

ತಿಪಟೂರು: ರೈತರ ಹಿತ ಕಾಯಲು ನಫೆಡ್ ಮೂಲಕ ಕೊಬ್ಬರಿ ಖರೀದಿಸುತ್ತಿರುವ ಸರ್ಕಾರ, ಕೌಟಿನ ಬೆಲೆಗೆ ಕೊಬ್ಬರಿ ಮಾರುವ ಪರಿಸ್ಥಿತಿ ನಿರ್ಮಾಣಕ್ಕೂ ಮುಂಚೆ ಕೊಬ್ಬರಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಬೇಕಿದೆ.
ಚಿಪ್ಪಿನಿಂದ ಬೇರ್ಪಟ್ಟ ಕೊಬ್ಬರಿ ಅಂದಾಜು 6 ತಿಂಗಳ ನಂತರ ಎಣ್ಣೆ ತೆಗೆಯುವುದಕ್ಕೆ ಹೊರತುಪಡಿಸಿ, ಆಹಾರ ಬಳಕೆಗೆ ಯೋಗ್ಯವಲ್ಲ ಎನ್ನಲಾಗಿದೆ. 2000ದಿಂದ 2020ಕ್ಕೂ ಮುಂಚೆ ನಫೆಡ್ ಮೂಲಕ ಖರೀದಿಸಲಾದ ಸಾವಿರಾರು ಚೀಲ ಕೊಬ್ಬರಿ ಬಿಕರಿ ಆಗದೆ, ಹಳದಿ ಬಣ್ಣಕ್ಕೆ ತಿರುಗಿದ ಕಾರಣ ಖರೀದಿಸಿದ ತಪ್ಪಿಗೆ ಕೈ ತೊಳೆದುಕೊಂಡರೆ ಸಾಕು ಎನ್ನುವಂತೆ ಕೌಟಿನ ದರಕ್ಕೆ ಕೊಬ್ಬರಿ ಮಾರಿದ ಉದಾಹರಣೆಯ ಜತೆಗೆ ಕೆಲವೊಮ್ಮೆ ಆದಾಯವೂ ಬಂದಿದೆ. ಹಾಲಿ ಖರೀದಿ ಸಲಾಗುತ್ತಿರುವ ಕೊಬ್ಬರಿಗೆ ತಕ್ಷಣ ಮಾರುಕಟ್ಟೆ ಸೃಷ್ಟಿಸಿ, ಬೇಡಿಕೆ ಬರುವಂತೆ ಮಾಡುವ ಅಗತ್ಯವಿದೆ.
ಇಲ್ಲವಾದಲ್ಲಿ ಸರ್ಕಾರಕ್ಕೆ ಲುಕ್ಸಾನು ಕಟ್ಟಿಟ್ಟ ಬುತ್ತಿ.ಕೇಂದ್ರ ಸರ್ಕಾರ ಕಳೆದ ಜು.23ರಿಂದ ಪ್ರತೀ ಕ್ವಿಂಟಾಲ್ ಕೊಬ್ಬರಿಯನ್ನು 10.300 ರೂಪಾಯಿಯಂತೆ ಖರೀದಿಸುತ್ತಿದೆ. ಕೃಷಿ ಇಲಾಖೆ ರೂಪಿಸಿರುವ ಎಫ್‌ಐಡಿ ನಿಯಮಾನುಸಾರ ಪಹಣಿ ಹೊಂದಿರುವ ತಾಲೂಕಿನ ಪ್ರತೀ ರೈತರಿಂದ ಎಕರೆಗೆ 5 ಕ್ವಿಂಟಾಲ್ ಅಥವಾ ಗರಿಷ್ಠ 20 ಕ್ವಿಂಟಾಲ್‌ವರೆಗೂ ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಸಲಾಗುತ್ತಿದೆ.
ಸೆ. 8ರವರೆಗೂ ಒಟ್ಟು 891 ರೈತರು ಹೆಸರು ನೋಂದಾಯಿಸಿದ್ದು, ಈ ಪೈಕಿ 425 ಮಂದಿ ರೈತರಿಂದ 10,633 ಚೀಲ ಕೊಬ್ಬರಿ ಖರೀದಿಸಲಾಗಿದೆ. ಇವರಲ್ಲಿ 102 ಮಂದಿಯ ಬ್ಯಾಂಕ್ ಖಾತೆಗೆ 10,300 ರೂಪಾಯಿಯಂತೆ ಹಣ ಜಮೆ ಆಗಿದೆ. ಕೇಂದ್ರದ ಬೆಂಬಲ ಬೆಲೆ 10,300 ಕೊಬ್ಬರಿ ಉತ್ಪನ್ನ ಬೆಲೆಗಿಂತ ಕಡಿಮೆ ಎಂಬ ರೈತರ ಕೂಗು ಮತ್ತು ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮನವಿಗೆ ಓಗೊಟ್ಟ ರಾಜ್ಯ ಸರ್ಕಾರ 10,300ರ ಜತೆಗೆ ರಾಜ್ಯದ ಪಾಲು ಕ್ವಿಂಟಾಲ್‌ಗೆ 1000 ಘೋಷಿಸಿದೆ. ಆದರೆ ಸದ್ಯಕ್ಕೆ ರಾಜ್ಯ ಸರ್ಕಾರದ ಸಹಾಯಧನ ರೈತರ ಖಾತೆಗೆ ಜಮೆ ಆಗಿಲ್ಲ.
