

ನಾಪೋಕ್ಲು: ಕಾಫಿ ಬೆಳೆಗಾರರಿಗೆ ತೆರೆದ ಬಾವಿ, ಕಣ ನಿರ್ಮಾಣ, ಕೆರೆ ನಿರ್ಮಾಣ ಹಾಗೂ ಪಂಪ್‌ಸೆಟ್ ಅಳವಡಿಸಲು ಕಾಫಿ ಮಂಡಳಿಯಿಂದ ರಿಯಾಯಿತಿ ದರದಲ್ಲಿ ಸಬ್ಸಿಡಿ ನೀಡಲಾಗುವುದು. ಇದನ್ನು ಬೆಳೆಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಕಾಫಿ ಮಂಡಳಿಯ ನಿರ್ದೇಶಕ ತಳೂರು ಎ.ಕಿಶೋರ್‌ಕುಮಾರ್ ಹೇಳಿದರು.
ಸಮೀಪದ ಬೆಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕಾಫಿ ಮಂಡಳಿ ವತಿಯಿಂದ ಕಾಫಿ, ಕಾಳುಮೆಣಸು ಮತ್ತು ಹಣ್ಣು ಹಂಪಲುಗಳ ತೋಟಗಾರಿಕೆ ಬೆಳೆಗಳ ಕುರಿತು ರೈತರಿಗೆ ಸೋಮವಾರ ಆಯೋಜಿಸಲಾಗಿದ್ದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕಾಫಿ ಮಂಡಳಿ ವತಿಯಿಂದ ಬೆಳೆಗಾರರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ .ಕಾಫಿ ಬೆಳೆ ಮಾಡಲು ಮಿನಿ ಹಲ್ಲರ್‌ಗಳನ್ನು ರೈತರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಎಲ್ಲ ಸಬ್ಸಿಡಿಗಳ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಸೂಚಿಸಿದರು. ಕಾರ್ಯಕ್ರಮದಲ್ಲಿ ರೈತರು ತೋಟಕ್ಕೆ ಯಾವ ಪ್ರಮಾಣದಲ್ಲಿ ಗೊಬ್ಬರ ಹಾಕಬೇಕು ಮತ್ತು ಮಣ್ಣು ಪರೀಕ್ಷೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಾಫಿ ಮಂಡಳಿ ಸಹಾಯಕ ನಿರ್ದೇಶಕ ಚಂದ್ರಶೇಖರ್, ಅಪ್ಪಂಗಳದ ಭಾರತೀಯ ಆಹಾರ ಬೆಳೆಗಳ ಸಂಶೋಧನಾ ಕೇಂದ್ರದ ವಿಜ್ಞಾನಿ ಅಂಕೇಗೌಡ, ಚೆಟ್ಟಳ್ಳಿ ತೋಟಗಾರಿಕಾ ಇಲಾಖೆ ವಿಜ್ಞಾನಿ ಡಾ.ಮುರುಳಿಧರ್, ಕಾಫಿ ಮಂಡಳಿಯ ನದಾಫ್, ಸದಾಶಿವರಾವ್ , ನಾಗರಾಜ್ ಕಾವಿ, ಡಾ.ಮಂಜುನಾಥ್ ರೆಡ್ಡಿ, ಬೆಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಳಿಯಂಡ ಕಮಲ ಉತ್ತಯ್ಯ, ಬೆಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಆರ್.ಸುಶೀಲಾ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.