

ಚನ್ನರಾಯಪಟ್ಟಣ: ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ಬಿಸಿಲ ತಾಪ ಏರಿಕೆಯಾಗಿದ್ದು, ಸುಡು ಬಿಸಿಲು ಒಂದೆಡೆಯಾದರೆ, ನೈಸರ್ಗಿಕ ಪಾನೀಯ ಎಂದೇ ಹೆಸರಾಗಿರುವ ಎಳನೀರಿನ ಬೆಲೆ ಜನರನ್ನು ಮತ್ತಷ್ಟು ಸುಡುತ್ತಿದೆ.
ಎಳನೀರಿನ ಬೆಲೆ ಕೇಳಿ ಬೆಚ್ಚಿಬೀಳುವ ಜನರು ದಣಿವಾರಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ತಾಲೂಕಿನಾದ್ಯಂತ ತೆಂಗಿನ ಮರಗಳಲ್ಲಿ ಕಾಂಡ ಸೋರುವ ರೋಗ, ಸುಳಿ ರೋಗ, ನುಸಿ ಪೀಡೆ ಹಾಗೂ ಕೀಟಬಾಧೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತೆಂಗಿನ ಮರಗಳು ಸಾವಿನಂಚಿನತ್ತ ಹೋಗುತ್ತಿವೆ. ಹೀಗಾಗಿ ತೆಂಗಿನ ಬೆಳೆ ಕ್ಷಾಮಕ್ಕೆ ಒಳಗಾಗಿದ್ದು, ತೆಂಗಿನ ಗಿಡಗಳು ಧರೆಗುರುಳಿ ಇಳುವರಿ ಕುಸಿತ ಕಂಡಿದೆ.
2023-24ರಲ್ಲಿ ಮಳೆ ಕೊರತೆ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದ್ದು, ಹಲವು ಜಮೀನುಗಳಲ್ಲಿ ಕೊಳವೆಬಾವಿಗಳಲ್ಲಿಯೂ ನೀರು ಬಾರದ ಸ್ಥಿತಿ ನಿರ್ಮಾಣವಾಗಿತ್ತು. ನೀರಿನ ಕೊರತೆಯಿಂದಲೂ ಎಳನೀರು ಇಳುವರಿ ಕಡಿಮೆಯಾಗಿ, ದುಬಾರಿ ಬೆಲೆ ಜನರ ಕೈಸುಡುವಂತೆ ಮಾಡಿದೆ. ಇನ್ನು ಬೇಸಿಗೆ ಆರಂಭವಾದರೆ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ತಾಲೂಕಿನಲ್ಲಿ ಒಂದು ವರ್ಷದಿಂದ ಎಳನೀರು ದರ ಏರುತ್ತಲೇ ಇದೆ. ಹಲವೆಡೆ ಎಳನೀರು 50 ರಿಂದ 70 ರೂ. ದರದಲ್ಲಿ ಮಾರಾಟವಾಗುತ್ತಿದೆ. ಮಧ್ಯವರ್ತಿಗಳು ಬೆಳೆಗಾರರಿಂದ 25 ರಿಂದ 30ರೂ.ಗಳಿಗೆ ಖರೀದಿಸುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಎಷ್ಟೇ ದರವಿದ್ದರೂ ತೆಂಗು ಬೆಳೆಗಾರರಿಗೆ ಅಲ್ಪ ಹಣವಷ್ಟೇ ಕೈ ಸೇರುತ್ತಿದೆ. ಎಳನೀರು ಗಾತ್ರಕ್ಕೆ ತಕ್ಕಂತೆ ದರ ನಿಗದಿಪಡಿಸಿ ಮಧ್ಯವರ್ತಿಗಳು ತೋಟಗಳಲ್ಲೇ 20 ರಿಂದ 35 ರೂ.ಗೆ ಎಳನೀರು ಖರೀದಿಸುತ್ತಾರೆ. ಇದರಿಂದ ಶ್ರಮವಹಿಸಿ ಬೆಳೆದ ಬೆಳೆಗಾರರಿಗೆ ಪುಡಿಗಾಸು ಮಾತ್ರ ಸಿಗುತ್ತಿದೆ. ಎಳನೀರು ಮಾರುಕಟ್ಟೆಯಲ್ಲೂ ಮಧ್ಯವರ್ತಿಗಳದ್ದೇ ಕಾರುಬಾರಾಗಿದೆ. ಒಂದು ಮರದ ಎಳನೀರು ಇಳಿಸಲು ಬಾಡಿಗೆ, ಇತರ ಖರ್ಚೆಲ್ಲ ಕಳೆದು ಒಂದು ಎಳನೀರು ಮಾರುಕಟ್ಟೆಗೆ ಬರುವಷ್ಟರಲ್ಲಿ ಅದರ ಬೆಲೆ 35 ರೂ. ಆಗುತ್ತದೆ. ಆದರೆ ಮಾರುಕಟ್ಟೆಯಲ್ಲಿ 70 ರಿಂದ 80 ರೂ.ಗೆ ಮಾರಾಟವಾಗುತ್ತಿದೆ.
