

ಮಡಿಕೇರಿ:
ಕಾಫಿಗೆ ಈಗ ಉತ್ತಮ ಬೆಲೆ ಇದ್ದರೂ ಬೆಳೆಗಾರರಿಗೆ ಇರುವ ಸಮಸ್ಯೆಗಳು ಮಾತ್ರ ಕಡಿಮೆ ಆಗಿಲ್ಲ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಮಡಿಕೇರಿ ದಸರಾ ಅಂಗವಾಗಿ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಇಲ್ಲಿನ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾಫಿ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಡಿಕೇರಿ ದಸರಾದಲ್ಲಿ ಕಾಫಿ ದಸರಾ ಆಯೋಜನೆ ಮುಖಾಂತರ ಕಾಫಿ ಹೆಸರಿನಲ್ಲಿ ಈ ಉದ್ಯಮಕ್ಕೆ ಒಳಪಟ್ಟವರು ಒಂದಾಗಲು ಅವಕಾಶ ಸಿಕ್ಕಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾಫಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಆದರೆ ಬೆಳೆಗಾರರು ಮಾತ್ರ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕಾಫಿ ಬೆಳೆಗಾರರು ಮೇಲ್ನೋಟಕ್ಕೆ ಶ್ರೀಮಂತರAತೆ ಕಂಡು ಬರುವುದರಿಂದ ಸರ್ಕಾರದ ಮಟ್ಟದಲ್ಲಿ ಇವರ ಪರವಾಗಿ ಮಾತನಾಡಲು ಕಷ್ಟವಾಗುತ್ತದೆ.
ಕಾಫಿಯನ್ನು ಕೊಡಗು ವಾಣಿಜ್ಯಿಕವಾಗಿ ಅವಲಂಬಿಸಿದೆ. ಕಾಫಿ ಇಲ್ಲದಿದ್ದರೆ ಕೊಡಗಿನ ಸ್ಥಿತಿ ಬೇರೆಯೇ ಇರುತ್ತಿತ್ತು. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಾಫಿ ಬೆಳೆಗಾರರ ಜತೆ ಸಹಕರಿಸಬೇಕು. ಹೊರಗಿನ ಕಾಫಿ ಕಾರ್ಮಿಕರ ಸಮಸ್ಯೆ ಬಗ್ಗೆ ಆತಂಕ ಕಾಣಿಸಿಕೊಂಡಿದ್ದು, ಈ ಸಮಸ್ಯೆ ಬಗೆಹರಿಸಲು ಕಾರ್ಮಿಕ ಸಚಿವರ ಜತೆ ಚರ್ಚೆ ನಡೆಸಲಾಗಿದೆ. ಕಾಫಿ ಬೆಳೆಗಾರರ ಪರ ಎಲ್ಲರೂ ನಿಲ್ಲಬೇಕು.
ಕಾಫಿ ದಸರಾಕ್ಕೆ ಅರ್ಧ ದಿನ ಸಾಲುವುದಿಲ್ಲ. ಮುಂದಿನ ದಿನಗಳಲ್ಲಿ 2 ದಿನ ಈ ಹಬ್ಬನ್ನು ಸಂಭ್ರಮಿಸುವAತಾಗಬೇಕು ಎಂದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕಾಫಿ ಕೊಡಗಿನ ಹೆಗ್ಗುರುತು. ಹಾಗಾಗಿ ಇದರ ಮಹತ್ವವನ್ನು ಗುರುತಿಸಿ ಮುನ್ನಲೆಗೆ ತರಬೇಕು ಎನ್ನುವ ಉದ್ದೇಶದಿಂದ ಕಳೆದ ವರ್ಷದಿಂದ ಕಾಫಿ ದಸರಾ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕಾಫಿಯನ್ನು ಸಂಭ್ರಮಿಸಬೇಕು. ಜತೆಗೆ ಸಮಸ್ಯೆ ಗುರುತಿಸಬೇಕು. ಪರಿಹಾರ ಕಂಡುಕೊಳ್ಳಬೇಕು.
