

ಮಡಿಕೇರಿ
ಕಾಫಿಗೆ ಈಗ ಇತಿಹಾಸದಲ್ಲೇ ಅತ್ಯುತ್ತಮ ಬೆಲೆ ಬಂದಿದೆ. ಆದರೆ ಬೆಳೆ ಇಲ್ಲದ ಕಾರಣ ಇದರ ಪ್ರಯೋಜನ ಬೆಳೆಗಾರನಿಗೆ ಆಗುತ್ತಿಲ್ಲ. ಕಾಫಿ ಬೆಲೆ ಈ ವರ್ಷವೂ ಹೀಗೆಯೇ ಮುಂದುವರಿಯಲಿದೆ. ಹಾಗೆಂದು ಬೆಳೆಗಾರ ಸಂಭ್ರಮ ಪಡುವ ಸ್ಥಿತಿಯಲ್ಲೂ ಇಲ್ಲ. ಏಕೆಂದರೆ ಹವಾಮಾನ ವೈಪರಿತ್ಯದ ಕಾರಣದಿಂದ ಪ್ರಸ್ತುತ ಹಂಗಾಮಿನಲ್ಲೂ ಕಾಫಿಯ ಇಳುವರಿ ಅಷ್ಟಕಷ್ಟೇ ಕಂಡು ಬರುತ್ತಿದೆ. ಇದರ ಜತೆಗೆ ಬೆಳೆ ಹಾನಿ ಪರಿಹಾರದಿಂದಲೂ ಕಾಫಿ ಬೆಳೆಗಾರರು ವಂಚಿತರಾಗಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ದೇಶದಲ್ಲಿ 1.13 ಲಕ್ಷ ಮೆಟ್ರಿಕ್ ಟನ್ ಅರೆಬಿಕಾ ಮತ್ತು 2.612 ಮೆಟ್ರಿಕ್ ಟನ್ ರೋಬಸ್ಟಾ ಸೇರಿದಂತೆ ಒಟ್ಟು 3.742 ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಆಗುವ ಅಂದಾಜನ್ನು ಭಾರತೀಯ ಕಾಫಿ ಮಂಡಳಿ ಮಾಡಿದೆ. ಇದರಲ್ಲಿ 81.960 ಸಾವಿರ ಮೆಟ್ರಿಕ್ ಟನ್ ಅರೆಬಿಕಾ, 1.849 ಲಕ್ಷ ಮೆಟ್ರಿಕ್ ಟನ್ ರೊಬಸ್ಟಾ ಸೇರಿದಂತೆ ಒಟ್ಟು 2.668 ಲಕ್ಷ ಮೆಟ್ರಿಕ್ ಟನ್ ಕಾಫಿ ಕರ್ನಾಟಕದಲ್ಲಿ ಉತ್ಪಾದನೆಯಾಗಲಿದ್ದು, 21.06 ಸಾವಿರ ಮೆಟ್ರಿಕ್ ಟನ್ ಅರೆಬಿಕಾ, 1.092 ಲಕ್ಷ ಟನ್ ರೋಬಸ್ಟಾ ಸೇರಿದಂತೆ ಒಟ್ಟು 1.302 ಲಕ್ಷ ಮೆಟ್ರಿಕ್ ಟನ್ ಕಾಫಿ ಕೊಡಗಿನಲ್ಲಿ ಉತ್ಪಾದನೆ ಆಗುವ ಅಂದಾಜು ಲೆಕ್ಕಾಚಾರವನ್ನು ಕಾಫಿ ಮಂಡಳಿ ನಡೆಸಿದೆ. ಇದು ಕಾಫಿಯ ಹೂವು ಅರಳಿದ ನಂತರ ಕಾಫಿ ಮಂಡಳಿ ನಡೆಸಿರುವ ಸಮೀಕ್ಷೆಯಲ್ಲಿ ಕಂಡು ಬಂದಿರುವ ಅಂಕಿ ಅಂಶ.