ಗುಣಮಟ್ಟಕ್ಕೆ ಬೇಡಿಕೆಯಿಲ್ಲ: ಗುಣಮಟ್ಟದ ಎಳನೀರಿಗೆ ಹೆಚ್ಚು ಬೆಲೆಯಾದ ಕಾರಣ ಸಣ್ಣ ಹಾಗೂ ಮಧ್ಯಮ ಗಾತ್ರದ ಕಾಯಿಗಳು, ಚುಕ್ಕೆ ಬಂದ ಎಳನೀರನ್ನು ಕಡಿಮೆ ಬೆಲೆಗೆ ತಂದು ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಸಹ ಕಡಿಮೆ ಬೆಲೆ ಇರುವ ಉತ್ಪನ್ನಗಳನ್ನೇ ಕೊಳ್ಳುತ್ತಿದ್ದಾರೆ. ಇದರಿಂದ ಗುಣಮಟ್ಟದ ಎಳನೀರು ಮಾರಾಟ ಮಾಡುತ್ತಿರುವವರಿಗೆ ವ್ಯಾಪಾರವಿಲ್ಲದಾಗಿದೆ.
ಹೊರ ರಾಜ್ಯಗಳಿಂದ ಹೆಚ್ಚಿದ ಬೇಡಿಕೆ; ತಾಲೂಕಿನ ಎಳನೀರಿಗೆ ಹೊರರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ದೆಹಲಿ, ಗುಜರಾತ್, ಉತ್ತರ ಪ್ರದೇಶ, ಬಿಹಾರ್, ಕಾಶಿ, ವಾರಾಣಸಿ, ಬನಾರಸ್ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಅವರು ಹೆಚ್ಚು ಬೆಲೆ ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ. ಹೀಗಾಗಿ ತಾಲೂಕಿಗೆ ಅವಶ್ಯಕತೆ ಇರುವಷ್ಟು ಎಳನೀರು ಪೂರೈಕೆಯಾಗುತ್ತಿಲ್ಲ. ಅಲ್ಲದೆ ಸ್ಥಳೀಯ ವರ್ತಕರೂ ಹೊರರಾಜ್ಯಗಳ ದಲ್ಲಾಳಿಗಳು ನೀಡುವ ಬೆಲೆಗೆ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಎಳನೀರು ಜನಸಾಮಾನ್ಯರಿಗೆ ಕೈಗೆಟುಕದ ದರ ತಲುಪುತ್ತಿದೆ.
