

ಮಡಿಕೇರಿ: ಮಡಿಕೇರಿ ದಸರಾದಲ್ಲಿ (ಅ.೬)ಭಾನುವಾರ ಬೆಳಗ್ಗೆ ೧೦ ಗಂಟೆಗೆ ಕಾಫಿ ದಸರಾ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ದೊರಕುತ್ತಿದೆ.
ಶಾಸಕ ಡಾ.ಮಂತರ್ ಗೌಡ ಮಾಗದರ್ಶನದಲ್ಲಿ ದಸರಾ ಸಾಂಸ್ಕೃತಿಕ ಸಮಿತಿಯು ಜಿಲ್ಲಾಧಿಕಾರಿ ಮತ್ತು ನಗರ ದಸರಾ ಸಮಿತಿ ಸಹಯೋಗದಲ್ಲಿ ಕಾಫಿ ದಸರಾಕ್ಕೆ ಸರ್ವಸಿದ್ಧತೆ ಕೈಗೊಂಡಿದೆ ಎಂದು ದಸರಾ ಸಾಂಸ್ಕತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಮಾಹಿತಿ ನೀಡಿದ್ದಾರೆ.
ಪ್ರಸಕ್ತ ವರ್ಷದಿಂದ ಕಾಫಿ ದಸರಾ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು, ಅ.೬ ಮತ್ತು ೭ ರಂದು ಆಯೋಜಿತ ಕಾಫಿ ದಸರಾದಲ್ಲಿ ಕಾಫಿ ಮತ್ತು ಇತರ ಕೃಷಿಗೆ ಸಂಬಂಧಿಸಿದಂತೆ ಅನೇಕ ಮಾಹಿತಿ ಕೃಷಿಕರಿಗೆ ದೊರಕಲಿದೆ. ಜಿಲ್ಲೆಯ ೧೨ ಮಂದಿ ಸಾಧಕ ಕೃಷಿಕರನ್ನೂ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾಫಿ ದಸರಾಕ್ಕೆ ಕಾಫಿ ಮಂಡಳಿ, ಕರ್ನಾಟಕ ಪ್ಲಾಂಟಸ್‌ರ್೯ ಅಸೋಸಿಯೇಷನ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸೇರಿದಂತೆ ಕಾಫಿ ವಲಯದಿಂದ ಉತ್ತಮ ಸ್ಪಂದನ ದೊರಕಿದೆ. ಈಗಾಗಲೇ ೩೨ ಮಳಿಗೆಗಳು ಭರ್ತಿಯಾಗಿದ್ದು, ಮಳಿಗೆಗಳು ೬ ಮತ್ತು ೭ ರಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ತೆರೆದಿರುತ್ತದೆ ಎಂದು ತಿಳಿಸಿದ್ದಾರೆ.
ಅ.೬ ರಂದು ಭಾನುವಾರ ಬೆಳಗ್ಗೆ ೧೦ ಗಂಟೆಗೆ ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ ಮತ್ತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಗಾಂಧಿ ಮೈದಾನದಲ್ಲಿ ಕಾಫಿ ದಸರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಳಗ್ಗೆ ೧೧ ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಕಾಫಿ ಮತ್ತು ಕೃಷಿ ಸಂಬಂಧಿತ ವಿಚಾರಸಂಕಿರಣ ನಡೆಯಲಿದ್ದು, ಸಭಾ ಕಾರ್ಯಕ್ರಮದಲ್ಲಿ ಸಚಿವದ್ವಯರ ಜತೆಗೆ ಶಾಸಕರಾದ ಡಾ.ಮಂತರ್ ಗೌಡ, ಎ.ಎಸ್.ಪೊನ್ನಣ್ಣ, ಸುಜಾಕುಶಾಲಪ್ಪ, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ದೇವವಂದ, ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಂದು ೧೧ ಗಂಟೆಯಿಂದ ೧೨.೩೦ ಗಂಟೆಯವರೆಗೆ ವಿಚಾರಸಂಕಿರಣದಲ್ಲಿ ಕೃಷಿ ರಂಗದ ಪರಿಣಿತರಾದ ಧರ್ಮರಾಜ್, ಡಾ.ಕೆಂಚರೆಡ್ಡಿ, ಕೆ.ಕೆ.ವಿಶ್ವನಾಥ್ ಮಾಹಿತಿ ವಿನಿಮಯ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅಂದು ಸಂಜೆ ೬.೩೦ ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಗಳು ಆಯೋಜಿತವಾಗಿದೆ. ಸರಿಗಮಪ ಕಲಾವಿದರಾದ ಮಹೇಂದ್ರ, ದಿವ್ಯ ಹೆಗಡೆ, ಪ್ರಿಯಾ ಕುಂದಾಪುರಸ ಮೆಹಬೂಬ ಸಾಬ್, ರವಿಕುಮಾರ್, ಪ್ರಗತಿ ಬಡಿಗೇರ, ಮಿಂಚು ತಂಡದಿಂದ ಸಂಗೀತ ಸಂಜೆ ಆಯೋಜಿತವಾಗಿದೆ. ಗಾನನೃತ್ಯ ಅಕಾಡೆಮಿಯಿಂದ ನೃತ್ಯ ವೈವಿಧ್ಯ, ಬೆಂಗಳೂರಿನ ಟಿಂ.ಪೊನ್ನಿಧ್ವನಿ ತಂಡದಿಂದ ಕೊಡಗಿನ ಸಂಸ್ಕೃತಿ ನೃತ್ಯ, ಕಲ್ಲುಗುಂಡಿಯ ನಟರಾಜ ನಾಟ್ಯ ನಿಕೇತನ ತಂಡದಿಂದ ಶ್ರೀದೇವಿ ನೃತ್ಯ, ಮೂರ್ನಾಡಿನ ಸಂಸ್ಕೃತಿ ಸಿರಿ ಟ್ರಸ್ಟ್‌ನಿಂದ ಯಕ್ಷ ನೃತ್ಯ ಆಯೋಜಿತವಾಗಿದೆ ಎಂದು ತಿಳಿಸಿದ್ದಾರೆ.