

ಮಡಿಕೇರಿ:
ಜಿಲ್ಲೆಯ ಆರ್ಥಿಕತೆಯ ಪ್ರಮುಖ ಮೂಲವಾಗಿರುವ ಕಾಫಿಯ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬAದಿದೆ. ಅರೆಬಿಕಾ ಕಾಫಿ ಕೊಯ್ಲು ಅವಧಿಯಲ್ಲಿನ ಈ ಬೆಳವಣಿಗೆ ಬೆಳೆಗಾರರ ಖುಷಿಗೆ ಕಾರಣವಾಗಿದೆ. ಈ ಮಧ್ಯೆ ಕಾಫಿಗೆ ಅಲ್ಲಲ್ಲಿ ಕಾಯಿ ಕೊರಕ ಕೀಟದ ಹಾವಳಿ ಕಂಡುಬರುತ್ತಿರುವುದು ಆತಂಕ ಹುಟ್ಟಿಸಿದೆ. ಹತೋಟಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಕಾಫಿ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಲ್ಲದೆ ಮಾರುಕಟ್ಟೆಯ ಬೆಲೆ ಸಿಗದಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಕಾಫಿ ಕೊಡಗಿನ ಬಹುಮುಖ್ಯ ವಾಣಿಜ್ಯ ಬೆಳೆೆ. ಕೃಷಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತಿದೆ. ಇದೀಗ ಕಾಫಿಗೆ ಉತ್ತಮ ಬೆಲೆ ಬಂದಿರುವುದು ಬೆಳೆಗಾರರಲ್ಲಿ ಸ್ವಲ್ಪ ನೆಮ್ಮದಿ ಮೂಡಿಸಿದೆ. ಕಾಫಿ ಬೆಲೆ ಇನ್ನೂ ಹೆಚ್ಚಾಗಲಿದೆ ಎನ್ನುವ ಮಾಹಿತಿ ಕೃಷಿಕರಲ್ಲಿ ಇನ್ನಷ್ಟು ಹುರುಪು ತುಂಬಿದೆ. ಈ ಮಧ್ಯೆ ಇದೀಗ ಕಾಫಿ ಕೊಯ್ಲು ಆರಂಭವಾಗಿರುವ ಸಮಯದಲ್ಲಿ ಜಿಲ್ಲೆಯಲ್ಲಿ ಕಾಫಿಯ ಕಾಯಿಕೊರಕ (ಬರ‍್ರಿ ಬೋರರ್) ಕೀಟದ ಹಾವಳಿ ತೀವ್ರವಾಗಿರುವುದಾಗಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಕಾಫಿ ಕಾಯಿಕೊರಕ ಕೀಟದ ಹಾವಳಿಯಿಂದ ಬೀಜದ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಬೆಳೆಯ ಇಳುವರಿಯೂ ಕುಂಠಿತವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕಾಫಿ ಕಾಯಿಕೊರಕದ ಹಾವಳಿ ತೀವ್ರಗತಿಯಲ್ಲಿ ಹರಡಿದ್ದು ಮುಂದಿನ ಸಾಲಿನ ಫಸಲು ಮತ್ತು ಕಾಫಿಯ ಗುಣಮಟ್ಟಕ್ಕೆ ತೀವ್ರ ಹಾನಿಯಾಗುವ ಸಾಧ್ಯತೆ ಇರುವುದಾಗಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಕಾಫಿ ಕಾಯಿಕೊರಕ (ಹೈಪೋತೆನಮಸ್ ಹ್ಯಾಂಪಿ) ವಿಶ್ವದೆಲ್ಲೆಡೆ ಕಾಫಿ ಬೆಳೆಯನ್ನು ಹೆಚ್ಚಾಗಿ ಕಾಡುವ ಪ್ರಮುಖ ಕೀಟವಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಈ ಕೀಟದ ಹಾವಳಿ 1990ರಲ್ಲಿ ತಮಿಳುನಾಡಿನ ನೀಲಗಿರಿ ಪ್ರದೇಶದ ಕೆಲವು ತೋಟಗಳಲ್ಲಿ ಕಾಣಿಸಿಕೊಂಡಿತು. ನಂತರ ಕೇರಳದ ವೈನಾಡು ಮತ್ತು ಕಾನೂರುಗಳಲ್ಲಿ ತೋಟಗಳಿಗೆ ಕಾಲಿಟ್ಟು ಈಗ ಕರ್ನಾಟಕದಲ್ಲಿ ದಕ್ಷಿಣ ಕೊಡಗಿನ ತೋಟಗಳಿಗೂ ಹರಡಿದೆ.