ತಾಲೂಕಿನಲ್ಲಿ ತೆಂಗಿನ ಇಳುವರಿ ಕಡಿಮೆಯಿರುವ ಕಾರಣ ಮುಂದಿನ ದಿನಗಳಲ್ಲಿ ಎಳನೀರು ಸೇರಿದಂತೆ ತೆಂಗಿನ ಉತ್ಪನ್ನಗಳ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರವಾಸಿತಾಣಗಳು, ಹೈವೇ ಬದಿ ಅಂಗಡಿಗಳಲ್ಲಿ 70ರಿಂದ 80 ರೂ.ವರೆಗೂ ಎಳನೀರು ಮಾರಾಟ ಮಾಡಲಾಗುತ್ತಿದೆ.
ಪ್ಯಾಕೆಟ್ ಪಾನೀಯ ಅವಲಂಬನೆ: ಎಳನೀರು ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ನೈಸರ್ಗಿಕ ಪಾನೀಯ ಕುಡಿಯಲು ಯೋಚಿಸುವಂತಾಗಿದೆ. ಮೊದಲು 40-50 ರೂ.ಗೆ ಮಾರಾಟವಾಗುತ್ತಿದ್ದ ಎಳನೀರಿನ ಬೆಲೆ ಇದೀಗ 70 ರೂ. ದಾಟಿದೆ. ಹೀಗಾಗಿ ಆರೋಗ್ಯಕರ, ನೈಸರ್ಗಿಕ ಪಾನೀಯ ಎಳನೀರಿನ ಬದಲು ಹತ್ತಿಪ್ಪತ್ತು ರೂಪಾಯಿಗೆ ಸಿಗುವ ಪ್ಯಾಕೆಟ್ ಪಾನೀಯಗಳನ್ನು ಜನರು ಹೆಚ್ಚಾಗಿ ಅವಲಂಬಿಸುವಂತಾಗಿದೆ.
ಕಿಲೋಮೀಟರ್‌ಗಟ್ಟಲೇ ದೂರದ ತೋಟಗಳಲ್ಲಿ ಎಳನೀರು, ಕಾಯಿ ಹುಡುಕಿ ಅಲ್ಲಿ ಗುಣಮಟ್ಟದ ಎಳನೀರನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲದೆ ಎಳನೀರು ಇಳಿಸುವವರಿಗೆ, ಎಳನೀರು ಸಾಗಿಸಲು ವಾಹನ ಬಾಡಿಗೆ ಹೆಚ್ಚಾಗಿ ವ್ಯಯಿಸಬೇಕಾದ ಅನಿವಾರ್ಯತೆಯಿದೆ. ಇದರಿಂದ ಬೆಲೆ ಏರಿಕೆಯಾಗಿದೆ.
ಬಿ.ಜಿ.ಮಣಿಕಂಠ ಎಳನೀರು ವ್ಯಾಪಾರಿ ಚನ್ನರಾಯಪಟ್ಟಣ
ನೈಸರ್ಗಿಕವಾಗಿ ಸಿಗುವ ಎಳನೀರಲ್ಲಿ ವಿಟಮಿನ್, ಕಾರ್ಬೋಹೈಡ್ರೇಟ್, ಎಂಜೈಮ್ಸ್, ಸೈಟೋನ್ಯೂಟ್ರಿಯಂಟ್ಸ್ ಪೋಷಕಾಂಶ ಹೊಂದಿರುತ್ತದೆ. ಯಾವುದೇ ರಾಸಾಯನಿಕ, ಕೃತಕ ಬಣ್ಣ, ವಾಸನೆ ಇರುವುದಿಲ್ಲ. ಎಳನೀರು ಆರೋಗ್ಯ ಪಾಲನೆ ಮತ್ತು ಚೈತನ್ಯ ವೃದ್ಧಿಗೆ ಶಕ್ತಿವರ್ಧಕ ಪಾನೀಯವಾಗಿದೆ. ಅನೇಕ ಉಪಯೋಗ ಇದರಲ್ಲಿರುವುದರಿಂದ ಜನರೂ ದರ ಹೆಚ್ಚಾದರೂ ಇದರ ಮೊರೆ ಹೋಗುತ್ತಾರೆ.
ಡಾ.ವಿ.ಮಹೇಶ್ ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಚನ್ನರಾಯಪಟ್ಟಣ