

ಅವಿನ್ ಶೆಟ್ಟಿ, ಉಡುಪಿ
ತೆಂಗು ಜಿಲ್ಲೆಯ ಪ್ರಮುಖ ಕೃಷಿ. ಸಣ್ಣ ಮತ್ತು ದೊಡ್ಡ ರೈತರಿಗೆ ಆದಾಯದ ಮೂಲ. ಸ್ಥಳೀಯ ಮತ್ತು ಹೊರ ರಾಜ್ಯಗಳಲ್ಲಿಯೂ ಜಿಲ್ಲೆಯ ತೆಂಗು ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಇತ್ತೀಚಿನ ವರ್ಷದಲ್ಲಿ ತೆಂಗು ಇಳುವರಿ ಕುಸಿತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತೆಂಗು ಪುನಶ್ಚೇತನಕ್ಕೆ ಯೋಜನೆ ರೂಪಿಸಿದೆ.
ಈ ಯೋಜನೆಯಲ್ಲಿ ಎಕರೆಗೆ 25 ಸಾವಿರ ರೂ.ಕ್ಕೂ ಹೆಚ್ಚು ಅನುದಾನವನ್ನು ರೈತರು ಪಡೆಯಲು ಅವಕಾಶವಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ತೆಂಗು ಕೃಷಿ ಹೆಚ್ಚಳವಾಗುತ್ತಿದ್ದರೂ, ನಿರ್ವಹಣೆ, ಕಾರ್ಮಿಕರ ಕೊರತೆಯಿಂದ ಸಾಕಷ್ಟು ಮರಗಳು ಅನುತ್ಪಾದಕವಾಗಿವೆ. ತೆಂಗು ಬೆಳೆಯನ್ನೇ ನಂಬಿರುವ ಬೆಳೆಗಾರರು ಆತಂಕದಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ತೆಂಗು ಪುನಶ್ಚೇತನ ಕಾರ್ಯ ಕ್ರಮ ಅನುಷ್ಠಾನಗೊಳಿಸಲಾಗಿದೆ. ಕಾರ್ಮಿಕರ ಕೊರತೆ, ಆರ್ಥಿಕ ಸಮಸ್ಯೆ ಮೊದಲಾದ ಕಾರಣಗಳಿಂದ ಸಂಕಷ್ಟದಲ್ಲಿರುವ ಬಡ ರೈತ ವರ್ಗಕ್ಕೆ ಈ ಯೋಜನೆ ಸಹಕಾರಿ. ಉದ್ಯೋಗ ಚೀಟಿ ಹೊಂದಿರುವ ಕುಟುಂಬ ಸದಸ್ಯರೇ ಕಾರ್ಯನಿರ್ವಹಿಸಿ ಈ ಸಹಾಯಧನ ಪಡೆದುಕೊಳ್ಳಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೂಲಿ ಮತ್ತು ಸಾಮಗ್ರಿ ಖರೀದಿಗೆ ಅನುದಾನ
ಯೋಜನೆಯ ಫಲಾನುಭವಿಗಳಾಗಲು ಎನ್‌ಆರ್‌ಇಜಿ ಜಾಬ್ ಕಾರ್ಡ್ ಹೊಂದಿರುವ ರೈತರು ಅರ್ಹರು. ಕೂಲಿ ವೆಚ್ಚ ಮತ್ತು ಸಾಮಗ್ರಿ ಖರೀದಿಗೆ ಪ್ರತ್ಯೇಕವಾಗಿ ಅನುದಾನ ಲಭ್ಯವಾಗಲಿದೆ. ತೆಂಗು ಪುನಶ್ಚೇತನಕ್ಕೆ ಎಕರೆಗೆ 71 ಮಾನವ ದಿನಗಳಿಗೆ 22,591 ರೂ, ಕೂಲಿ ವೆಚ್ಚ ಮತ್ತು ಸಾಮಾಗ್ರಿ ಖರೀದಿಗೆ 3262 ರೂ. ನೆರವು ಸಿಗಲಿದೆ.
