

ಹುಬ್ಬಳ್ಳಿ: ದೀಪಾವಳಿ ಸಂದರ್ಭದಲ್ಲಿ ಅಗ್ನಿ ಅನಾಹುತಗಳು ಹೊಸದೇನಲ್ಲ. ಬೆಳಕಿನ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವವರಷ್ಟೇ ಅಲ್ಲ, ರಸ್ತೆ ಮೇಲೆ ನಡೆಯುವವರು, ಮನೆಯೊಳಗೆ ಇರುವವರ ಮೇಲೂ ಬೆಂಕಿ ಕಿಡಿಗಳು ಬಿದ್ದು ಮೈಕೈ ಸುಟ್ಟುಕೊಂಡ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ಪ್ರಕರಣ ನಡೆದಿದ್ದು, ಅಗ್ನಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ. ಇಲ್ಲೊಂದಷ್ಟು ಹುಡುಗರು ರಾಕೆಟ್ಗೆ ಬೆಂಕಿ ಇಟ್ಟು ಚಿಮ್ಮಿಸಿದಾಗ ಅದು ಹತ್ತಿರದಲ್ಲಿದ್ದ ತೆಂಗಿನ ಮರದ ತುದಿಯಲ್ಲಿ ಸಿಕ್ಕಿಹಾಕಿಕೊಂಡು ಮರಕ್ಕೂ ಬೆಂಕಿ ಹೊತ್ತಿಕೊಂಡಿದೆ.
ಚನ್ನಬಸಪ್ಪ ಬಡಿಗೇರ ಎಂಬುವವರಿಗೆ ಈ ಮರ ಸೇರಿದ್ದು, ಅಕ್ಕಪಕ್ಕದಲ್ಲಿ ಬೇರೆ ಮನೆಗಳು ಇದ್ದಿದ್ದರಿಂದ ಕೆಲಕಾಲ ಆತಂಕ ಉಂಟಾಗಿತ್ತು. ಕೆಲಕಾಲ ತೆಂಗಿನ ಮರದ ತುದಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಲೇ ಇದ್ದಿದ್ದರಿಂದ ಆತಂಕಗೊಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ವಾಹನದೊಂದಿಗೆ ಧಾವಿಸಿದ ಸಿಬ್ಬಂದಿ ಬೆಂಕಿ ಆರಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.