ಬೆಳೆಗಾರರ ಮಾಹಿತಿ ಪ್ರಕಾರ ಈ ವರ್ಷ ಕಾಫಿ ಹೂವು ಅರಳುವುದಕ್ಕೆ ಪೂರಕವಾದ ವಾತಾವರಣವೇ ಇರಲಿಲ್ಲ. ಅನುಕೂಲಸ್ಥರು ಕೃತಕ ನೀರಾವರಿ ವ್ಯವಸ್ಥೆ ಮೂಲಕ ತಮ್ಮ ತೋಟದಲ್ಲಿ ಕಾಫಿ ಹೂವು ಅರಳುವಂತೆ ನೋಡಿಕೊಂಡರಾದರೂ ಮೇ ಅಂತ್ಯದ ತನಕದ ಸುಡು ಬಿಸಿಲಿನಿಂದಾಗಿ ಕಾಫಿ ಹೂವು ಅರಳಿದ ನಂತರದ ಹಂತವಾಗಿ ಕಾಯಿ ಕಟ್ಟುವುದಕ್ಕೆ ಬೇಕಾದ ಅನುಕೂಲ ಆಗಲಿಲ್ಲ. ಇದರಿಂದಾಗಿ ಬಹುತೇಕ ಕಾಫಿ ಫಸಲು ಈ ಅವಧಿಯಲ್ಲೇ ಬೆಳೆಗಾರನಿಗೆ ಕೈಕೊಟ್ಟಿದೆ. ಜೂನ್ ನಂತರ ಅತಿವೃಷ್ಠಿ ಆರಂಭವಾದ ಕಾರಣ ಅಳಿದುಳಿದ ಫಸಲು ಕೂಡ ಹಾಳಾಗಿ ಕಾಫಿ ಮಂಡಳಿಯ ಅಂದಾಜು ಸಂಪೂರ್ಣ ಉಲ್ಟಾ ಆಗಿದ್ದು, ಶೇ.40 ರಷ್ಟು ಫಸಲು ಹಾನಿಯಾಗಿದೆ ಎಂದು ಬೆಳೆಗಾರರು ಹೇಳುತ್ತಾರೆ.
ಜುಲೈ, ಆಗಸ್ಟ್ನಲ್ಲಿ ಮಳೆಯ ಪ್ರಮಾಣ ವಿಪರೀತವಾದ ಕಾರಣ ಕಾಫಿಯಲ್ಲಿ ಕೊಳೆ ರೋಗ ಕಾಣಿಸಿಕೊಂಡಿತ್ತು. ಕಾಫಿ ಗಿಡದ ಗೊಂಚಲಿನಲ್ಲೇ ಕೊಳೆತು ಹಾಳಾಗಿ, ಬಹುತೇಕ ಗಿಡದಿಂದ ಉದುರಿಹೋಗಿ ಬೆಳೆಗಾರ ಕಂಗಾಲಾಗುವAತೆ ಆಗಿದೆ. ಕೊಡಗಿನಲ್ಲಿ ಈ ವರ್ಷ ಶೇ. 11ರಷ್ಟು ಮಳೆಯ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿಯೇ ಕಾಫಿ ಬೆಳೆಗಾರ ನಷ್ಟ ಅನುಭವಿಸುವಂತಾಗಿದೆ. ಕಳೆದ ಒಂದು ವಾರದಿಂದ ಮಳೆ ಸ್ವಲ್ಪ ಕಡಿಮೆ ಆದಂತೆ ಕಂಡುಬರುತ್ತಿದ್ದರೂ ಮಂಗಳವಾರ ಜಿಲ್ಲೆಯ ಕೆಲವಡೆ ಮಳೆಯಾಗಿದೆ. ಬುಧವಾರ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದೆ.