ಬಲಿಯುತ್ತಿರುವ ಮತ್ತು ಬಲಿತ ಕಾಯಿಗಳು ಕಾಫಿ ಕಾಯಿಕೊರಕ ಕೀಟದ ಹಾನಿಗೆ ಒಳಗಾಗುತ್ತದೆ. ಪ್ರಾರಂಭದಲ್ಲಿ ಈ ಕೀಟ ಬಲಿಯುವ ಹಾಗೂ ಬಲಿತ ಕಾಯಿಗಳ ಮೂಲಕ ಒಳ ಸೇರುತ್ತದೆ. ಇದರಿಂದ ಭಾದೆಗೂಳಗಾದ ಕಾಫಿ ಕಾಯಿಗಳ ಮುಂಭಾಗದಲ್ಲಿ ಕೊರೆದಿರುವ ರಂಧ್ರ ಕಾಣಿಸುತ್ತದೆ. ನಂತರ ಕಾಯಿಯ ಒಳಭಾಗಕ್ಕೆ ಹೋಗಿ ಸೇರಿಕೊಳ್ಳುವ ಕೀಟ ಒಳಗಿನ ಸಾರವನ್ನೆಲ್ಲಾ ತಿಂದು ಹಾಳುಮಾಡುತ್ತದೆ.
ಕೀಟಗಳು ಎಳೆಯ ಕಾಯಿಯೊಳಗೆ ಸಂತಾನಾಭಿವೃದ್ದಿ ಮಾಡಲು ಆಗುವುದಿಲ್ಲ. ಆದರೂ ಇದರ ಭಾದೆಗೆ ತುತ್ತಾದ ಕಾಯಿಗಳು ಗಾಯದ ಪರಿಣಾಮವಾಗಿ ಅಕಾಲದಲ್ಲಿ ಉದುರುತ್ತವೆ. ಬಲಿತ ಕಾಯಿಯೊಳಗಿನ ಗಟ್ಟಿಗೊಂಡ ಬೀಜದಳದಲ್ಲಿ ಮಾತ್ರ ಇದರ ಸಂತಾನೋತ್ಪತ್ತಿ ಕಾರ್ಯ ನಡೆಯುತ್ತದೆ. ಇದು ಗಿಡದಲ್ಲಿ ಅತಿಯಾಗಿ ಹಣ್ಣಾಗಿರುವ ಮತ್ತು ನೆಲಕ್ಕೆ ಉದುರಿದ ಹಣ್ಣುಗಳಲ್ಲಿಯೂ ವಂಶಾಭಿವೃದ್ಧಿ ಮುಂದುವರಿಸುತ್ತದೆ.
ಕೆಲವು ಸಂದರ್ಭದಲ್ಲಿ ಈ ಕೀಟದ ಭಾದೆ ತೀವ್ರವಾಗಿದ್ದರೆ ಶೇ. 30 ರಿಂದ ಶೇ. 80ರಷ್ಟು ಕಾಯಿಗಳು ಕೂಡ ಹಾನಿಗೆ ತುತ್ತಾಗುತ್ತವೆ. ಒಮ್ಮೆ ಕಾಫಿ ತೋಟಗಳಿಗೆ ಈ ಕಾಯಿಕೊರಕ ಕೀಟ ದಾಳಿ ಇಟ್ಟಿತು ಎಂದಾದರೆ ನಂತರ ಆ ತೋಟವನ್ನು ಸದಾ ಪೀಡಿಸುತ್ತಲೇ ಇರುತ್ತದೆ. ಈ ಕೀಟದ ಭಾದೆಗೆ ತುತ್ತಾದ ಕಾಫಿ ಗುಣಮಟ್ಟ ಕಳೆದುಕೂಂಡು ಬೆಳೆಗಾರರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟು ಮಾಡುತ್ತದೆ.
