ತೆಂಗು ಬೆಳೆಯಿಂದ ಅಧಿಕ ಲಾಭ

IMG-20241219-WA0118
Published on

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಸಲಹೆ

ಸಾಲಿಗ್ರಾಮ : ತೆಂಗು ಬೆಳೆಯಿಂದ ಅಧಿಕ ಲಾಭವಿದ್ದು, ಕೃಷಿಕರು ಮರಗಳ ಪಾಲನೆಗೆ ಹೆಚ್ಚಿನ ಗಮನವಹಿಸಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಹೇಳಿದರು. ತೋಟಗಾರಿಕೆ ಇಲಾಖೆ ತಾಲೂಕಿನ ತಂದ್ರೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತೆಂಗಿನ ಬೆಳೆ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಾಲಿಗ್ರಾಮ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 4 ಸಾವಿರ ಎಕರೆಯಲ್ಲಿ ತೆಂಗಿನ ಬೆಳೆ ಇದೆ. ಇತ್ತೀಚಿನ ದಿನಗಳಲ್ಲಿ ತೆಂಗಿನ ಮರಕ್ಕೆ ರೋಗ ತಗಲುತ್ತಿದೆ. ಇದರಿಂದ ಸಾಕಷ್ಟು ಫಸಲು ನಷ್ಟವಾಗುತ್ತಿದೆ. ಅದರ ನಿರ್ವಹಣೆಗೆ ಕೃಷಿ ತಜ್ಞರನ್ನು ಕರೆಸಿ ಪರಿಶೀಲನೆ ಮಾಡಿಸುವ ನಿಟ್ಟಿನಲ್ಲಿ ಕ್ಷೇತ್ರೋತ್ಸವ ಕಾರ್ಯಕ್ರಮ ಫಲಕಾರಿಯಾಗಲಿದೆ ಎಂದರು.

 ಕೀಟದಿಂದ ಮರ ರಕ್ಷಿಸಿ: ಸಂಪನ್ಮೂಲ ವ್ಯಕ್ತಿ ಶ್ರೀಧರ ಅವರು ತೆಂಗಿನ ಬೆಳೆ ಮತ್ತು ರೋಗಗಳ ನಿರ್ವಹಣೆ ಬಗ್ಗೆ ವಿವರಿಸಿದರು. ಕೀಟದಿಂದ ತೆಂಗಿನ ಮರ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿದರು. ನಂತರ ರೈತರೊಂದಿಗೆ ಚರ್ಚೆ ನಡೆಸಿದರು. ರೈತರ ಆಕ್ರೋಶ: ತೋಟಗಾರಿಕೆ ಇಲಾಖೆ ಸಿಬ್ಬಂದಿಗಳಾದ ರಾಘವೇಂದ್ರ, ರಾಜೇಶ್, ಹರೀಶ್, ನವೀನ್ ಇನ್ನಿತರರು ಕೃಷಿಕರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಇದೇ ಸಂದರ್ಭ ರೈತರು ದೂರಿದರು. ಸಹಾಯಕ ನಿರ್ದೇಶಕಿ ಭಾರತಿ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಗ್ರಾಮೀಣ ಭಾಗದಲ್ಲಿ ಯಾವುದೇ ಯೋಜನೆ ಜಾರಿ ಮಾಡುತ್ತಿಲ್ಲ. ವರ್ಷಕ್ಕೊಂದು ಬಾರಿ ಯಾವುದೋ ಒಂದು ಬೆಳೆ ಕ್ಷೇತ್ರೋತ್ಸವ ಮಾಡಿ ಹೋದರೆ ಇತ್ತ ತಿರುಗಿಯೂ ನೋಡುವುದಿಲ್ಲ. ತೆಂಗಿನ ಬೆಳೆ ನಷ್ಟವಾಗುತ್ತಿರುವ ಬಗ್ಗೆ ಇಲಾಖೆಯಲ್ಲಿ ಸಾಕಷ್ಟು ಬಾರಿ ದೂರು ನೀಡಿದರೂ ಸೂಕ್ತ ಪರಿಹಾರ ಒದಗಿಸಿಲ್ಲ. ಸಾವಿರಾರು ತೆಂಗಿನ ಮರಗಳು ನಷ್ಟವಾಗಿದ್ದರೂ ನಿರ್ಲಕ್ಷ ವಹಿಸುವ ಸ್ಥಳೀಯ ಅಧಿಕಾರಿಗಳ ವಿರುದ್ಧ ಇಲಾಖೆಯ ಉನ್ನತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು. ರೈತರನ್ನು ನಿರ್ಲಕ್ಷಿಸಿದರೆ ಪರಿಣಾಮವನ್ನು ಇಲಾಖೆಯೇ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಗ್ರಾಪಂ ಸದಸ್ಯ ಮಹದೇವಪ್ಪ, ಪ್ರತಾಪ್, ಸಂಪತ್, ಗ್ರಾಪಂ ಕಾರ್ಯದರ್ಶಿ ವಾಮನ್ ರಾವ್, ರಾಜೇಶ್ , ಕುಮಾರಸ್ವಾಮಿ, ಹರೀಶ್ ಬಾಲರಾಜ್, ನವೀನ್, ಕುಮಾರ್, ದಿವಾಕರ್, ಬಲರಾಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net