ಅಧಿಕಾರಿಗಳು ಮತ್ತು ಕಾಫಿ ಬೆಳೆಗಾರರ ಮಧ್ಯೆ ಕಂದಕ ಸೃಷ್ಟಿ ಆಗಬಾರದು. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರ ಜತೆ ಚರ್ಚಿಸುವುದಕ್ಕಾಗಿಯೇ ವಾರದಲ್ಲಿ ಒಂದು ದಿನ ಮೀಸಲಿಡಲಾಗುವುದು. ಹೊಸದಾಗಿ ಕಾಫಿ ಬೆಳೆಯುವವರಿಗೆ ಕೊಡಗು ದೇಶದಲ್ಲೇ ಮಾದರಿ ಜಿಲ್ಲೆಯಾಗಿ ಪರಿಗಣಿಸಲ್ಪಟ್ಟಿದೆ. ಆಂಧ್ರಪ್ರದೇಶದ ಅರಕುವ್ಯಾಲಿಯಲ್ಲಿ ಕಾಫಿ ಬೆಳೆ ವಿಸ್ತರಣೆ ಉದ್ದೇಶಕ್ಕೆ ಅಲ್ಲಿಯ ಜಿಲ್ಲಾಧಿಕಾರಿ ನೇತೃತ್ವದ ತಂಡ ಇಲ್ಲಿಗೆ ಬಂದು ಅಧ್ಯಯನ ನಡೆಸಿ ತೆರಳಿದೆ. ಈ ರೀತಿ ಅಧ್ಯಯನ ನಡೆಸಲು ಬರುವವರಿಗೆ ಎಲ್ಲಾ ಮಾಹಿತಿಗಳು ಸೂಕ್ತ ರೀತಿಯಲ್ಲಿ ಸಿಗುವ ವ್ಯವಸ್ಥೆ ಕೊಡಗಿನಲ್ಲಿ ನಿರ್ಮಾಣ ಆಗಬೇಕು. ಮಾರುಕಟ್ಟೆಯಲ್ಲಿ ಕೊಡಗು ಕಾಫಿ ಹೆಸರು ಮಾಡುವ ರೀತಿಯಲ್ಲಿ ಬ್ರಾಂಡಿAಗ್ ಬೆಳೆಸಬೇಕು.
ಕಾಫಿ ಬೆಳೆಗಾರರು ಮಳೆಗಾಲದ ಸಂದರ್ಭ ಮೊದಲೇ ಅಗತ್ಯ ಸಿದ್ಧತೆ ಮಾಡಿಕೊಂಡರೆ ಸಮಸ್ಯೆ ಇರುವುದಿಲ್ಲ. ವಿಮಾ ಸವಲತ್ತು ಬಗ್ಗೆ ಬೆಳೆಗಾರರಿಗೆ ಕಾರ್ಯಾಗಾರ ನಡೆಸಲು ಚಿಂತಿಸಲಾಗಿದೆ. ವಿಮಾ ಸೌಲಭ್ಯದ ಬಗ್ಗೆ ಎಲ್ಲ ಬೆಳೆಗಾರರಿಗೂ ಮಾಹಿತಿ ಇರುವಂತಾಗಬೇಕು ಎಂದು ಹೇಳಿದರು.
ಮಾಜಿ ಸಚಿವ ಎಂ.ಸಿ. ನಾಣಯ್ಯ, ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್‌ಕುಮಾರ್, ಕಾರ್ಯದರ್ಶಿ ಅರುಣ್ ಶೆಟ್ಟಿ, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ಲು ಸಂತೋಷ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದ ಬೆಳ್ಯಪ್ಪ, ಮುಡಾ ಅಧ್ಯಕ್ಷ ಬಿ.ವೈ. ರಾಜೇಶ್ ಯಲ್ಲಪ್ಪ, ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ, ಬೂಕರ್ ಪ್ರಶಸ್ತಿ ಪುರಸ್ಕೃತೆ ದೀಪಾ ಬಾಸ್ತಿ, ಕಾರ್ಯಕ್ರಮ ಸಂಚಾಲಕ ಹೆಚ್.ಟಿ. ಅನಿಲ್ ಮತ್ತಿತರರು ಇದ್ದರು.