ಸರ್ಕಾರದಿಂದ ನಡೆದ ಕಾಫಿ ಬೆಳೆಹಾನಿ ಸರ್ವೇ

coffee
Published on

ಮಡಿಕೇರಿ:

ಈ ಬಾರಿ ಕೊಡಗಿನಲ್ಲಿ ಅಬ್ಬರಿಸಿದ ಮುಂಗಾರು ಪೂರ್ವ ಮಳೆ ಮತ್ತು ಜೂನ್ ನಂತರ ವ್ಯಾಪಕವಾಗಿ ಸುರಿದ ಮುಂಗಾರು ಮಳೆ ಜಿಲ್ಲೆಯ ಕಾಫಿ ಬೆಳೆಗಾರರು, ಕೃಷಿಕರ ಪಾಲಿಗೆ ಸಂಕಷ್ಟ ತಂದಿಟ್ಟಿದೆ. ಸೆಪ್ಟೆಂಬರ್ 2ನೇ ವಾರದಲ್ಲೂ ಮಳೆಯ ವಾತಾವರಣವೇ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಮೇ ತಿಂಗಳಿನಿAದಲೇ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಆಗುತ್ತಿದ್ದು, ಸಾಕಷ್ಟು ಹಾನಿ ಆಗಿದೆ.

ಜಿಲ್ಲೆಯ ಬಹುತೇಕ ಎಲ್ಲಾ ಭಾಗಗಳಲ್ಲೂ ಪ್ರಾಕೃತಿಕ ವಿಕೋಪದ ಪರಿಣಾಮಗಳು ಕಂಡು ಬರುತ್ತಿದೆ. ಶೇ.75ರಷ್ಟು ಕಾಫಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿರುವುದಾಗಿ ಬೆಳೆಗಾರರು ಹೇಳುತ್ತಿದ್ದಾರೆ. ರೋಬಸ್ಟಾ ಕಾಫಿಗೂ ದೊಡ್ಡ ಮಟ್ಟದಲ್ಲಿ ಹಾನಿ ಆಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಉಂಟಾದ ಹಾನಿ ಬಗ್ಗೆ ಸಮೀಕ್ಷೆ ನಡೆಸಲು ಸರ್ಕಾರ ತಂಡ ರಚಿಸಿ ವರದಿ ತರಿಸಿಕೊಳ್ಳುತ್ತಿತ್ತು. ನಂತರ ಲಭ್ಯ ಇರುವ ಮಾನದಂಡಗಳ ಅಡಿಯಲ್ಲಿ ಪರಿಹಾರವನ್ನೂ ವಿತರಿಸಲಾಗುತ್ತಿತ್ತು.

ಆದರೆ ಈ ವರ್ಷ ಮಳೆಹಾನಿ ಪರಿಹಾರದ ಬಗ್ಗೆ ಸರ್ಕಾರದಿಂದ ಯಾವುದೇ ಮಾತುಗಳು ಕೇಳಿಬರುತ್ತಿಲ್ಲ ಎನ್ನುವುದು ಕೃಷಿಕರ ಆರೋಪ. ಇಷ್ಟೊತ್ತಿಗಾಗಲೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಅಂದಾಜು ಹಾನಿಯ ಬಗ್ಗೆ ಸರ್ಕಾರ ವರದಿ ತರಿಸಿಕೊಳ್ಳಬೇಕಿತ್ತು. ಆದರೆ ಈ ಕೆಲಸ ಇನ್ನೂ ಆಗಿಲ್ಲ. ಇನ್ನೂ ಪರಿಹಾರದ ನಿರೀಕ್ಷೆ ಮಾಡುವುದು ಕೂಡ ಕಷ್ಟ ಎನ್ನುವ ಮಾತುಗಳ ಬೆಳೆಗಾರರ ವಲಯದಿಂದ ಕೇಳಿ ಬರುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಆಗುತ್ತಿದೆ. ಸಿದ್ದಾಪುರ ಸುತ್ತ ಮುತ್ತ ಭಾಗಗಳೂ ಇದರಿಂದ ಹೊರತಾಗಿಲ್ಲ. ಈ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯ ಪರಿಣಾಮ ಶೇ.50ರಷ್ಟು ಕಾಫಿ ಬೆಳೆ ನೆಲಕಚ್ಚಿದೆ. ಒಂದೆಡೆ ಪ್ರಕೃತಿ ವಿಕೋಪ, ಇನ್ನೊಂದೆಡೆ ಕಾರ್ಮಿಕರ ಕೊರತೆ, ಕಾಡಾನೆಗಳ ಹಾವಳಿ ಹೀಗೆ ಕಾಫಿ ಬೆಳೆಗಾರರ ಬದುಕು ಮಳೆಯೊಂದಿಗೆ ಸೇರಿ ತೊಳಲಾಡುವಂತಾಗಿದೆ.

