

ಪ್ರಕಾಶ್ ಮಂಜೇಶ್ವರ
ಮಂಗಳೂರು: ತಿಂಗಳ ಸರಾಸರಿ ಆದಾಯ 65 ಸಾವಿರ ರೂ. ಓಡಾಡಲು ಕಾರು. ಫಲವತ್ತಾದ ಜಮೀನು. ಮಕ್ಕಳಿಗೆ ಉತ್ತಮ ಶಿಕ್ಷಣ...
- ಇದು ಯಾವುದೇ ಬಹುರಾಷ್ಟ್ರೀಯ ಕಂಪನಿಯ ಉನ್ನತ ಸ್ಥಾನದಲ್ಲಿರುವ ಉದ್ಯೋಗಿಯ ಕತೆಯಲ್ಲ.
ಹೌದು, ಯಂತ್ರ ಬಳಸಿ ತೆಂಗು ಮತ್ತು ಅಡಕೆ ಮರ ಏರುವ ಕೌಶಲ ಕರಗತ ಮಾಡಿಕೊಂಡ ಬಳಿಕ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರ ಮನೆಯ ಕೆ.ವಿಠಲ ಗೌಡ ಅವರ ಸದ್ಯದ ಸ್ಥಿತಿಯಿದು.
ವಿಠಲ ಗೌಡ ಆರಂಭದಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ಅಡಕೆ ಮರ ಏರಿ ಔಷಧ ಸಿಂಪಡಿಸುವ ಮತ್ತು ಇತರ ಕೂಲಿ ಕೆಲಸಗಳನ್ನು ಮಾಡಿ ಬರುವ ಆದಾಯದಲ್ಲೇ ಜೀವನ ನಿರ್ವಹಿಸುತ್ತಿದ್ದರು. 2013ರಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿ ಓದಿ ಪ್ರೇರಣೆ ಪಡೆದ ಅವರು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ ಆರು ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಈ ಶಿಬಿರವೇ ಅವರ ಬದುಕನ್ನು ಬದಲಿಸಿತು.
ಕೈ ತುಂಬ ಕೆಲಸ
ಇಂದು ತಮ್ಮ 52ನೇ ವಯಸ್ಸಿನಲ್ಲೂ ವಿಠಲ ಗೌಡ ದಿನಂಪ್ರತಿ ಸರಾಸರಿ 80 ತೆಂಗಿನ ಮರಗಳನ್ನು ಏರುತ್ತಾರೆ. ಒಂದು ತೋಟದಲ್ಲಿ 100 ಮರಗಳು ಇದ್ದರೆ ಅಷ್ಟನ್ನೂ ಒಂದೇ ದಿನ ಏರುವುದು ಇವರ ಸಾಮರ್ಥ್ಯಕ್ಕೆ ನಿದರ್ಶನ. ದಿನದಲ್ಲಿ ಗರಿಷ್ಠ 124 ಮರಗಳನ್ನು ಏರಿದ್ದಾರೆ. ಅಂದರೆ ಆದಾಯ ದಿನಕ್ಕೆ ಸರಾಸರಿ 2,500 ರೂ. ವಾರದಲ್ಲಿ ಇಂಥದ್ದೇ ದಿನ ರಜೆ ಎಂದೇನೂ ಇಲ್ಲ. ಅಗತ್ಯ ಬಿದ್ದಾಗ ಮಾತ್ರ ರಜೆ. ಕೈ ತುಂಬ ಕೆಲಸ ಇವರಿಗೆ ತಪ್ಪಿಲ್ಲ.