ಇದೀಗ ನವೆಂಬರ್‌ನಲ್ಲೂ ಮಳೆ ಸುರಿಯುತ್ತಿರುವುದು ಅರೆಬಿಕಾ ಕಾಫಿ ಬೆಳೆಗಾರರನ್ನು ಚಿಂತೆಗೆ ದೂಡಿದೆ. ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಅರೆಬಿಕಾ ಕಾಫಿ ಬೆಳೆಯಲಾಗುತ್ತದೆ. ಇದೀಗ ಗಿಡದಲ್ಲಿ ಕಾಫಿ ಹಣ್ಣಾಗಲಾರಂಭಿಸಿದ್ದು, ಅಲ್ಲಲ್ಲಿ ಕೊಯ್ಲು ಕೆಲಸ ಶುರುವಾಗಿದೆ. ಆದರೆ ಮಳೆಯ ಆತಂಕದಿAದಾಗಿ ಇಲ್ಲೂ ಕಾಫಿ ಬೆಳೆಗಾರ ನಷ್ಟದ ಆತಂಕ ಎದುರಿಸುತ್ತಿದ್ದಾನೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಡೆಸೆಂಬರ್ ತನಕವೂ ಮಳೆಯ ವಾತಾವರಣ ಇರಲಿದೆ. ಇದು ಕೂಡ ಕಾಫಿ ಬೆಳೆಗಾರ ಕಂಗಾಲಾಗುವAತೆ ಮಾಡಿದೆ.
ಈ ಮಧ್ಯೆ ಕಾಫಿಗೆ ಉತ್ತಮ ಬೆಲೆ ಬಂದಿದೆ. ಕರ್ನಾಟಕ ಪ್ಲಾಂರ‍್ಸ್ ಅಸೋಸಿಯೇಷನ್ ಮಾಹಿತಿ ಪ್ರಕಾರ ಬುಧವಾರ (ನ.13) ರೋಬಸ್ಟಾ ಚೆರಿ 50 ಕೆಜಿ ಚೀಲಕ್ಕೆ 10,400-10,800 ರೂ. ಬೆಲೆ ಇದೆ. ರೋಬಸ್ಟಾ ಪಾರ್ಚಿಮೆಂಟ್ 50 ಕೆಜಿ ಚೀಲಕ್ಕೆ 17,200-17,800 ರೂ. ಇದೆ. ಅರೆಬಿಕಾ ಚೆರಿ 50 ಕೆಜಿ ಚೀಲಕ್ಕೆ 10,700-11,200 ರೂ. ಇದ್ದರೆ, ಅರೆಬಿಕಾ ಪಾರ್ಚಿಮೆಂಟ್ 50 ಕೆಜಿ ಚೀಲಕ್ಕೆ 17,200-17,600 ರೂ. ಇದೆ. ಮಾರುಕಟ್ಟೆ ತಜ್ಞರ ಪ್ರಕಾರ ಜಾಗತಿಕ ಬೇಡಿಕೆಯಲ್ಲಿ ಗಣನೀಯ ಏರಿಕೆ, ವಿಶ್ವದ ಅಗ್ರಗಣ್ಯ ಕಾಫಿ ರಪ್ತುದಾರ ಬ್ರೆಜಿಲ್, ಇಂಡೋನೇಷ್ಯಾ ಮತ್ತು ವಿಯಟ್ನಾಂನಲ್ಲಿ ಹವಾಮಾನ ವೈಪ್ಯರಿತ್ಯದಿಂದಾಗಿ ರೋಬಸ್ಟಾ ಕಾಫಿ ಬೆಳೆ ನಾಶವಾಗಿರುವುದರಿಂದ ಕಾಫಿ ದರ ಏರಿಕೆ ಆಗಿದೆ ಎನ್ನಲಾಗುತ್ತಿದೆ.
