

ಜಯಪುರ: ಗುಡ್ಡೇತೋಟ ಗ್ರಾಮದಲ್ಲಿ ಸೀತಾ ನದಿಗೆ ಎಸ್ಟೇಟ್‌ವೊಂದರಿಂದ ಕಾಫಿ ಪಲ್ಪಿಂಗ್ ನೀರು ಹರಿಸುತ್ತಿರುವುದನ್ನು ಪತ್ತೆ ಹಚ್ಚಿದ ಗ್ರಾಮಸ್ಥರು, ಕಂದಾಯ ಇಲಾಖೆ ಅಧಿಕಾರಿಗಳು, ತೋಟದ ಮಾಲೀಕರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ತ್ಯಾಜ್ಯ ನೀರು ಹರಿಸದಂತೆ ತಡೆದರು.
ಕೆಲವು ದಿನಗಳಿಂದ ಆಗಾಗ ಸೀತಾ ನದಿಗೆ ತ್ಯಾಜ್ಯ ನೀರನ್ನು ಹರಿಸಲಾಗುತ್ತಿತ್ತು. ಇದರ ಜಾಡು ಹಿಡಿದು ಸಾಗಿದ ಗುಡ್ಡೇತೋಟ ಗ್ರಾಪಂ ಸದಸ್ಯ ಕೀರ್ತಿರಾಜ್, ಜಯಪುರ ಕಂದಾಯ ನಿರೀಕ್ಷಕ ಸುಧೀರ್, ಗುಡ್ಡೇತೋಟ ಪಿಡಿಒ ಶೋಭಾ, ಪೊಲೀಸರು ಮತ್ತು ಗ್ರಾಮಸ್ಥರಿಗೆ ಎಸ್ಟೇಟ್‌ವೊಂದರಿಂದ ಕಾಫಿ ಪಲ್ಪಿಂಗ್ ನೀರು ಹರಿಸುತ್ತಿರುವುದು ಕಂಡುಬಂದಿತು. ಕೂಡಲೇ ಪಲ್ಪಿಂಗ್ ನೀರು ನದಿಗೆ ಹರಿಸದಂತೆ ತಡೆದರು.
ಎಸ್ಟೇಟಿನ ಕಲುಷಿತ ನೀರು ಸೇರುತ್ತಿರುವ ಸೀತಾ ನದಿ ನೀರನ್ನು, ನದಿ ಸಾಗುವ ಕೌಳಿ, ಹೆಗ್ಗದ್ದೆ, ಮಕ್ಕಿಕೊಪ್ಪ, ಕೂಳೂರು, ಹೆದ್ಸೆ, ಮುಂಡೊಳಲು ಸೇರಿದಂತೆ ನೂರಾರು ಊರುಗಳ ಜನ ಕುಡಿಯುತ್ತಿದ್ದಾರೆ. ಬೇಸಿಗೆಯಾಗಿರುವುದರಿಂದ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ನದಿ ಪಾತ್ರದ ಜನ ಇದೇ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕಲುಷಿತ ನೀರನ್ನು ಸಂಸ್ಕರಿಸಿ ಇಂಗುಗುಂಡಿಗಳಿಗೆ ಹಾಯಿಸಬೇಕು ಎನ್ನುವ ನಿಯಮ ಗಾಳಿಗೆ ತೂರಿರುವ ಎಸ್ಟೇಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಕಾಫಿ ಪಲ್ಪಿಂಗ್ ಘಟಕವನ್ನು ಸೀಜ್ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಜಯಪುರ ವೃತ್ತ ಕಂದಾಯ ನಿರೀಕ್ಷಕ ಸುಧೀರ್ ಮಾತನಾಡಿ, ಕಾಫಿ ಪಲ್ಪಿಂಗ್ ತ್ಯಾಜ್ಯವನ್ನು ನದಿಗೆ ಹರಿಸಲಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ ಎಸ್ಟೇಟಿನಿಂದ ತ್ಯಾಜ್ಯ ಬರುತ್ತಿರುವುದು ಕಂಡುಬಂದಿತು. ಕೂಡಲೇ ತ್ಯಾಜ್ಯ ನೀರು ಬಿಡದಂತೆ ಎಸ್ಟೇಟ್‌ನವರಿಗೆ ಸೂಚಿಸಿ, ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದೇನೆ ಎಂದರು.