ಗಮನ ಸೆಳೆದ ನಾಣ್ಯಗಳ ಪ್ರದರ್ಶನ

coins
Published on

ಮಡಿಕೇರಿ:

ವಿಶ್ವ ಮ್ಯೂಸಿಯಂ ದಿನದ ಅಂಗವಾಗಿ ಭಾನುವಾರ ಇಲ್ಲಿನ ಐತಿಹಾಸಿಕ ಕೋಟೆ ಆವರಣದಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಏರ್ಪಡಿಸಿದ್ದ ಪ್ರಾಚೀನ ನಾಣ್ಯಗಳ ಪ್ರದರ್ಶನ ಆಸಕ್ತರ ಗಮನ ಸೆಳೆಯಿತು. ಇದಕ್ಕೂ ಮೊದಲು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನಡೆದ ಹುಣಸೂರು ಪಿ.ಕೆ. ಕೇಶವಮೂರ್ತಿ ಅವರ ಸಂಗ್ರಹದ ಪ್ರಾಚೀನ ನಾಣ್ಯಗಳ ಪ್ರದರ್ಶನವನ್ನು ನಗರದ ಹಿರಿಯ ವೈದ್ಯ ಡಾ. ಎಂ.ಜಿ. ಪಾಟ್ಕರ್ ಉದ್ಘಾಟಿಸಿದರು. ಶ್ರೀಮತಿ ಪಾಟ್ಕರ್ ಹಾಗೂ ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ. ರೇಖಾ ಈ ಸಂದರ್ಭ ಇದ್ದರು.

ಇಲ್ಲಿ ಪ್ರದರ್ಶಿಸಲಾದ ಅಪರೂಪದ ಈ ನಾಣ್ಯಗಳನ್ನು ವಿವಿಧೆಡೆಯಿಂದ ಆಗಮಿಸಿದ್ದ 215 ಮಕ್ಕಳು ಸೇರಿದಂತೆ 1,445 ಜನ ವೀಕ್ಷಿಸಿದರು. ಕ್ರಿ.ಪೂ. 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್‌ಮಾರ್ಕ್ ನಾಣ್ಯಗಳಿಂದ ಹಿಡಿದು ಇತ್ತೀಚಿನ ನಾಣ್ಯಗಳವರೆಗಿನ ಸಂಗ್ರಹ ವಿಶೇಷವಾಗಿತ್ತು. ಗ್ರೀಕ್, ರೋಮನ್, ಕುಶಾನರು, ಗುಪ್ತ, ಶಾತವಾಹನ, ಕದಂಬ, ಚೋಳ, ಪಾಂಡ್ಯರ ಕಾಲದ ಅಪರೂಪದ ನಾಣ್ಯಗಳು ಆಕರ್ಷಿಸಿದವು.

ಮೊಘಲ್ ಸಾಮ್ರಾಜ್ಯದ ಅಕ್ಬರ್, ಜಹಂಗೀರ್, ಷಹಜಹಾನ್, ಔರಂಗಜೇಬ್ ಕಾಲದ ನಾಣ್ಯಗಳು, ಮೈಸೂರು, ವಿಜಯಪುರ, ತಿರುವಾಂಕೂರು, ಹೈದರಾಬಾದ್, ಕಛ್, ಬರೋಡ, ಗ್ವಾಲಿಯರ್, ಮೇವಾರ ಮೊದಲಾದ ಭಾರತೀಯ ಸಂಸ್ಥಾನಗಳ ನಾಣ್ಯಗಳು ವೀಕ್ಷಕರ ಮನ ಸೆಳೆದವು.

ನೂರಾರು ದೇಶ, ವಿದೇಶಗಳ ವೈವಿಧ್ಯಮಯ ನಾಣ್ಯ, ನೋಟುಗಳು ಪ್ರದರ್ಶನದಲ್ಲಿದ್ದವು. ತಾಮ್ರ, ಬೆಳ್ಳಿ, ಚಿನ್ನ, ಸೀಸ, ಹಿತ್ತಾಳೆ ಮೊದಲಾದ ಲೋಹಗಳ ಅಮೂಲ್ಯ ಹಾಗೂ ದುಬಾರಿ ಬೆಲೆಯ ನಾಣ್ಯಗಳನ್ನು ವೀಕ್ಷಕರು ಆಶ್ಚರ್ಯದಿಂದ ವೀಕ್ಷಿಸಿದರು. ಜಗತ್ತಿನ ಬೇರೆ ಬೇರೆ ದೇಶಗಳ ಚಿನ್ನದಿಂದ ಮಾಡಿದ ನೋಟುಗಳು ಹಾಗೂ ಇತ್ತೀಚಿನ ಪ್ಲಾಸ್ಟಿಕ್ ನೋಟುಗಳೂ ಇಲ್ಲಿ ಇದ್ದವು. ವಿಚಿತ್ರಾಕಾರದ ನಾಣ್ಯಗಳು ವಿಶೇಷವಾಗಿ ಮಕ್ಕಳನ್ನು ಆಕರ್ಷಿಸಿದವು.

ಹಲವು ಮಕ್ಕಳು ಕುತೂಹಲದಿಂದ ಕೇಶವಮೂರ್ತಿ ಅವರ ಬಳಿ ನಾಣ್ಯಗಳ ಇತಿಹಾಸವನ್ನು ಕೇಳಿ ತಿಳಿದುಕೊಂಡರು. ಹಲವವರು ನಾಣ್ಯಗಳ ಸಂಗ್ರಹ ಹೇಗೆ ಮಾಡುವುದು? ಅವುಗಳು ಯಾವ ಕಾಲದವು? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net