

ಉಡುಪಿ: ಕೇಂದ್ರ ಸರ್ಕಾರ ತೆಂಗು ಬೆಳೆ ರಪ್ತು ನಿಷೇಧ ತೆರವುಗೊಳಿಸಿದ್ದು, ಇದರಿಂದ ತೆಂಗಿನ ಕಾಯಿ ಹಾಗೂ ಇತರ ಉಪ ಉತ್ಪನ್ನಗಳಿವೆ ಹೆಚ್ಚಿನ ಬೇಡಿಕೆ ಬರಲಿದೆ. ಜತೆಗೆ ಈ ಬಾರಿ ತೆಂಗು ಅಭಿವೃದ್ಧಿ ಮಂಡಳಿಗೆ ಐಎಎಸ್ ಅಧಿಕಾರಿಗಳ ಬದಲು ರೈತರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಪ್ತು ಉದ್ಯಮಕ್ಕೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಈ ವರ್ಷ 305 ಮಿಲಿಯನ ಮೆಟ್ರಿಕ ಟನ್ ಧವಸಧಾನ್ಯ, 325 ಮಿಲಿಯನ್ ಮೆಟ್ರಿಕ್ ಟನ್ ತೋಟಗಾರಿಕಾ ಬೆಳೆಗಳನ್ನು ರಪ್ತು ಮಾಡಲಾಗಿದೆ. 2013-14ರಲ್ಲಿ ಯುಪಿಎ ಸರ್ಕಾರ ಕೃಷಿಗೆ 21 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದರೆ. ಕಳೆದ ವರ್ಷ ಬಜೆಟ್‌ನಲ್ಲಿ ಕೃಷಿ ಇಲಾಖೆಗೆ 1.30 ಲಕ್ಷ ಕೋಟಿ ರೂ. ನೀಡಲಾಗಿದೆ. ಇದರಲ್ಲಿ 8,517 ಕೋಟಿ ರೂ. ಕೃಷಿ ಸಂಶೋಧನೆಗೆ ವ್ಯಯಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಆಹಾರ ಪದಾರ್ಥ ರಪ್ತು ಮಾಡುವ ದೇಶಗಳ ಪೈಕಿ ಭಾರತ 9ನೇ ಸ್ಥಾನಕ್ಕೆ ತಲುಪಿದೆ ಎಂದು ತಿಳಿಸಿದರು.
10 ಸಾವಿರ ಎಫ್‌ಪಿಒ ರಚನೆ
ಕೃಷಿ ಅಭಿವೃದ್ಧಿ ನಿಧಿಗೆ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ. ಅನುದಾನ ನೀಡಿದ್ದು, ದೇಶಾದ್ಯಂತ ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಸೇರಿಸಿಕೊಂಡು 10 ಸಾವಿರ ರೈತ ಉತ್ಪಾದಕರ ಸಂಘ ರಚಿಸಲು ನಿರ್ಧರಿಸಲಾಗಿದೆ. ಆಹಾರಧಾನ್ಯಗಳ ಉತ್ಪಾದನೆ, ಶೇಖರಣೆ, ವಿತರಣೆಗೆ ಸಹಾಯಧನ ಸಹಿತ ಸಾಲ ಸೌಲಭ್ಯ ಒದಗಿಸುತ್ತಿದೆ. ರಾಜ್ಯದಲ್ಲಿ ರಪ್ತು ಉದ್ಯಮ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಮುಖ ಕೃಷಿ ಉತ್ಪಾದನಾ ಕ್ಲಸ್ಟರ್‌ಗಳನ್ನು ಹೆಚ್ಚಿಸಲಾಗುತ್ತಿದ್ದು, ಸಾವಯವ ಆಹಾರ ಪದಾರ್ಥಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆಹಾರ ಸಂಸ್ಕರಣಾ ಘಟಕಗಳಲ್ಲಿ ಎಥೆನಾಲ್ ಉತ್ಪಾದನೆಗೂ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ
ಭಾರತ ಶೇ.70ರಷ್ಟು ಖಾದ್ಯತೈಲಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಭನೆ ಸಾಧಿಸುವ ನಿಟ್ಟಿನಲ್ಲಿ ರೈತರಿಗೆ ಎಣ್ಣೆಕಾಳು ಮಿನಿಕಿಟ್ ವಿತರಣೆ, ಸಂಸ್ಕರಣಾ ಉದ್ಯಮ, ಸಂಶೋದನೆ ಆದ್ಯತೆ ನೀಡಲಾಗುತ್ತಿದೆ. ಉತ್ತರ ಭಾರತದಲ್ಲಿ ಪಾಮಲಿನ್ ಎಣ್ಣೆ ಮಿಶ್ರಿತ ಖಾದ್ಯತೈಲ ಉಪಯೋಗಿಸುತ್ತಿದ್ದಾರೆ. ಇದು ಆರೋಗ್ಯಕ್ಕೂ ಹಾನಿಕಾರಕ ಎಂದು ತಿಳಿಸಿದರು.
2023 ವಿಶ್ವ ಸಿರಿಧಾನ್ಯಗಳ ವರ್ಷ
ಭಾರತದ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವ ವಿಶ್ವಸಂಸ್ಥೆ 2023ನೇ ಇಸವಿಯನ್ನು ವಿಶ್ವ ಸಿರಿಧಾನ್ಯಗಳ ವರ್ಷ ಎಂಬುದಾಗಿ ಘೋಷಿಸಿದೆ. ಸಿರಿಧಾನ್ಯಗಳು ಒಣಪ್ರದೇಶದಲ್ಲಿ ಬೆಳೆಯುತ್ತಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ. ಇವುಗಳಿಗೆ ವಿದೇಶಗಳಿಂದ ಉತ್ತಮ ಬೇಡಿಕೆ ಇದ್ದು, ಕರ್ನಾಟಕದಲ್ಲಿ ಸಿರಿಧಾನ್ಯಗಳ ರಪ್ತು ಕ್ಲಸ್ಟರ್ ರಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಸುರೇಶ್ ನಾಯಕ್, ವಿಧಾನ ಪರಿಷತ್ ಸದಸ್ಯ ಮುನಿರಾಜು ಗೌಡ, ಬಿಜೆಪಿ ಹಿಂುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.