ಸೂರಜ್, ಕಾಫಿ ಬೆಳೆಗಾರ, ಕರಡಿಗೋಡು ಗ್ರಾಮ

ಕಾಫಿ ಬೆಳೆಗಾರರಿಗೆ ಈ ವರ್ಷದ ಮಳೆ ತುಂಬಾ ಸಂಕಷ್ಟ ತಂದಿದೆ. ಮಳೆಯಿಂದಾಗಿ ಕಾಫಿ ನೆಲಕಚ್ಚಿದೆ. ಪ್ರಾರಂಭದಲ್ಲಿ ಉತ್ತಮ ಫಸಲು ಇತ್ತು. ಆದರೆ ಇದೀಗ ಕಾಫಿ ಕಾಯಿ ಎಲ್ಲಾ ಮಣ್ಣುಪಾಲಾಗಿದೆ. ಈ ಸಂಬAಧ ಸರ್ಕಾರ ಸಮೀಕ್ಷೆಯನ್ನೂ ನಡೆಸಿಲ್ಲ. ಪ್ರತಿ ವರ್ಷ ಮಳೆ ಆದ ನಂತರ ಸಮೀಕ್ಷೆ ನಡೆಸಿ ಪರಿಹಾರ ಘೋಷಣೆ ಆಗುತಿತ್ತು. ಆದರೆ ಈ ಬಾರಿ ಅದು ಆಗಿಲ್ಲ.

ಉಮಾಶಂಕರ್, ಅಧ್ಯಕ್ಷರು, ಕಾಫಿ ಬೆಳೆಗಾರರ ಸಂಘ, ಶನಿವಾರಸಂತೆ

ಕಾಫಿ ಬೆಳೆಗಾರರು ಈ ಬಾರಿ ಕಾಫಿ ತೋಟದಲ್ಲಿ ಕೆಲಸ ಮಾಡಿಸಲು ಯೋಚನೆ ಮಾಡುವ ಸ್ಥಿತಿ ಎದುರಾಗಿದೆ. ಕಾಫಿ ನಷ್ಟವಾಗಿರುವ ಹಾಗೂ ಕಾಫಿ ನೆಲಕ್ಕುರುಳಿರುವ ಬಗ್ಗೆ ಈಗಾಗಲೇ ಸಮೀಕ್ಷೆ ಮಾಡಬೇಕಿತ್ತು. ಸಮೀಕ್ಷೆ ಮಾಡಲು ಬರುವಾಗ ನೆಲಕಚ್ಚಿರುವ ಕಾಫಿ ಕಾಣುವುದಿಲ್ಲ. ನಾಮ್‌ಕೆ ಅವಸ್ಥೆಗೆ ಸಮೀಕ್ಷೆ ಮಾಡಬೇಕಷ್ಟೆ. ಇನ್ನೊಂದೆರಡು ದಿನದಲ್ಲಿ ಉದುರಿರುವ ಕಾಫಿ ಯಾರಿಗೂ ಕಾಣುವುದಿಲ್ಲ. ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಕಾಫಿ ಬೆಳೆಗಾರರಿಗೆ ಈ ಬಾರಿ ಪರಿಹಾರ ಅನುಮಾನ ಎಂಬAತೆ ಆಗಿದೆ.

