ಆನೆ ದಾಳಿಗೆ ಅಡಕೆ, ತೆಂಗು ನಾಶ

26 NJD 03
ನಂಜನಗೂಡು ತಾಲೂಕಿನ ಕಾಡಂಚಿನ ಪ್ರದೇಶ ನಾಗಣಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಪ್ರಭುಸ್ವಾಮಿ ಅವರ ತೆಂಗು ಮತ್ತು ಅಡಕೆ ಬೆಳೆಗಳನ್ನು ಆನೆಗಳು ನಾಶ ಮಾಡಿರುವುದು.
Published on

ನಂಜನಗೂಡು : ತಾಲೂಕಿನ ಕಾಡಂಚಿನ ಗ್ರಾಮವಾದ ನಾಗಣಪುರದಲ್ಲಿ ಕಾಡಾನೆ ದಾಳಿಗೆ ಸೋಲಾರ್ ತಂತಿ, ತೆಂಗು ಮತ್ತು ಅಡಕೆ ಬೆಳೆ ನಾಶವಾಗಿದೆ. ಗ್ರಾಮದ ಪ್ರಭುಸ್ವಾಮಿ ಅವರ ಜಮೀನಿನಲ್ಲಿ 75ಕ್ಕೂ ಹೆಚ್ಚು ತೆಂಗಿನ ಮರ, ಆರು ಅಡಕೆ ಮರ ಹಾಗೂ ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ತಂತಿ ಬೇಲಿಯನ್ನು ಎರಡು ಆನೆಗಳು ಶುಕ್ರವಾರ ರಾತ್ರಿ ದಾಳಿ ಮಾಡಿ ಕಿತ್ತು ಬಿಸಾಡಿವೆ.

ಅರಣ್ಯ ಇಲಾಖೆ ಅಳವಡಿಸಿರುವ ರೈಲ್ವೆ ಕಂಬಿಗಳು ಮತ್ತು ಕಾಂಕ್ರೀಟ್ ಪಿಲ್ಲರ್‌ಗಳನ್ನು ದಾಟಿ ಜಮೀನಿಗೆ ನುಗ್ಗಿ ಲಕ್ಷಾಂತರ ರೂ. ವೆಚ್ಚ ಮಾಡಿ ಬೆಳೆದಿದ್ದ ಬೆಳೆಯನ್ನು ನಾಶ ಮಾಡಿವೆ. ಇದರಿಂದ ದಿಕ್ಕು ತೋಚದಂತಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಮೀನು ಮಾಲೀಕ ಪ್ರಭುಸ್ವಾಮಿ ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಯಡಿಯಾಲ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಲಾಖೆಯಿಂದ ದೊರೆಯುವ ಪರಿಹಾರವನ್ನು ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net