ನಫೆಡ್ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್ ಆರೋಪ:ರವಾನೆದಾರರು, ದಲ್ಲಾಳಿಗಳ ಮೂಲಕ ನಿಯಮಬಾಹಿರವಾಗಿ ಕೊಬ್ಬರಿ ಖರೀದಿಸಲಾಗುತ್ತಿದೆ ಎಂಬ ಆರೋಪ ತಳ್ಳಿಹಾಕಿರುವ ಖರೀದಿ ಕೇಂದ್ರದ ಉಸ್ತುವಾರಿ ಅಧಿಕಾರಿ ವೆಂಕಟರಮಣಪ್ಪ, ಇಲ್ಲಿ ಯಾರು ರವಾನೆದಾರರು, ಯಾರು ದಲ್ಲಾಳಿಗಳು ಎಂಬುದು ನಮಗೆ ಗೊತ್ತಿಲ್ಲ. ಎಫ್‌ಐಡಿ ಆಧಾರಿತ ಪಹಣಿ ಹೊಂದಿರುವ ಮತ್ತು ಹೆಸರು ನೋಂದಾಯಿಸಿರುವ ರೈತರಿಂದ 7ರಿಂದ 7.5 ಸೆ,ಮೀ, ಅಗಲದ ಗುಣಮಟ್ಟದ ಕೊಬ್ಬರಿ ಖರೀದಿಸಲಾಗುತ್ತಿದೆ. ರೈತರಿಗೆ ನಿರಾಸೆಯಾಗಬಾರದೆಂದು ಕೆಲವೊಮ್ಮೆ ರಾತ್ರಿಯಾದರೂ ಖರೀದಿ ಪ್ರಕ್ರಿಯೆ ಮುಂದುವರಿಸಲಾಗಿದೆ. ಇಲ್ಲಿ ಖರೀದಿಸಿದ ಕೊಬ್ಬರಿಯನ್ನು ತುರುವೇಕೆರೆ ಮತ್ತು ಶಿರಾ ವೇರ್‌ಹೌಸಿನಲ್ಲಿ ಇಡಲಾಗುತ್ತಿದೆ. ಕೊಬ್ಬರಿ ಗುಣಮಟ್ಟದ ಉಸ್ತುವಾರಿಗೆಂದೇ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಎಲ್ಲೂ ಮೋಸವಾಗಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರದ ಹಣವೇನೋ ಖಾತೆಗೆ ಜಮೆ ಆಗಿದೆ. ಆದರೆ ರಾಜ್ಯ ಸರ್ಕಾರ ಘೋಷಿಸಿರುವ 1 ಸಾವಿರ ರೂಪಾಯಿ ಇನ್ನೂ ಜಮೆ ಆಗಿಲ್ಲ. ಕೇಳಿದರೆ ಇಂದು, ನಾಳೆ ಎನ್ನುತ್ತಾರೆ. ಸಿದ್ದರಾಮಯ್ಯ ರೈತ, ತಿಮ್ಲಾಪುರ ಅಧಿಕಾರಿಗಳ ನಿರ್ಲಕ್ಷ್ಯ, ಸಾಗಣೆ ವೆಚ್ಚ, ದಿನಕಳೆದಂತೆ ತೂಕದಲ್ಲಿ ವ್ಯತ್ಯಾಸ, ಇನ್ನಿತರ ಕಾರಣಗಳಿಂದ ಕೆಲವೊಮ್ಮೆ ಖರೀದಿಗಿಂತ ಕಡಿಮೆ ದರಕ್ಕೆ ಮಾರಿದ ಉದಾಹರಣೆ ಜತೆಗೆ, ಕೆಲವೊಮ್ಮೆ ಒಳ್ಳೆ ಆದಾಯವೂ ಬಂದಿದೆ. ಬಿ.ಸಿ.ನಾಗೇಶ್ ತಿಪಟೂರು ಶಾಸಕ