ಪ್ರಧಾನ ಸಂಪನ್ಮೂಲ ವ್ಯಕ್ತಿ
ತೆಂಗಿನ ಮರ ಏರುವ ಕೌಶಲ ಕಲಿಸಲು ಇವರು ಈಗ ಜಿಲ್ಲೆಯ ಪ್ರಧಾನ ಸಂಪನ್ಮೂಲ ವ್ಯಕ್ತಿ. ಸಿಪಿಸಿಆರ್‌ಐ, ಕ್ಯಾಂಪ್ಕೊ, ಕೃಷಿ ವಿಜ್ಞಾನ ಕೇಂದ್ರ ಸಹಿತ ವಿವಿಧ ಸಂಘಸಂಸ್ಥೆಗಳು ಜಿಲ್ಲೆಯ ಹಾಗೂ ಕೆಲವು ಬಾರಿ ಹೊರ ಜಿಲ್ಲೆಗಳಲ್ಲಿಯೂ ಇವರು ಯಂತ್ರದ ಮೂಲಕ ತೆಂಗು ಮತ್ತು ಅಡಕೆ ಮರ ಏರುವ ಕೌಶಲ ಕುರಿತು ಸಾಕಷ್ಟು ತರಬೇತಿ ಶಿಬಿರ ನಡೆಸಿಕೊಟ್ಟಿದ್ದಾರೆ. 2-3 ಬಾರಿ ಬಾನುಲಿ ಕೇಂದ್ರಗಳು ಇವರನ್ನು ಸಂದರ್ಶಿಸಿವೆ. ಊರಿನ ಶಾಲೆಯ ತೆಂಗಿನ ಮರಗಳಿಗೆ ಏರಿದರೆ, ತೀರಾ ಬಡವರಿಂದ ಹಣ ತೆಗೆದುಕೊಳ್ಳುವುದಿಲ್ಲ. ಕೆಲವರು ಕಲಿಯಲೆಂದೇ ಇವರ ಮನೆಗೆ ಬರುವುದುಂಟು, ಇವರಿಂದಲೂ ಹಣ ತೆಗೆದುಕೊಳ್ಳುವುದಿಲ್ಲ.
ದಕ್ಷಿಣ ಕನ್ನಡದಲ್ಲಿ 21,772 ಹೆಕ್ಟೇರ್ ಪ್ರದೇಶದಲ್ಲಿ 3,18,594 ತೆಂಗಿನ ಕಾಯಿಗಳನ್ನು(2018- 19ರ ಅಂಕಿ ಅಂಶ)ಉತ್ಪಾದಿಸಲಾಗುತ್ತದೆ. ತೆಂಗಿನ ಮರ ಏರುವ ಜನರ ತೀವ್ರ ಕೊರತೆ ಎಲ್ಲೆಡೆ ಕಂಡುಬರುತ್ತಿದೆ. ಯಂತ್ರ ಮೂಲಕ ಮರ ಏರುವ ಉದ್ಯೋಗ ಹೇಗೆ ಲಾಭದಾಯಕ ಮತ್ತು ಸ್ವಂತ ಬಳಕೆಗೆ ಈ ತಂತ್ರಜ್ಞಾನದ ಬಳಕೆ ಹೇಗೆ ಎಂಬುದಕ್ಕೆ ವಿಠಲ ಗೌಡರು ಮಾದರಿ.
- ಡಾ.ಟಿ.ಜೆ.ರಮೇಶ್, ಮುಖ್ಯಸ್ಥರು, ಕೆವಿಕೆ, ಮಂಗಳೂರು
7 ವರ್ಷಗಳ ಹಿಂದೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಡೆದ ಈ ಕೌಶಲ ನನ್ನ ಬದುಕಿನ ಗತಿಯನ್ನೇ ಬದಲಿಸಿತು. ಇದು ಆರ್ಥಿಕವಾಗಿ ನನ್ನ ನ್ನು ಸ್ವಾವಲಂಬಿಯನ್ನಾಗಿ ಮಾಡಿದೆ. ಸಾರ್ವಜನಿಕ ವಲಯದಲ್ಲಿ ಗೌರವದ ಸ್ಥಾನ ಸಿಗುವಂತಾಗಿದೆ. ಕೃಷಿ ವಿಜ್ಞಾನ ಕೇಂದ್ರಕ್ಕೆ ಅಭಾರಿ.
- ಕೆ.ವಿಠಲ ಗೌಡ, ತೆಂಗಿನ ಮರ ಏರುವವರು