ಕಾಫಿ ಕಾಯಿಕೊರಕ ಕೀಟ ಕಪುö್ಪ ಬಣ್ಣದ ಚಿಕ್ಕ ದುಂಬಿಯಾಗಿದ್ದು ಸುಮಾರು 1.5 ಮೀ.ಮೀ. ಉದ್ದವಿರುತ್ತದೆ. ಹೆಣ್ಣು ಕೀಟ ಹಸಿರು ಕಾಯಿ ಮತ್ತು ಚೆನ್ನಾಗಿ ಬಲಿತ ಹಣ್ಣುಗಳ ನಾಭಿ ಭಾಗದಿಂದ ರಂದ್ರ ಕೊರೆಯುತ್ತದೆ. ನಂತರ ಕಾಫಿ ಬೀಜದೊಳಗೆ ಸುರಂಗ ಕೊರೆದು ಸರಾಸರಿ 40 ರಿಂದ 50 ಮೊಟ್ಟೆಗಳನ್ನಿಡುತ್ತದೆ. 5 ರಿಂದ 9 ದಿನಗಳಲ್ಲಿ ಮೊಟ್ಟೆ ಒಡೆದು ಮರಿ ಹುಳುಗಳು ಹೊರಬರುತ್ತವೆ. ಹೊರಬಂದ ಮರಿಗಳು ಬೀಜವನ್ನು ತಿನ್ನುತ್ತಾ ಸುರಂಗ ಕೊರೆಯುತ್ತಿರುತ್ತವೆ. ಮೊಟ್ಟೆಯಿಂದ ಪ್ರೌಢ ಕೀಟಾವಸ್ಥೆ ತಲುಪಲು ಸುಮಾರು 25 ರಿಂದ 35 ದಿನಗಳು ಬೇಕಾಗುತ್ತದೆ.
ಹೆಣ್ಣು ಮತ್ತು ಗಂಡು ಕೀಟಗಳ ಸಮಾಗಮ ಬೀಜದ ಒಳಗೆ ನಡೆಯುತ್ತದೆ. ಗರ್ಭಧರಿಸಿದ ಹೆಣ್ಣು ಕೀಟ ತನ್ನ ಮೂಲ ಸುರಂಗವನ್ನು ತೊರೆದು ಹೊಸ ಕಾಫಿ ಹಣ್ಣಿನೊಳಗೆ ಸೇರಿ ಮೊಟ್ಟೆಗಳನ್ನಿಡುತ್ತದೆ. ಗಂಡು ಕೀಟಕ್ಕೆ ಹಾರುವ ಶಕ್ತಿ ಇಲ್ಲದ ಕಾರಣ ತಾನು ವಾಸಿಸುತ್ತಿರುವ ಸುರಂಗವನ್ನು ಬದಲಿಸುವುದಿಲ್ಲ. ಹೆಣ್ಣು ಕೀಟದ ಸರಾಸರಿ ಆಯಸ್ಸು 156 ದಿನಗಳು ಇರುವುದರಿಂದ ನಮ್ಮ ದೇಶದ ಹವಾಮಾನ ಗುಣಗಳನ್ನಾದರಿಸಿ ಒಂದು ಸಾಲಿನ ಫಸಲಿನಿಂದ ಮುಂದಿನ ಫಸಲನ್ನು ತಲುಪಲು ಸಾಧ್ಯವಾಗುತ್ತದೆ.
