ಕಾಂಗ್ರೆಸ್ಸಿಗರು ಪ್ರಚಾರದ ತೆವಲಿಗೆ ಪ್ರಧಾನಿಯನ್ನು ಟೀಕಿಸುತ್ತಾರೆ

prahlad joshi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸುತ್ತಾರೆ. ಅದೇ ಕಾಂಗ್ರೆಸ್ಸಿಗರು ಪ್ರಚಾರದ ತೆವಲಿಗೆ (ಚಟ) ಪ್ರಧಾನಿಯವರನ್ನು ಟೀಕಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮೋದಿ ಪ್ರಧಾನ ಮಂತ್ರಿ ಅಲ್ಲ. ಪ್ರಚಾರ ಮಂತ್ರಿ ಎಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಕಾಲದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲಿ. ಅವರು ಎಐಸಿಸಿ ಅಧ್ಯಕ್ಷರಾಗುವಲ್ಲಿ ಎಷ್ಟೆಲ್ಲ ತೊಂದರೆ ಎದುರಿಸಿದ್ದಾರೆ ಎಂಬುದು ಗೊತ್ತು ಮಾಡಿಕೊಳ್ಳಲಿ. ಅದೆಲ್ಲ ಬಿಟ್ಟು ಬೇರೆ ಪಕ್ಷದ ಬಗ್ಗೆ ಏನು ಹೇಳುತ್ತೀರಿ ಎಂದು ಗರಂ ಆದರು.

ಕಾಂಗ್ರೆಸ್, ಯಾವಾಗಲೆಲ್ಲ ರಾಹುಲ್ ಗಾಂಧಿ ಅವರನ್ನು ಲಾಂಚ್ ಮಾಡಿದೆಯೋ ಆಗೆಲ್ಲ ಬಿಜೆಪಿಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. 2014ರ ಲೋಕಸಭೆ ಚುನಾವಣೆಯಲ್ಲಿ 273 ಸ್ಥಾನ ಗಳಿಸಿದ್ದರೆ, 2019ರಲ್ಲಿ 303 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳನ್ನು ಗೆಲ್ಲಲಿದೆ. ರಾಹುಲ್ ಗಾಂಧಿ ಎಂಬ ಪ್ರಾಡಕ್ಟ್ ಸರಿಯಾಗಿಲ್ಲ. ಹೀಗಾಗಿ ಅವರು ಅಧಿಕಾರಕ್ಕೆ ಬರುವುದೇ ಇಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ಹೇಳಿಕೆಯಿಂದ ಇದು ಗೊತ್ತಾಗುತ್ತದೆ ಎಂದು ಹೇಳಿದರು.

ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಏ.15 ರಂದು ನಾಮಪತ್ರ ಸಲ್ಲಿಸುತ್ತೇನೆ. ಅಂದು ಬೆಳಗ್ಗೆ 10 ಗಂಟೆಗೆ ಧಾರವಾಡದ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೆರವಣಿಗೆಯ ಮೂಲಕ ಸಾಗಿ ನಾಮಪತ್ರ ಸಲ್ಲಿಸಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಹಲವುನಾಯಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net