ಇಷ್ಟು ಬೆಲೆ ಇದ್ದರೂ ಬೆಳೆಗಾರನ ಬಳಿ ಕಾಫಿ ಫಸಲು ಇಲ್ಲದ ಕಾರಣ ಆತನಿಗೆ ಇದರಿಂದ ಯಾವುದೇ ಲಾಭ ಆಗುತ್ತಿಲ್ಲ. ಅಕಾಲಿಕ ಮಳೆ, ಮುಂಗಾರು ವಿಳಂಬ, ರೋಗಬಾಧೆ, ಕಾರ್ಮಿಕರ ಕೊರತೆ, ದುಪ್ಪಟ್ಟು ಕೂಲಿ, ಗಗನಕ್ಕೇರಿದ ರಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬೆಲೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿ ಕಾಫಿ ಬೆಳೆಗಾರರು ಸಾಲಗಾರರಾಗಿದ್ದರು. ಅನೇಕರು ಕಾಫಿ ತೋಟ ನಿರ್ವಹಣೆ ಮಾಡಲಾಗದೇ ಪಾಳುಬಿಟ್ಟಿದ್ದರು. ಇದೀಗ ಬೆಲೆ ಇದ್ದರೂ ಬೆಲೆ ಇಲ್ಲದೆ ಬೆಳೆಗಾರ ಪರಿತಪಿಸುವಂತಾಗಿದೆ.
ಅತಿವೃಷ್ಟಿ ಮತ್ತು ಅನಾವೃಷ್ಠಿಯಿಂದ ಹಾನಿಗೆ ಒಳಗಾದ ಕಾಫಿ ಬೆಳೆಗೆ ಕಳೆದ 2 ವರ್ಷಗಳಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. 2021, 2022ರಲ್ಲಿ ಕಾಫಿ ಬೆಳೆಗಾರರಿಗೆ ಸರ್ಕಾರದಿಂದ ಉತ್ತಮ ಪರಿಹಾರ ಬಂದಿತ್ತು. ಎನ್‌ಡಿಆರ್‌ಎಫ್ ಮಾರ್ಗಸೂಚಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಗೆ ಹಾನಿ ಆಗಿದೆ. ಹಾಗಾಗಿ ಎನ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹರಾಗಿದ್ದೇವೆ ಎನ್ನುತ್ತಾರೆ ಕಾಫಿ ಬೆಳೆಗಾರರು. ಈ ನಿಟ್ಟಿನಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪಾತ್ರ ಮಹತ್ವದ್ದಾಗಿದ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಮುಖಾಂತರ ಕಾಫಿ ಬೆಳೆಗಾರರಿಗೆ ಪರಿಹಾರ ಬಿಡುಗಡೆ ಮಾಡಿಸಬೇಕಿದೆ ಎನ್ನುವ ಒತ್ತಾಯ ಕೇಳಿಬರುತ್ತಿದೆ.
ಜಿಲ್ಲೆಯಲ್ಲಿ ಶೇ 98ರಷ್ಟು ಪ್ರಮಾಣದಲ್ಲಿ ಸಣ್ಣ ಕಾಫಿ ಬೆಳೆಗಾರರೇ ಇದ್ದಾರೆ. ಇವರಲ್ಲಿ ಬಹುತೇಕರು ಫಸಲು ಬಂದ ಕೂಡಲೇ ಕಾಫಿ ಮಾರಾಟ ಮಾಡಿ ಬಿಟ್ಟಿರುತ್ತಾರೆ. ಇದೀಗ ಬೆಲೆ ಇದ್ದರೂ ಮಾರಾಟ ಮಾಡಲು ಇವರ ಬಳಿ ಕಾಫಿ ಇರುವುದಿಲ್ಲ. ಕಾಫಿ ತೋಟದ ನಿರ್ವಹಣೆ ಮಾಡಲು ಕೂಡ ಈ ಬೆಳೆಗಾರರು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರದ ಪರಿಹಾರ ಸಿಕ್ಕಿದರೆ ಒಂದಿಷ್ಟು ಅನುಕೂಲ ಆಗುತ್ತದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
=====
ಬಾಕ್ಸ್:
ಮಡಿಕೇರಿ ತಾಲೂಕಿನಲ್ಲಿ 1,250 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಮತ್ತು 22,956 ಹೆ. ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನಲ್ಲಿ 25,050 ಹೆ.ನಲ್ಲಿ ಅರೇಬಿಕಾ ಮತ್ತು 6,870 ಹೆ. ಪ್ರದೇಶದಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ 1,740 ಹೆ.ನಲ್ಲಿ ಅರೇಬಿಕಾ ಮತ್ತು 50,453 ಹೆ. ರೋಬಸ್ಟಾ ಬೆಳೆಯಲಾಗುತ್ತಿದೆ. ಕೊಡಗು ಜಿಲ್ಲೆ 4,106 ಚದರ ಕಿ.ಮೀ. ವ್ಯಾಪ್ತಿ ಹೊಂದಿದ್ದು, 1,197 ಚ.ಕಿ. ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ.44ರಷ್ಟು ಕೊಡಗಿನಲ್ಲಿ ಉತ್ಪಾದನೆಯಾಗುತ್ತಿದೆ. ಭಾರತದ ಮಟ್ಟಿಗೆ ಶೇ.35ರಷ್ಟು ಕಾಫಿ ಕೊಡಗಿನಿಂದ ಬರುತ್ತಿದೆ.
