ತೆಂಗಿನ ಮರ ಹತ್ತುವ ಕೌಶಲ ಬದುಕು ಕೊಟ್ಟಿತು; ಅಭಿಮಾನದಿಂದ ಅನುಭವ ಹಂಚಿದ ವಿಠಲ ಗೌಡ ಮುರುಳ್ಯ

mng- feb 12- kvk
ಎಕ್ಕೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆರಂಭಗೊಂಡ ‘ತೆಂಗಿನ ಮರದ ಸ್ನೇಹಿತರು’ ತೆಂಗಿನ ಮರ ಹತ್ತುವ ಆರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ವಿಠಲ ಗೌಡ ಮುರುಳ್ಯ ಮತ್ತು ದಿನೇಶ್ ಇರ್ವತ್ತೂರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕೆವಿಕೆ ಮಂಗಳೂರು ಮುಖ್ಯಸ್ಥ ಡಾ.ಟಿ.ಜೆ.ರಮೇಶ್, ತೋಟಗಾರಿಕೆ ವಿಜ್ಞಾನಿ ಡಾ.ರಶ್ಮಿ ಆರ್. ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಮನೆಯಲ್ಲಿ ತುಂಬಾ ಕಷ್ಟ ಇದ್ದ ಕಾಲ. ಸ್ವಲ್ಪ ಜಮೀನು ಇದ್ದರೂ, ಅದರಲ್ಲಿ ಏನಾದರೂ ಕೃಷಿ ಮಾಡೋಣ ಅಂದರೆ ದುಡ್ಡಿ ಇರಲಿಲ್ಲ. ಸಾಮಾನ್ಯ ಕೂಲಿ ಕೆಲಸ ಮಾಡಿ ದೊರೆತ ದುಡ್ಡು ಜೀವನ ನಿರ್ವಹಣೆಗೆ ಎಲ್ಲಿಯೂ ಸಾಕಾಗುತ್ತಿರಲಿಲ್ಲ. ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ 2013 ರಲ್ಲಿ ಪ್ರಥಮ ಬಾರಿಗೆ ನಡೆದ ತೆಂಗಿನ ಮರ ಹತ್ತುವ ತರಬೇತಿ ಪಡೆದ ಬಳಿಕ ನನ್ನ ಬದುಕೇ ಬದಲಾಯಿತು ಎಂದು ವಿಠಲ ಗೌಡ ಮುರುಳ್ಯ ಅವರು ಅಭಿಮಾನದಿಂದ ತಮ್ಮ ವೃತ್ತಿಯ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

  • ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ ಸಹಯೋಗ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಬೆಂಗಳು ಪ್ರಾಯೋಜಕತ್ವದಲ್ಲಿ ನಗರದ ಎಕ್ಕೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ದಲ್ಲಿ ಸೋಮವಾರ ಆರಂಭಗೊಂಡ ‘ತೆಂಗಿನ ಮರದ ಸ್ನೇಹಿತರು’ ತೆಂಗಿನ ಮರ ಹತ್ತುವ ಆರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
  • ತರಬೇತಿ ಮರುದಿನವೇ ಕೆಲಸ
  • 10 ವರ್ಷ ಹಿಂದೆ ತರಬೇತಿ ಮುಗಿಸಿದ ಮರುದಿನವೇ ತೆಂಗಿನ ಮರಗಳಿಂದ ಕಾಯಿ ಕೀಳುವ ವೃತ್ತಿ ಆರಂಭಿಸಿದ್ದೇನೆ. ಈ ವೃತ್ತಿಯಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದೇನೆ. ಒಂದು ಗಂಡು, ಮೂವರು ಹೆಣ್ಣು ಮಕ್ಕಳು ಇದ್ದಾರೆ. ಗಂಡು ಮಗು ಡಿಪ್ಲೊಮಾ ಮುಗಿಸಿ ಉದ್ಯೋಗದಲ್ಲಿದ್ದಾನೆ. ಓರ್ವ ಹೆಣ್ಣು ಮಗಳು ಕೂಡ ಆಸ್ಪ್ರೆಯಲ್ಲಿ ದಾದಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಇನ್ನಿಬ್ಬರು ಮಕ್ಕಳಿಗೆ ಕೂಡ ಉತ್ತಮ ಶಿಕ್ಷಣ ಕೊಡಲು ಸಾಧ್ಯವಾಯಿತು. ಇರುವ ಜಾಗದ ಜತೆ ಹೊಸ ಜಮೀನು ಖರೀದಿಸಿದ್ದೇನೆ ಎಂದು ಅವರು ವಿವರಿಸಿದರು.