ಈ ಕೀಟದ ಹಾವಳಿ ತಡೆಗಟ್ಟಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಸಕಾಲದಲ್ಲಿ ಅನುಸರಿಸುವುದರಿಂದ ಕಾಫಿಯನ್ನು ಲಾಭದಾಯಕವನ್ನಾಗಿ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಗೋಣಿಕೊಪ್ಪಲುವಿನ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ ಸಮಗ್ರ ಹತೋಟಿ ಕ್ರಮಗಳನ್ನು ರೂಪಿಸಿದ್ದು, ಸೂಕ್ತ ಬೇಸಾಯ ಪದ್ಧತಿಗಳು, ಜೈವಿಕ ಮತ್ತು ರಾಸಾಯನಿಕ ಹತೋಟಿ ಕ್ರಮಗಳು ಸೇರಿದಂತೆ ಸಮಗ್ರ ನಿರ್ವಹಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಅಳವಡಿಸುವುದರಿಂದ ಈ ಕೀಟದ ಹಾವಳಿ ಕಡಿಮೆ ಮಾಡಲು ಸಾಧ್ಯವಿದೆ.
ಕಾಯಿಕೊರಕ ಕೀಟದ ಹತೋಟಿ ಕ್ರಮಗಳು:
ಗಿಡಗಳಲ್ಲಿರುವ ಅಕಾಲಿಕ ಕಾಯಿ ಮತ್ತು ಹಿಂದಿನ ವರ್ಷ ಕೊಯ್ಲು ಮಾಡದೇ ಉಳಿದುಕೊಂಡಿರುವ ಹಣ್ಣುಗಳನ್ನು ಪೂರ್ತಿಯಾಗಿ ಕಿತ್ತು ನಾಶ
ಪಡಿಸಬೇಕು. ಇಲ್ಲದಿದ್ದರೆ ಇವುಗಳಲ್ಲಿರುವ ಕೀಟದ ಸಂತತಿ ಮುಂದಿನ ಫಸಲಿಗೆ ಹರಡಲು ಕಾರಣವಾಗುತ್ತದೆ. ಕಾಫಿ ಕೊಯ್ಲು ಮುಗಿದ ನಂತರ ಗಿಡಗಳಲ್ಲಿ ಉಳಿದಿರುವ ಮತ್ತು ನೆಲದಲ್ಲಿ ಬಿದ್ದ ಹಣ್ಣುಗಳನ್ನು ಸಂಪೂರ್ಣವಾಗಿ ಆಯ್ದು ಶೇಖರಿಸಬೇಕು. ಹಣ್ಣುಗಳನ್ನು ಕೊಯ್ಲು ಮಾಡುವಾಗ ನೆಲದ ಮೇಲೆ ಕೊಯ್ಲಿನ ಚಾಪೆ ಅಥವಾ ಪಾಲಿಥೀನ್ ಹಾಳೆಗಳನ್ನು ಹರಡಿ ಹಣ್ಣುಗಳು ನೆಲಕ್ಕೆ ಬೀಳದಂತೆ ತಡೆಯಬೇಕು. ಹಾನಿಗೊಳಗಾದ ಕಾಫಿ ಹಣ್ಣುಗಳನ್ನು ಕುದಿಯುವ ನೀರಿನಲ್ಲಿ ಒಂದರಿAದ ಎರಡು ನಿಮಿಷಗಳವರೆಗೆ ಅದ್ದಿ ತೆಗೆದು ಒಣಗಿಸಬೇಕು. ಹೆಚ್ಚು ಹಾನಿಗೊಳಗಾದ ಹಣ್ಣುಗಳನ್ನು ಶೇಖರಿಸಿ ಬೆಂಕಿಯಲ್ಲಿ ಸುಟ್ಟು ನಾಶಗೊಳಿಸಬೇಕು ಅಥವಾ 20 ಇಂಚು ಆಳದ ಗುಂಡಿ ತೆಗೆದು ಅದರಲ್ಲಿ ಅಂತ ಹಣ್ಣುಗಳನ್ನು ಹೂಳಬೇಕು. ಭಾದೆಗೂಳಗಾದ ಕಾಫಿಯನ್ನು ಪ್ರತ್ಯೇಕವಾಗಿ ಶೇಖರಿಸಬೇಕು ಮತ್ತು ಆರೋಗ್ಯವಂತ ಕಾಯಿಗಳ ಜೂತೆ ಮಿಶ್ರಣ ಮಾಡಬಾರದು. ಕಾಫಿ ತೋಟದಲ್ಲಿ ಸೂಕ್ತವಾದ ನೆರಳನ್ನು ಒದಗಿಸಬೇಕು ಮತ್ತು ಸೂಕ್ತ ರೀತಿಯಲ್ಲಿ ಶಿಫಾರಸ್ಸು ಮಾಡಿದ ಪ್ರಕಾರ ಗಿಡಗಳ ಗೆಲ್ಲುಗಳನ್ನು ಕತ್ತರಿಸಬೇಕು. ಇದರಿಂದ ಕಾಯಿಕೊರಕದ ಭಾದೆಗೊಳಗಾದ ಗೆಲ್ಲುಗಳಲ್ಲಿರುವ ಕಾಯಿಗಳು ನಾಶವಾಗುವುದರ ಜೊತೆಗೆ ಗಿಡಗಳ ಆರೋಗ್ಯ ಕಾಪಾಡಬಹುದು. ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸುವಾಗ ಸೂಕ್ತ ತೇವಾಂಶವಿರುವ ಹಾಗೆ ನೋಡಿಕೊಳ್ಳಬೇಕು. ಕಾಫಿ ಕೊಯ್ಲಿನ ಸಮಯದಲ್ಲಿ ಮತ್ತು ನಂತರದ ದಿನಗಳಲ್ಲಿ ಕಾಯಿಕೊರಕವನ್ನು ಆಕರ್ಷಿಸಲು ಎಕರೆಗೆ 20 ಬ್ರೋಕ ಎಂಬ ಲಿಂಗಾಕರ್ಷಕ ಬಲೆಗಳನ್ನು ಅಳವಡಿಸಬೇಕು.
ಬೆವೇರಿಯಾ ಬಾಸ್ಸಿಯಾನ ಎಂಬ ರೋಗಕಾರಕ ಶಿಲೀಂಧ್ರವನ್ನು ಜುಲೈ- ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕಾಯಿಕೊರಕದ ಹತೋಟಿಗೆ 1.5 ಕೆ.ಜಿಯನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಕಾಯಿಗಳ ಮೇಲೆ ಸಿಂಪಡಿಸಬೇಕು. ಹಾನಿಗೊಳಗಾದ ತೋಟದಿಂದ ಬೇರೆಡೆಗೆ ಕಾಫಿ ಸಾಗಿಸಬೇಕಾದ ಸಂದರ್ಭದಲ್ಲಿ ಕೀಟದಿಂದ ಸಂಪೂರ್ಣ ಮುಕ್ತಗೊಳಿಸಿದ ನಂತರ ಮಾತ್ರ ಸಾಗಿಸಬೇಕು. ಕಾಫಿ ಶೇಖರಣೆ ಮಾಡಲು ಸಾಧ್ಯವಾದಷ್ಟು ಮಟ್ಟಿಗೆ ಹೊಸ ಚೀಲಗಳನ್ನು ಉಪಯೋಗಿಸುವುದು ಸೂಕ್ತ. ಹೆಚ್ಚಿನ ಮಾಹಿತಿಗೆ ಗೋಣಿಕೊಪ್ಪದ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ದೂರವಾಣಿ ಸಂಖ್ಯೆ 08274-247274 ಸಂಪರ್ಕಿಸಬಹುದು.
ಡಾ. ವೀರೇಂದ್ರ ಕುಮಾರ್, ಸಸ್ಯ ಸಂರಕ್ಷಣಾ ತಜ್ಞ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