ಕಾಫಿಗೆ ಉತ್ತಮ ಬೆಲೆ ಇದ್ದರೂ ಬೆಳೆಗಾರರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಶೇ. 99ರಷ್ಟು ಬೆಳೆಗಾರರು ತಮ್ಮಲ್ಲಿದ್ದ ಕಾಫಿ ಮಾರಾಟ ಮಾಡಿದ್ದಾರೆ. ಮತ್ತೊಂದು ಕಡೆ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಫಸಲು ನಾಶವಾಗಿ ಕಾಫಿಯೇ ಇಲ್ಲದಂತಾಗಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಕಾಫಿ ಬೆಳೆಗಾರರಿಗೆ ನಷ್ಟ ಪರಿಹಾರ ಬಿಡುಗಡೆ ಮಾಡಬೇಕು. ಕಾಫಿಯನ್ನು ಫಸಲ್ ಭೀಮಾ ಯೋಜನೆ ವ್ಯಾಪ್ತಿಗೆ ಸೇರಿಸಬೇಕು..
ಡಾ. ಸಣ್ಣುವಂಡ ಕಾವೇರಪ್ಪ, ಮಾಜಿ ಉಪಾಧ್ಯಕ್ಷ, ಭಾರತೀಯ ಕಾಫಿ ಮಂಡಳಿ
ಕೊಡಗು ಜಿಲ್ಲೆಯಲ್ಲಿ ಬೆಳೆಯುವ ಕಾಫಿ ಗುಣಮಟ್ಟದಿಂದ ಕೂಡಿದೆ. ಭಾರತದ ಅರೇಬಿಕಾ ಮತ್ತು ರೋಬಸ್ಟಾ ಕಾಫಿಗೆ ಅಂತಾರಾಷ್ಟಿçÃಯ ಮಟ್ಟದಲ್ಲಿ ಬೇಡಿಕೆಯಿದೆ. ಬೆಳೆಗಾರರು ಇದೇ ಗುಣಮಟ್ಟ ಕಾಯ್ದುಕೊಂಡರೆ ಮುಂದಿನ ದಿನಗಳಲ್ಲೂ ಕಾಫಿಗೆ ಇನ್ನು ಹೆಚ್ಚಿನ ಬೆಲೆ ಸಿಗಲಿದೆ. ಬೇಡಿಕೆ ಹೆಚ್ಚಾದರೆ ಬೆಲೆಯೂ ಹೆಚ್ಚಾಗುತ್ತದೆ. ಈಗ ರೋಬಸ್ಟಾ ಕಾಫಿಗೂ ಬೆಲೆ ಜಾಸ್ತಿಯಾಗಿದೆ.
ಡಾ. ಚಂದ್ರಶೇಖರ್, ಉಪನಿರ್ದೇಶಕ, ಕಾಫಿ ಮಂಡಳಿ, ಮಡಿಕೇರಿ