  • ತೆಂಗಿನ ಕಾಯಿ ತೆಗೆಯುವ ಕೆಲಸಕ್ಕೆ ಯಾವತ್ತೂ ಬೇಡಿಕೆ ಕಡಿಮೆಯಾಗಿಲ್ಲ. ದಿನಂಪ್ರತಿ ಸರಾಸರಿ 80 ಮರಗಳಿಂದ ಕಾಯಿ ತೆಗೆಯುತ್ತೇನೆ. ಆರೋಗ್ಯ ಕಾರಣದಿಂದ ಇತ್ತೀಚೆಗೆ ಸ್ವಲ್ಪ ಕಡಿಮೆ ಮಾಡಿದ್ದೇನೆ ಎಂದು ಅವರು ಹೇಳಿದರು.
  • ಸ್ವಾವಲಂಬನೆ ದಾರಿ
  • ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಆಂಜನೇಯಪ್ಪ ಅವರು, ತೆಂಗಿನ ಮರ ಹತ್ತುವ ಜನರಿಗೆ ಅತ್ಯಧಿಕ ಬೇಡಿಕೆ ಸೃಷ್ಟಿಯಾಗಿದ್ದು, ಕಾಯಕದಲ್ಲಿ ಪ್ರಾವಿಣ್ಯತೆ ಪಡೆದವರಿಗೆ ಆರ್ಥಿಕವಾಗಿ ಸ್ವಾವಲಂಬನೆ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಕೆವಿಕೆ ಹಾಗೂ ಸರ್ಕಾರದ ಉದ್ದೇಶ ಕೂಡ ಇದೇ ಆಗಿದೆ ಎಂದರು.
  • ತರಬೇತಿಗೆ ಬೇಡಿಕೆ
  • ಮೀನುಗಾರಿಕಾ ಕಾಲೇಜಿನ ಸಹ ವಿಸ್ತರಣಾಧಿಕಾರಿ ಡಾ.ಎಸ್.ಆರ್.ಸೋಮಶೇಖರ್ ಮುಖ್ಯ ಅಥಿಯಾಗಿದ್ದರು. ಕೆವಿಕೆ ಮಂಗಳೂರು ಮುಖ್ಯಸ್ಥ ಡಾ.ಟಿ.ಜೆ.ರಮೇಶ್ ಅವರು ಮಾತನಾಡಿ, ಪ್ರಮುಖ ವಾಣಿಜ್ಯ ಬೆಳೆ ತೆಂಗು ಅಧಿಕ ಬೆಳೆಯುವಲ್ಲಿ ರಾಜ್ಯದಲ್ಲಿ ತುಮಕೂರು ಪ್ರಥಮ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ ಇದೆ. ತೆಂಗು ಮರ ಏರಿ ಕಾಯಿ ಕೀಳುವವರಿಗೆ ಅತ್ಯಧಿಕ ಬೇಡಿಕೆ ಇದೆ. ಇದರಿಂದ ಈ ಪರಿಣತಿ ಪಡೆದವರು ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ. ಆದ್ದರಿಂದಲೇ ಈ ತರಬೇತಿಗೆ ಯುವಜನರು ಸ್ವಯಂ ಪ್ರೇರಿತವಾಗಿ ಮುಂದೆ ಬರುತ್ತಿರುವುದು ಳ್ಳೆಯ ಬೇಳವಣಿಗೆ ಎಂದರು.
  • ಉಚಿತ ವ್ಯವಸ್ಥೆ
  • ಪ್ರಸ್ತಾವನೆಗೈದ ತೋಟಗಾರಿಕೆ ವಿಜ್ಞಾನಿ ಡಾ.ರಶ್ಮಿ ಆರ್. ಅವರು ಮಾತನಾಡಿ, ತರಬೇತಿಯಲ್ಲಿ ಪಾಲ್ಗೊಳ್ಳುವ ಯುವಜನರಿಗೆ ತೆಂಗಿನ ಮರ ಹತ್ತುವ ಸಲಕರಣೆ, ಒಂದು ವರ್ಷದ ವಿಮೆ, ತರಬೇತಿ ಅವಧಿಯ ವಾಸ್ತವ್ಯ, ಉಪಹಾರ ಉಚಿತವಾಗಿ ಒದಗಿಸಲಾಗುವುದು ಎಂದರು.
  • ವಿಜ್ಞಾನಿ ಡಾ.ಮಲ್ಲಿಕಾರ್ಜುನ ವಂದಿಸಿದರು. ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಿಠಲ ಗೌಡ ಮುರುಳ್ಯ ಮತ್ತು ದಿನೇಶ್ ಇರ್ವತ್ತೂರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net