ಪುನಶ್ಚೇತನ ಕಾರ್ಯಗಳು
ಶೇ.25 ಮತ್ತು ಶೇ.50 ಮರುನಾಟಿ ಅವಕಾಶವಿದೆ. ಮರಗಳನ್ನು ತೆಗೆಯದೆ ಸಂಪೂರ್ಣ ಒಣಗಿದ, ಅನುತ್ಪಾದಕ ಮರಗಳ ಪಕ್ಕದಲ್ಲಿ ಮರು ನಾಟಿ, ಗುಂಡಿ ತೆಗೆಯುವುದು, ಗುಂಡಿಗೆ ಮಣ್ಣು ಮತ್ತು ಗೊಬ್ಬರ, ನೀರಿನ ತೇವಾಂಶಕ್ಕೆ ಬದು (ಟ್ರೆಂಚ್) ನಿರ್ಮಾಣ, ಸಸಿ ಸಾಗಾಣಿಕೆ, ಸಾವಯವ, ರಾಸಯನಿಕ ಗೊಬ್ಬರ ಖರೀದಿ, ಸಾವಯವ ಹೊದಿಕೆ, ನೀರು ಹಾಯಿಸುವುದು ಪುನಶ್ಚೇತನ ಕಾರ್ಯಗಳಲ್ಲಿ ಸೇರಿದೆ.
ಹೊರರಾಜ್ಯದಲ್ಲಿ ಬೇಡಿಕೆ
ಜಿಲ್ಲೆಯ ತೆಂಗು ಉತ್ಪನ್ನಗಳಿಗೆ ಹೊರ ರಾಜ್ಯದಲ್ಲಿ ಬೇಡಿಕೆ ಇದೆ. ಕೇರಳ, ಉತ್ತರ ಭಾರತ, ಮಹಾರಾಷ್ಟ್ರಕ್ಕೆ ಜಿಲ್ಲೆಯಿಂದ ಎಣ್ಣೆ ಮತ್ತು ಆಹಾರ ಪದಾರ್ಥ ಸಂಸ್ಕರಣೆಗೆ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳು ಪೂರೈಕೆಯಾಗುತ್ತವೆ. ತೆಂಗಿನ ಉತ್ಪನ್ನಗಳು ಉತ್ತಮ ಸ್ಥಳೀಯ ಮಾರುಕಟ್ಟೆಯನ್ನೂ ಹೊಂದಿವೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಬ್ರಹ್ಮಾವರ 3,376, ಬೈಂದೂರು 2,974, ಹೆಬ್ರಿ 1,598, ಕಾಪು 3,352, ಕಾರ್ಕಳ 5,919, ಕುಂದಾಪುರ 4,840, ಉಡುಪಿ 2,325 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಕೃಷಿಯಿದೆ. ವಾರ್ಷಿಕ ಸರಾಸರಿ 248.71 ಲಕ್ಷ ರೂ.ಆದಾಯ ಅಂದಾಜಿಸಲಾಗಿದೆ.
ತೆಂಗು ಬೆಳೆ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ತೆಂಗು ಪುನಶ್ಚೇತನ ಕಾರ್ಯಕ್ರಮ ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ತೆಂಗು ಪ್ರಮುಖ ಕೃಷಿಯಾಗಿದ್ದು, ತೆಂಗು ಬೆಳೆಗೆ ಕಾಯಕಲ್ಪ ನೀಡಬೇಕಿದೆ. ಎನ್‌ಆರ್‌ಇಜಿ ಉದ್ಯೋಗ ಚೀಟಿ ಹೊಂದಿರುವ ರೈತರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. ಮಾಹಿತಿಗೆ ಉಡುಪಿ ತೋಟಗಾರಿಕೆ ಇಲಾಖೆ ಸಲಹಾ ಕೇಂದ್ರ (0820-2520590) ಸಂಪರ್ಕಿಸಬಹುದು. ಅರ್ಜಿಯನ್ನು ಸ್ಥಳೀಯ ಗ್ರಾಪಂ ಅಥವಾ ತೋಟಗಾರಿಕೆ ಕಚೇರಿಗೆ ಸಲ್ಲಿಸಬಹುದು.
ಭುವನೇಶ್ವರಿ, ಉಪ ನಿರ್ದೇಶಕಿ, ತೋಟಗಾರಿಕೆ ಇಲಾಖೆ