ಮೀನಾ ಗಿರೀಶ್, ಕಾಫಿ ಬೆಳೆಗಾರರು, ಬೆಟ್ಟದಳ್ಳಿ

ಪ್ರಸಕ್ತ ವರ್ಷ ಸುರಿದ ಮುಂಗಾರು ಮಳೆಯಿಂದ ಕಾಫಿ, ಕಾಳು ಮೆಣಸು ಫಸಲು ತುಂಬಾ ಹಾನಿಯಾಗಿದೆ. ಅದರಲ್ಲೂ ಗರ್ವಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಫಿ ಕಾಯಿ ಸಂಪೂರ್ಣ ನೆಲಕ್ಕೆ ಸುರಿದಿದೆ. ರೈತರಿಗೆ ಸೂಕ್ತ ಪರಿಹಾರ ಸಿಗಬೇಕು. ಆದರೆ ಇದುವರೆಗೆ ಸರ್ವೇ ಮಾಡಿಲ್ಲ. ರೈತರನ್ನು ಅಧಿಕಾರಿಗಳು ಭೇಟಿ ಮಾಡಿಲ್ಲ. ಬೇಸಿಗೆಯಲ್ಲಿ ಸರ್ವೇ ಮಾಡಿದರೆ ಯಾವುದೇ ಪ್ರಯೋಜನ ಇಲ್ಲ. ಎರಡು ಲಕ್ಷ ರೂ. ಮೌಲ್ಯದ ಹಾನಿಯಾದರೆ ಎರಡು ಸಾವಿರ ರೂ. ಪರಿಹಾರ ಕೊಟ್ಟು ಪ್ರಯೋಜನ ಇಲ್ಲ. ರೈತ ಸಂಕಷ್ಟಕ್ಕೆ ಯಾರೂ ಅಯ್ಯೋ ಅನ್ನುವವರಿಲ್ಲ.

ನಾಣಿಯಪ್ಪ, ಕೃಷಿಕ, ಸೂರ್ಲಬ್ಬಿ ಗ್ರಾಮ

ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯ ಪರಿಣಾಮವಾಗಿ ಕಾಫಿ ಸೇರಿದಂತೆ ಹಲವು ಕೃಷಿ ಫಸಲು ನಷ್ಟವಾಗಿದೆ. ಬೆಳೆ ಸಮೀಕ್ಷೆಯನ್ನು ಆದಷ್ಟು ಶೀಘ್ರವೇ ಕೈಗೊಳ್ಳಬೇಕು. ಕಾಫಿಗೆ ಬೆಳೆ ಹಾನಿ ಪರಿಹಾರ ನೀಡುವುದು ಕೆಲವು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಕೊಡಗಿನಂಥ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಪರಿಹಾರ ವಿತರಿಸುವುದು ಸೂಕ್ತ. ಬೆಳೆಗಾರರಿಗೂ ಇದರಿಂದ ಅಲ್ಪ ಮಟ್ಟಿಗೆ ಸಹಕಾರಿಯಾಗಲಿದೆ.

ಬಿ.ಬಿ. ಸಚಿನ್, ವಿರಾಜಪೇಟೆ

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಕಾಫಿ, ಅಡಿಕೆ, ಕರಿಮೆಣಸಿನಂಥ ವಾಣಿಜ್ಯ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಮತ್ತೊಂದು ಕಡೆ ಕೀಟ ಭಾದೆಯಿಂದ ಬೆಳವಣಿಗೆ ಹಂತದಲ್ಲಿದ್ದ ಭತ್ತದ ಬೆಳೆ ನಷ್ಟವಾಗುವ ಭೀತಿಯೂ ಎದುರಾಗಿದೆ. ಕಾಫಿ ಬೆಲೆ ಇಳಿಮುಖ ಆಗುತಿದ್ದು, ಬೆಳೆಗಾರರಲ್ಲಿ ಆತಂಕ ಎದುರಾಗಿದೆ. ಈ ಬಾರಿಯಾದರೂ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕಿದೆ.

