ಬೆಲೆ ಇದ್ದರೂ ಕೈಗೆ ಸಿಗದ ಕಾಫಿ ಬೆಳೆ

23blrp2.
Published on

ಬೇಲೂರು: ಮಳೆಗಾಲ ಪ್ರಾರಂಭದಿಂದಲೂ ಇಲ್ಲಿವರೆಗೂ ತಾಲೂಕಿನಲ್ಲಿ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೋಟದ ಗಿಡಗಳಲ್ಲಿ ಕಾಫಿ, ಮೆಣಸು, ಅಡಕೆ ಬೆಳೆ ಉದುರುತ್ತಿರುವುದರಿಂದ ಬೆಳೆ ಉಳಿಸಿಕೊಳ್ಳಲು ಬೆಳೆಗಾರರು ಹೆಣಗಾಡುತ್ತಿದ್ದು, ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವಂತೆ ಬೆಳೆಗಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಬಾರಿಯ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಲ್ಲದೆ ಬೆಳೆ ಬೆಳೆಯಲು ಸಹಕಾರಿಯಾಗಿತ್ತು. ಮಳೆಯ ಅಬ್ಬರಕ್ಕೆ ತಾಲೂಕಿನ ಬಹುತೇಕ ಕೆರೆ ಕಟ್ಟೆಗಳು ಕೋಡಿ ಬಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಮತ್ತು ಯಗಚಿ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು-ಆಲ್ದೂರು-ಮೂಡಿಗೆರೆ-ಗೆಂಡೇಹಳ್ಳಿ ಭಾಗದಲ್ಲಿ ಹೆಚ್ಚು ಮಳೆಯಿಂದಾಗಿ ಹಳ್ಳಗಳಿಂದ ನೀರು ಹರಿದು ಬರುತ್ತಿರುವುದರಿಂದ ಯಗಚಿ ಜಲಾಶಯ ಸಂಪೂರ್ಣ ಭರ್ತಿಯಾಗುತ್ತಲೇ ಇದೆ. ಹಾಗೂ ಸಾಕಷ್ಟು ದಿನಗಳಿಂದ ಜಲಾಶಯದ 5 ಕ್ರಸ್ಟ್‌ಗೇಟ್‌ಗಳ ಮೂಲಕ ಯಗಚಿ ನದಿಗೆ ಮತ್ತು ನಾಲೆಗೆ ಹೆಚ್ಚುವರಿ ನೀರನ್ನು ಬಿಡಲಾಗುತ್ತಿದೆ. ಅಲ್ಲದೆ ಕಳೆದ ಐದಾರು ತಿಂಗಳಿಗಳಿಂದ ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಕಂಗೆಟ್ಟಿರುವ ಕಾಫಿ ಬೆಳೆಗಾರರಿಗೆ ಈಗ ಕಾಫಿ ಕೊಯ್ಲು ಪ್ರಾರಂಭವಾಗಿದ್ದು ಮಳೆಯಿಂದಾಗಿ ಕಾಫಿ ಹಣ್ಣು ಗಿಡದಿಂದ ನೆಲಕ್ಕೆ ಉದುರಲಾರಂಭಿಸಿದೆ.

