ಕೋಡ್ ಬ್ಯಾಟಲ್ 2025 ಸಮಾರೋಪ ಸಮಾರಂಭ

HALIYAL VDIT HACKATHON
Published on

ಹಳಿಯಾಳ: ಸಾಮಾಜಿಕ ಸವಾಲುಗಳಿಗೆ ಪರಿಹಾರ ಒದಗಿಸುವ ವಿದ್ಯಾರ್ಥಿಗಳ ಶ್ರಮ ಹ್ಯಾಕಥಾನ್ ಸ್ಪರ್ಧೆಗಷ್ಟೇ ಸೀಮಿತವಾಗಿರದೆ, ನಿರಂತರವಾಗಿ ಇರಬೇಕು ಎಂದು ಬೆಂಗಳೂರಿನ ಅಡ್ವಾನ್ಸ್ ಎಲೆಕ್ಟ್ರಾನಿಕ್ ಸಿಸ್ಟಮ್ ಸೊಲ್ಯೂಷನ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಶ್ಯಾಮ ಭಟ್ಟ ಅವರು ಹೇಳಿದರು.

ಪಟ್ಟಣದ ಕೆಎಲ್​ಎಸ್​ವಿಡಿಐಟಿ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆ ‘ಕೋಡ್ ಬ್ಯಾಟಲ್ 2025’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಚೆನ್ನೈಮೂಲದ ಸ್ವೈಪ್ ವೈರ್ ಸಂಸ್ಥೆಯ ತಂತ್ರಜ್ಞ ಶಶಾಂಕ್ ಭಗತ್ ವಿದ್ಯಾರ್ಥಿಗಳ ಯೋಚನಾ ಸಾಮರ್ಥ್ಯವನ್ನು ವೃದ್ಧಿಸುವ ಇಂತಹ ಸ್ಪರ್ಧೆಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಸ್ಪರ್ಧೆಗೆ ನಿರ್ಣಾಯಕರಾಗಿ ಆಗಮಿಸಿದ್ದ ಸ್ವೈಪ್ ವೈರ್ ಸಂಸ್ಥೆಯ ತಂತ್ರಜ್ಞ ವಿಕ್ರಾಂತ್ ಬಿ., ಬೆಂಗಳೂರಿನ ಆರ್ಕೆಟ್ರಾನ್ ಸಂಸ್ಥೆಯ ತಂತ್ರಜ್ಞರಾದ ಪ್ರೇಕ್ಷಿತಾ ಎಂ., ನಿಶಾ ಎಚ್., ಹರ್ಷ ಹೆರಳಗಿ ಉಪಸ್ಥಿತರಿದ್ದರು.

ಪ್ರಾಚಾರ್ಯ ಡಾ. ವಿ. ಎ. ಕುಲಕರ್ಣಿ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಪ್ರಮಾಣ ಪತ್ರ ಮತ್ತು ನಗದು ಪುರಸ್ಕಾರ ನೀಡಿದರು. ಮಹಾವಿದ್ಯಾಲಯದ ಐಇಇಇ ಸಂಚಾಲಕ ಹಾಗೂ ಈ ಸ್ಪರ್ಧೆಯ ಸಂಯೋಜಕ ಡಾ. ಅರುಣ್ ಕಾಖಂಡಕಿ ಸ್ವಾಗತಿಸಿದರು. ಪ್ರೊ. ಸೂರಜ್ ಕಡ್ಲಿ ವಂದಿಸಿದರು.

ವಿಜೇತರು

ಬೆಳಗಾವಿಯ ಜೈನ್ ತಾಂತ್ರಿಕ ಮಹಾವಿದ್ಯಾಲಯದ ವೈಷ್ಣವಿ ಭಟ್, ವಿನಾಯಕ ಎನ್., ಸುಪ್ರಿತ ಎಚ್., ಆಕಾಶ್ ಡಿ. ತಂಡ ಕೃತಕ ಬುದ್ಧಿಮತ್ತೆ ವಿಷಯದಲ್ಲಿ ಪ್ರಥಮ, ಕೆಎಲ್​ಇಐಟಿ ಹುಬ್ಬಳ್ಳಿಯ ನಮಿತ್, ರಾಜೇಶ್, ನೀರಜ್, ಪೃಥ್ವಿ ಒಳಗೊಂಡ ತಂಡ ಮಹಿಳೆಯರ ಸುರಕ್ಷತೆ ವಿಷಯದಲ್ಲಿ ಪ್ರಥಮ ಸ್ಥಾನಗಳಿಸಿದರು.

ಎಸ್​ಜಿಬಿಐಟಿ ಬೆಳಗಾವಿಯ ರಂಜಿತಾ, ರೋಹನ್, ಪ್ರಾಂಜಲ್, ಶೃತಿ ಅವರ ತಂಡ ಸೈಬರ್ ಸುರಕ್ಷತೆ ವಿಷಯದಲ್ಲಿ ಪ್ರಥಮ, ತುಮಕೂರಿನ ಸಿಐಟಿ ಮಹಾವಿದ್ಯಾಲಯದ ಲಕ್ಷ್ಮಿ, ಸಿಂಚನ ತಂಡ ವಿಪತ್ತು ನಿರ್ವಹಣೆ ವಿಷಯದಲ್ಲಿ ಪ್ರಥಮ ಸ್ಥಾನ.

ಬೆಳಗಾವಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಸೃಷ್ಟಿ, ದೀಲನ್, ದೀಕ್ಷಾ, ಶಿವಾನಿ ತಂಡವು ಆರೋಗ್ಯ ಸುರಕ್ಷತೆ ವಿಷಯದಲ್ಲಿ ಅಗ್ರಸ್ಥಾನ ಪಡೆದುಕೊಂಡರು.

ಸ್ಪರ್ಧಾ ವಿಜೇತ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಹ್ಯಾಕ್ ಥಾನ್ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ 20 ಮಹಾವಿದ್ಯಾಲಯದ 267 ವಿದ್ಯಾರ್ಥಿಗಳ 71 ತಂಡಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net