ಎನ್.ಬಿ. ಮುತ್ತಮ್ಮ, ವಿರಾಜಪೇಟೆ.

ಈ ಬಾರಿ ಮಳೆ ರೈತರ ಬದುಕಿಗೆ ತುಂಬಲಾರದ ನಷ್ಟ ಉಂಟುಮಾಡಿದೆ. ಇದರೊಂದಿಗೆ ಆನೆಗಳ ಉಪಟಳದಿಂದಲೂ ರೈತರು ಕಂಗಾಲಾಗಿದ್ದಾರೆ. ಈ ಸಮಯದಲ್ಲಿ ಸರ್ಕಾರ ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ತಕ್ಕ ಪರಿಹಾರ ಒದಗಿಸಬೇಕಿತ್ತು. ಸರ್ಕಾರ ನೀಡುವ ಪರಿಹಾರದಿಂದ ರೈತರ ನಷ್ಟವನ್ನಂತೂ ತುಂಬಲಾಗುವುದಿಲ್ಲ. ಆದರೆ ಸ್ವಲ್ಪ ಮಟ್ಟಿಗಾದರೂ ಸಮಾಧಾನ ಪಟ್ಟುಕೊಳ್ಳಬಹುದು.

ಪೊನ್ನಚನ ಸುಮಿತ್ರಾ ಗಣೇಶ್ ಕುಮಾರ್, ಬಲಮುರಿ ಗ್ರಾಮ

ಈ ವರ್ಷ ಮಳೆಯಿಂದ ಕಾಫಿ ಫಸಲು ಸಂಪೂರ್ಣ ನಷ್ಟವಾಗಿದೆ. ಸರ್ಕಾರ ರೈತರ ಕಡೆ ಗಮನ ಹರಿಸಬೇಕಾಗಿದೆ. ಕೂಡಲೇ ಬೆಳೆ ನಷ್ಟ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದರೆ ಉತ್ತಮ. ಅದರ ಆಧಾರದ ಮೇಲೆ ಬೆಳೆ ಪರಿಹಾರ ರೈತರಿಗೆ ದೊರೆತರೆ ಸುಲಭವಾಗುತ್ತದೆ. ಇಲ್ಲದೇ ಹೋದರೆ ಈ ಬಾರಿ ರೈತರು ಸಂಕಷ್ಟದಲ್ಲಿ ಇರುವಂತೆ ಆಗುತ್ತದೆ.

ಮೋಹಿತ್ ರಾಜ್, ಗೋಣಿಕೊಪ್ಪಲು ನಿವಾಸಿ

ಅತಿವೃಷ್ಟಿ, ಬರ, ಪ್ರಾಕೃತಿಕ ವಿಕೋಪ, ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದಾಗಿ ಹಾನಿಯಾಗಿರುವ ಬೆಳೆಗಳ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಮತ್ತು ಈ ಸಂಬAಧ ಸಂಬAಧಪಟ್ಟ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಸಲುವಾಗಿ ತಂಡ ರಚಿಸಲಾಗಿದೆ. ಈ ತಂಡ ಬೆಳೆ ಹಾನಿಯಾದ ಬಗ್ಗೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜತೆ ಜಂಟಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ತಾಲೂಕುವಾರು ತಂಡಗಳನ್ನು ಇಲಾಖೆಗಳ ಸಹಯೋಗದೊಂದಿಗೆ ರಚಿಸಿಕೊಂಡು ವರದಿಯನ್ನು ಕ್ರೋಢೀಕರಿಸಿ ಅ.6 ರೊಳಗೆ ಸಂಬAಧಿಸಿದ ತಹಸೀಲ್ದಾರರ ಕಚೇರಿಗೆ ಸಲ್ಲಿಸಬೇಕು. ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಕಾಫಿ ಬೆಳೆ ಹಾನಿ ಸಮೀಕ್ಷೆಯೊಂದಿಗೆ ಕರಿಮೆಣಸು ಬೆಳೆ ಹಾನಿಯನ್ನೂ ಅಂದಾಜಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net