ಮೊದಲೇ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳದಿಂದ ಬೇಸತ್ತು ಕಂಗೆಟ್ಟಿರುವ ಕಾಫಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಂಬಂತೆ ಈಗ ಕಾಫಿಗೆ ಉತ್ತಮ ಬೆಲೆ ಇದ್ದರೂ ಕಾಫಿ ನೆಲಕ್ಕುರುಳಿ ಕೈಗೆ ಬಾರದಂತಾಗಿದೆ. ಇದರೊಂದಿಗೆ ಮೆಣಸು, ಅಡಕೆ ಸಹ ಉದರುತ್ತಿದೆ. ಅಲ್ಲದೆ ಒಂದೆಡೆ ಕಾರ್ಮಿಕರ ಸಮಸ್ಯೆ, ಮತ್ತೊಂದೆಡೆ ಕಾಡಾನೆ ಸಮಸ್ಯೆಗಳ ನಡುವೆಯೇ ಕಾಫಿ ಹಣ್ಣಾಗಿ ನೆಲಕ್ಕುದುರುತ್ತಿರುವುದರಿಂದ ಬೆಳೆಗಾರರಿಗೆ ದಿಕ್ಕು ತೋಚದಾಗಿದ್ದಾರೆ. ಜತೆಗೆ ಕಳೆದರೆಡು ದಿನಗಳ ಹಿಂದೆ ಸುರಿದ ಮಳೆಗೆ ಮಲೆನಾಡಿನ ನಾರ್ವೆ-ಸುಂಡೇಕೆರೆ ಗ್ರಾಮಗಳ ನಡುವಿನ ಸಂಪರ್ಕದ ಸೇತುವೆಯ ಮೇಲೆ ಎರಡು ಅಡಿ ನೀರು ಹರಿದಿದ್ದರಿಂದ ಜನರು ಓಡಾಡಲು ಪರದಾಡುವಂತಾಗಿತ್ತು. ನಿತ್ಯ ಸಂಜೆ ಸಮಯ ಗುಡುಗು ಸಿಡಿಲಿನಿಂದ ಪ್ರಾರಂಭವಾಗುತ್ತಿರುವ ಮಳೆ ರಾತ್ರಿ ಪೂರ್ತಿ ಬಿಡುವಿಲ್ಲದೆ ಬರುತಿದೆ. ಸಂಜೆ ನಂತರ ಮನೆಯಿಂದ ಯಾರೂ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅತಿವೃಷ್ಟಿಯಿಂದ ತೋಟದಲ್ಲಿನ ಕಾಫಿ, ಮೆಣಸು, ಅಡಕೆ ಬೆಳೆ ಕಳೆದುಕೊಂಡು ರೈತರು ಕಂಗೆಟ್ಟಿದ್ದು, ರೈತರಿಗೆ ಸರ್ಕಾರ ಎನ್‌ಡಿಆರ್‌ಎಫ್ ಮಾದರಿಯಲ್ಲಿ ಸೂಕ್ತ ಪರಿಹಾರ ನೀಡಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.

ಭಾರಿ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಕಾಫಿ, ಮೆಣಸು, ಅಡಕೆ ಬೆಳೆ ನಷ್ಟವಾಗಿದ್ದು, ಬೆಳೆ ಕಳೆದುಕೊಂಡವರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಾನೂ ಸ್ಥಳ ಪರಿಶೀಲಿಸಲಿದ್ದೇನೆ. ಎಚ್.ಕೆ.ಸುರೇಶ್ ಶಾಸಕ ಬೇಲೂರು ಐದಾರು ತಿಂಗಳಿಂದ ನಿರಂತರ ಮಳೆಗೆ ಕೆಂಗೆಟ್ಟಿರುವ ಕಾಫಿ ಬೆಳೆಗಾರರಿಗೆ ಈಗ ಕಾಫಿ ಕೊಯ್ಲು ಪ್ರಾರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ನಿತ್ಯ ಬರುತ್ತಿರುವ ಭಾರಿ ಮಳೆಯಿಂದಾಗಿ ಕಾಫಿ ಹಣ್ಣು ಗಿಡದಲ್ಲೇ ಉದುರುತ್ತಿದೆ. ಮೊದಲೇ ಕಾಡಾನೆ ಹಾವಳಿಯಿಂದ ಕೆಂಗಟ್ಟಿರುವ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಂಬಂತೆ ಉತ್ತಮ ಬೆಲೆ ಇದ್ದರೂ ಬೆಳೆಯಿಲ್ಲದಂತಾಗಿದೆ. ಒಂದೆಡೆ ಕಾರ್ಮಿಕರ ಸಮಸ್ಯೆಯಾದರೆ, ಮತ್ತೊಂದೆಡೆ ನಿರಂತರ ಮಳೆಯಿಂದಾಗಿ ಬೆಳೆಗಾರರಿಗೆ ದಿಕ್ಕು ತೋಚದಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಬ್ಬರ ಮೇಲೊಬ್ಬರು ಹಾಕದೆ ಎನ್‌ಡಿಆರ್‌ಎಫ್ ಮಾದರಿಯಲ್ಲಿ ಬೆಳೆಗಾರರಿಗೆ ಪರಿಹಾರ ಘೋಷಿಸಬೇಕಿದೆ. ಅದ್ದೂರಿ ಕುಮಾರ್ ಅಧ್ಯಕ್ಷ, ತಾಲೂಕು ಕಾಫಿ ಬೆಳಗಾರರ ಸಂಘ, ಬೇಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net