

ಧಾರವಾಡ: ಜಿಲ್ಲೆಯಲ್ಲಿ ಡಿ. 22 ಮತ್ತು 27ರಂದು ಜರುಗುವ ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಪ.ಪಂ., ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿ ಹೊರತುಪಡಿಸಿ ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯ ಪ್ರದೇಶಕ್ಕೆ ಅನ್ವಯವಾಗುವಂತೆ ಡಿ. 31ರ ಸಂಜೆ 5ರವರೆಗೆ ನೀತಿ ಸಂಹಿತೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.
ಜಿಪಂ, ತಾಪಂ ಸಾಮಾನ್ಯ ಸಭೆ ನಡೆಸಲು ಅಡ್ಡಿ ಇಲ್ಲ. ಆದರೆ, ಹೊಸ ಯೋಜನೆಗಳ ಅನುಷ್ಠಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಥವಾ ಯೋಜನೆಯಡಿ ಇತರ ಕಾಮಗಾರಿಗಳನ್ನು ತೆಗೆದುಕೊಂಡು ಅನುಷ್ಠಾನಗೊಳಿಸಬಹುದು. ಆದರೆ, ಸಾರ್ವಜನಿಕ ಸಮಾರಂಭ ಅಥವಾ ರಾಜಕೀಯ ನಾಯಕರ ಉಪಸ್ಥಿತಿಯಲ್ಲಿ ಸಭೆ ನಡೆಸುವಂತಿಲ್ಲ. ನೆರೆ ಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಡಿತ ಜನ ಸಮುದಾಯಕ್ಕೆ ನೀಡಲಾಗುವ ಪರಿಹಾರ ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ.
ಗ್ರಾಪಂ ಚುನಾವಣೆ ಪಕ್ಷರಹಿತ. ರಾಜಕೀಯ ಪಕ್ಷಗಳ ಚಿಹ್ನೆ, ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಉಪಯೋಗಿಸಿ ಪ್ರಚಾರ ಮಾಡುವಂತಿಲ್ಲ. ನಡೆಸಿದರೆ ಕರಪತ್ರ, ಪೋಸ್ಟರ್, ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಸಾಂಸ್ಕೃತಿಕ ಹಾಗೂ ಧಾರ್ವಿುಕ ಸಭೆ, ಸಮಾರಂಭ ನಡೆಸಲು ಅಡ್ಡಿ ಇಲ್ಲ. ಆದರೆ, ರಾಜಕೀಯ ವ್ಯಕ್ತಿಗಳು ಭಾಗವಹಿಸಿ ಘೊಷಣೆ, ಹೇಳಿಕೆ ಅಥವಾ ಆಶ್ವಾಸನೆ ನೀಡುವಂತಿಲ್ಲ ಎಂದು ತಿಳಿಸಿದ್ದಾರೆ.
ಡಿಸಿ ತಿಳಿಸಿದ್ದು...
* ವಿಧಾನಸಭೆ ಮತ್ತು ಸಂಸತ್ ಸದಸ್ಯರಿಗೆ ಒದಗಿಸಲಾಗಿದ ವಾಹನವನ್ನು ವಶಕ್ಕೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ, ಚುನಾವಣೆ ಪ್ರಚಾರಗಳಿಗೆ ಸರ್ಕಾರಿ ವಾಹನಗಳನ್ನು ಬಳಸಿದರೆ ವಶಪಡಿಸಿಕೊಳ್ಳಲಾಗುತ್ತದೆ.
* ಜಿಪಂ, ತಾಪಂ, ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ನೀಡಲಾದ ಸರ್ಕಾರಿ ವಾಹನಗಳನ್ನು ಜಿಲ್ಲಾಡಳಿತಕ್ಕೆ ನೀಡಬೇಕು.
* ಜಿಲ್ಲೆ, ತಾಲೂಕು ಮಟ್ಟದಲ್ಲಿ ಪಡಿತರ ಚೀಟಿ ವಿತರಣೆ, ಗ್ರಾಮೀಣ ಭಾಗಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೀರ್ಮಾನ ಕೈಗೊಳ್ಳುವ ಸಭೆಗಳನ್ನು ಸಚಿವರು, ಶಾಸಕರು ಮತ್ತು ಅಧಿಕಾರಿಗಳು ನಡೆಸುವಂತಿಲ್ಲ.
* ಜನಸ್ಪಂದನ ಸಭೆ ನಡೆಸುವಂತಿಲ್ಲ.
* ಭೂನ್ಯಾಯ ಮಂಡಳಿ ಸಮಿತಿ ಸಭೆ, ಮಂತ್ರಿಗಳು ಅಥವಾ ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಮತ್ತು ಇತರ ಸಭೆಗಳು ನಿಷಿದ್ಧ