,800 ವಿದ್ಯಾರ್ಥಿಗಳಿದ್ದು ಮೊದಲ ದಿನ ಕಾಲೇಜಿಗೆ 11,640 ವಿದ್ಯಾರ್ಥಿಗಳು ಆಫ್‌ಲೈನ್ ಪಾಠಗಳನ್ನು ಕೇಳಿದರು. ಶೇ.65 ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಿದ್ದು ಶೇ.5 ವಿದ್ಯಾರ್ಥಿಗಳು ಎರಡೂ ಕ್ಲಾಸ್‌ಗಳಿಗು ಗೈರಾಗಿದ್ದರು.
ವಿವಿ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ ಅವರು ಭೌತಿಕ ತರಗತಿಗಳು ಆರಂಭವಾದ ಹಿನ್ನೆಲೆಯಲ್ಲಿ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಆಫ್‌ಲೈನ್ ಕಡ್ಡಾಯವಲ್ಲ : ಆನ್‌ಲೈನ್ ತರಗತಿಗಳು ಮುಂದುವರೆಯಲಿದ್ದು ಆಫ್ ಲೈನ್ ಕಡ್ಡಾಯವೇನಲ್ಲ. ವಿದ್ಯಾರ್ಥಿನಿಲಯಗಳು ಸಹ ತೆರೆಯಲಿದ್ದು, ಆಫ್‌ಲೈನ್ ತರಗತಿಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚುವ ನಿರೀಕ್ಷೆಯಿದೆ. ಕನಿಷ್ಠ ಶೇ.50ರಷ್ಟು ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗುವ ನಿರೀಕ್ಷೆ ಇದೆ. ಆ.31ರವರೆಗೆ ಪ್ರಸಕ್ತ ಸಾಲಿನ ತರಗತಿಗಳು ನಡೆಯಲಿವೆ.
ಕೋವಿಡ್ ಮಾರ್ಗಸೂಚಿ ಅನ್ವಯ ಕಾಲೇಜುಗಳು ಪುನರಾರಂಭ ಮಾಡಲಾಗಿದೆ. ಮೊದಲ ದಿನ ಶೇ.30ರಷ್ಟು ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗಿದ್ದರು. ಶೇ.65ರಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲೇ ಪಾಠ ಕೇಳಿದ್ದಾರೆ. ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು ಶುಚಿತ್ವಕ್ಕೆ ಒತ್ತುಕೊಡಲಾಗಿದೆ. ಜತೆಗೆ ಶೇ.95ರಷ್ಟು ಲಸಿಕೆಯನ್ನು ವಿದ್ಯಾರ್ಥಿಗಳು, ಸಿಬ್ಬಂದಿ ಪಡೆದಿದ್ದಾರೆ. ಪ್ರೊ.ವೈ.ಎಸ್.ಸಿದ್ದೇಗೌಡ ಕುಲಪತಿ, ತುಮಕೂರು ವಿವಿ