ಕಾಡಾನೆ ದಾಳಿಗೆ ಕಾಫಿತೋಟ ದ್ವಂಸ

10-MDG-2P1
Published on

ಮೂಡಿಗೆರೆ: ಹೆಸಗಲ್ ಗ್ರಾಪಂ ವ್ಯಾಪ್ತಿಯ ತೋಟದೊಳಗೆ ಪ್ರವೇಶಿಸಿರುವ ಕಾಡಾನೆಯೊಂದು ಕೊಯ್ಲಿಗೆ ಬಂದಿರುವ ಕಾಫಿ ಗಿಡಗಳನ್ನು ಹಾಗೂ ಫಸಲಿರುವ ಅಡಕೆ ಮತ್ತು ಬಾಳೆ ಮರವನ್ನು ಧ್ವಂಸಗೊಳಿಸಿ ಹಾನಿಯುಂಟುಮಾಡಿದೆ.

ಹೆಸಗಲ್ ಗ್ರಾಪಂ ಉಪಾಧ್ಯಕ್ಷ ಎಚ್.ಆರ್.ಆದರ್ಶ ಅವರ ಕಾಫಿ ತೋಟಕ್ಕೆ ಕಳೆದ ಆರು ತಿಂಗಳಿನಿಂದ ಕಾಡಾನೆಗಳು ನಿರಂತರವಾಗಿ ಲಗ್ಗೆಯಿಟ್ಟು ಅಪಾರ ಪ್ರಮಾಣದಲ್ಲಿ ನಷ್ಟ ಉಂಟುಮಾಡುತ್ತಿದೆ. ಕಾಫಿ ಬೆಳೆಯನ್ನು ಕೊಯ್ಲು ನಡೆಸಬೇಕಾಗಿದ್ದು ಅಷ್ಟರಲ್ಲಿ ಈಗ ಮತ್ತೊಮ್ಮೆ ಕಾಡಾನೆ ಕಾಫಿ ಗಿಡಗಳು, 10 ಅಡಕೆ ಮರ, 50ಕ್ಕೂ ಹೆಚ್ಚು ಬಾಳೆ ಮರಗಳನ್ನು ನಾಶ ಮಾಡಿದೆ. ತೋಟದ ಶೆಡ್‌ನ್ನು ನೆಲಸಮಗೊಳಿಸಿದೆ. ಕೆರೆ ಬದಿಯಲ್ಲಿರುವ ತೊಟ್ಟಿಯನ್ನು ಕೆಡವಿ ಹಾಕಿದೆ.

ಬೇಸಿಗೆಯಲ್ಲಿ ಕಾಫಿ ಗಿಡಕ್ಕೆ ನೀರಾಯಿಸಲು ತೋಟದಲ್ಲಿ ಶೇಖರಿಸಿ ಇಟ್ಟ ಸ್ಪಿಂಕ್ಲರ್ ಪೈಪ್‌ಗಳನ್ನು ತುಳಿದು ತುಂಡರಿಸಿ ಕೆರೆಯೊಳಗೆ ಹಾಕಿದೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ. ಸೋಮವಾರ ಕಾಫಿ ಕೊಯ್ಲು ನಡೆಸಲು ಕಾರ್ಮಿಕರು ತೋಟಕ್ಕೆ ಹೋಗಬೇಕಿತ್ತು. ಕಾಡಾನೆ ದಾಳಿಯಿಂದ ಭಯಗೊಂಡಿರುವ ಕಾರ್ಮಿಕರು ತೋಟದಲ್ಲಿ ಕೆಲಸಕ್ಕೆ ಹೋಗಿಲ್ಲ. ಇದರಿಂದ ಕಾಫಿ ಕೊಯ್ಲು ಸ್ಥಗಿತಗೊಂಡಿದೆ. ನಿರಂತರವಾಗಿ ಕಾಡಾನೆಗಳು ತೋಟಕ್ಕೆ ಲಗ್ಗೆಯಿಡುತ್ತಿದೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ಹೆಸಗಲ್ ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದ್ದು ಕಾರ್ಮಿಕರು ಹೆದರಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ. ತೋಟದ ಕೆಲಸ ನಿರ್ವಹಿಸಲು ಕಷ್ಟಕರವಾಗಿದೆ ಅರಣ್ಯ ಇಲಾಖೆ ಅಧಿಕಾರಿಗಳು ನಷ್ಟದ ಪರಿಹಾರ ದೊರಕಿಸಿಕೊಡಬೇಕು ಹಾಗೂ ಕಾಡಾನೆಯನ್ನು ಹಿಡಿದು ಸಾಗಿಸಬೇಕು. ಇಲ್ಲವಾದರೆ ಕಾಫಿ ತೋಟವನ್ನು ಪಾಳು ಬಿಡಬೇಕಾಗುತ್ತದೆ ಎಂದು ತೋಟದ ಮಾಲೀಕ ಎಚ್.ಆರ್. ಆದರ್ಶ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net