

ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ ಎಚ್‌ಪಿವರೆಗಿನ ನೀರಾವರಿ ವಿದ್ಯುತ್ ಪಂಪ್ ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕ ವನ್ನು ಷರತ್ತಿಗೊಳಪಟ್ಟು ಫಲಾನುಭವಿಗಳ ಖಾತೆಗೆ ಮರುಪಾವತಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಜು.೨೦ ರಂದು ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ಎನ್. ಮಂಗಳಗೌರಿ ಆದೇಶ ಹೊರಡಿಸಿದ್ದಾರೆ.
ಜು.೧ ರಿಂದ ಬಳಕೆಯಾಗುವ ವಿದ್ಯುತ್ ಬಳಕೆಗೆ ಅನ್ವಯವಾಗುವಂತೆ ವಿದ್ಯುತ್ ಬಿಲ್ ಮರುಪಾವತಿಸಲಾಗುತ್ತದೆ. ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಾಗಿರುವ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ದೃಢೀಕರಣ ಪತ್ರ ಒದಗಿಸಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಸಂಖ್ಯೆ (ಖಾತೆಗೆ ಸಂಬಂಧಿಸಿದ ಇತರೆ ಮಾಹಿತಿ ಒದಗಿಸಬೇಕು) ಹಾಗೂ ಇತರೆ ಮಾಹಿತಿಗಳ ದೃಢೀಕರಣ ದಾಖಲೆ ಕಡ್ಡಾಯವಾಗಿ ಒದಗಿಸಬೇಕು.
ಗ್ರಾಹಕರ ವಿದ್ಯುತ್ ಸ್ಥಾವರಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿಗದಿ ಪಡಿಸಿರುವ ವಿದ್ಯುತ್ ದರ ಸೂಚಿಯಂತೆ ಮಾಸಿಕ ವಿದ್ಯುತ್ ಬಿಲ್ಲನ್ನು ಸಿದ್ಧ ಪಡಿಸಲಾಗುತ್ತದೆ. ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ನಿಗದಿತ ಸಮಯದಲ್ಲಿ ಪಾವತಿಸಿದ ನಂತರ ಡಿಬಿಟಿ ಯೋಜನೆಯಡಿ ಸರ್ಕಾರದಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಒದಗಿಸುವ ಸಹಾಯಧನವನ್ನು ಮಾಸಿಕ ವಿದ್ಯುತ್ ಬಳಕೆ ಶುಲ್ಕದ ಮೇಲೆ ವಿಧಿಸುವ ವಿದ್ಯುತ್ ತೆರಿಗೆ ಹೊರತು ಪಡಿಸಿ, ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಗ್ರಾಹಕರ ಒಂದು ಸ್ಥಾವರಕ್ಕೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತದೆ.
ವಿವಿಧ ಸಂಘಟನೆಗಳ ಮನವಿ
ನೀರಾವರಿ ಪಂಪ್‌ಸೆಟ್ ವಿದ್ಯುತ್ ಸ್ಥಾವರಗಳಿಗೆ ಒದಗಿಸುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವಂತೆ ಕೊಡಗು ಜಿಲ್ಲಾ ರೈತ ಹೋರಾಟ ಸಮಿತಿ, ಸೋಮವಾರಪೇಟೆ ತಾಲೂಕು ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಬೆಳೆಗಾರರ ಹೋರಾಟ ಸಮಿತಿ, ಕೊಡ್ಲಿಪೇಟೆ ಕಾಫಿ ಬೆಳೆಗಾರರ ಘಟಕ ಹಾಗೂ ಕಾಫಿ ಮಂಡಳಿ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಉಚಿತ ವಿದ್ಯುತ್ ಒದಗಿಸಿದ್ದಲ್ಲಿ ಕಾಫಿ ಬೆಳೆಗಾರರಿಗೆ ಆರ್ಥಿಕವಾಗಿ ನೆರವಾಗಲಿದೆ ಹಾಗೂ ಅವರ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಸಚಿವರು, ಶಾಸಕರು ಮುಖ್ಯಮಂತ್ರಿ ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ೨೦೨೦-೨೧ನೇ ಸಾಲಿನ ಮುಂಗಡ ಪತ್ರ ಮಂಡಿಸಿದ್ದಾಗ, ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ ೧೦ ಎಚ್‌ಪಿವರೆಗಿನ ಪಂಪ್ ಸೆಟ್‌ಗಳ ವಿದ್ಯುತ್ ಶುಲ್ಕ ಮರುಪಾವತಿಸಲು ಒಂದು ಯೋಜನೆ ರೂಪಿಸಲಾಗುವುದೆಂದು ಘೋಷಿಸಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಢೀಕರಿಸಲು ವೆಚ್ಚದ ಬಾಬ್ತಿನಲ್ಲಿ ಮಿತವ್ಯಯ ಪಾಲಿಸುವುದು ಅನಿವಾರ್ಯವಾಗಿತ್ತು. ರೈತರಿಗೆ ಪಿಎಂಕೆಎಸ್‌ವೈ ಸೇರಿದ್ದಂತೆ ಹಲವು ಯೋಜನೆಯಡಿ ಸಹಾಯ ನೀಡುತ್ತಿ
ರುವುದರಿಂದ ಬಜೆಟ್ ಪ್ರಸ್ತಾವನೆ ಕೈಬಿಡಲು ಸಿಎಂ ಆರ್ಥಿಕ ಇಲಾಖೆಗೆ ಸೂಚಿಸಿದ್ದರು.