

ಮಡಿಕೇರಿ: ನೆಲಜಿ ಫಾರ್ಮರ್ಸ್ ಡೆವೆಲೆಪ್‌ಮೆಂಟ್ ಮತ್ತು ರಿಕ್ರಿಯೇಶನ್ಸ್ ಅಸೋಸಿಯೇಷನ್ ವತಿಯಿಂದ ಜ.೧೪ ರಂದು ಪ್ರಥಮ ವರ್ಷದ ಕೊಡವ ಕುಟುಂಬಗಳ ನಡುವೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಮಂಡಿರ ನಂದ ನಂಜಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೦.೨೨ ಮತ್ತು ೧೨ ಬೋರ್ ಬಂದೂಕಿನ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಅಂದು ಬೆಳಗ್ಗೆ ೮.೩೦ ಗಂಟೆಗೆ ಸ್ಪರ್ಧೆ ಅರಂಭಗೊಳ್ಳಲಿದ್ದು, ಒಂದು ಕುಟುಂಬದಿಂದ ಒಂದಕ್ಕಿಂತ ಹೆಚ್ಚಿನ ತಂಡಗಳು ಭಗವಹಿಸಬಹುದಾಗಿದೆ. ಒಂದು ತಂಡದಲ್ಲಿ ಇಬ್ಬರಿಗೆ ಭಾಗವಹಿಸಲು ಅವಕಾಶ ನೀಡಲಾಗಿದ್ದು, ೧೦೦೦ ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಮೈದಾನ ಶುಲ್ಕ ೧೦೦೦ ರೂ ನಿಗದಿ ಪಡಿಸಲಾಗಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ಕೊಡವ ಉಡುಪಿನಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿರುವ ಅವರು, ಕ್ರೀಡಾಕೂಟದಲ್ಲಿ ಆಯೋಜಕರ ತೀರ್ಮಾನ ಅಂತಿಮವಾಗಿರುತ್ತದೆ. ಆಸಕ್ತರು ಜ೫ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಅಸೋಸಿಯೇಷನ್‌ನ ಸಂಚಾಲಕ ಮಾಳೆಯಂಡ ಅಪ್ಪಣ್ಣ ಮಾತನಾಡಿ, ೩ನೇ ವರ್ಷದ ರಾಜ್ಯ ಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಜ೧೫ರಂದು ನಡೆಯಲಿದೆ. ಕ್ರೀಡಾಕೂಟಕ್ಕೆ ಜಿಲ್ಲೆಯ ಜನತೆ ಸೇರಿದಂತೆ ರಾಜ್ಯದ ಆಸಕ್ತರು ಮುಕ್ತವಾಗಿ ಪಾಲ್ಗೊಳ್ಳಬಹುದು. ೧೪ ಮತ್ತು ೧೫ರಂದು ನಡೆಯುವ ಪಂದ್ಯಾವಳಿಯ ಪ್ರಥಮ ಸ್ಥಾನ ಪಡೆದವರಿಗೆ ೫೦,೦೦೦, ದ್ವಿತೀಯ ೩೦,೦೦೦, ತೃತೀಯ ೨೦,೦೦೦ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಉಪಾಧ್ಯಕ್ಷ ಕೈಬುಲಿರ ಉಮೇಶ್, ಕಾರ್ಯದರ್ಶಿ ಮಾಳೆಯಂಡ ಪ್ರದೀಪ್ ಉತ್ತಪ್ಪ, ಖಜಾಂಚಿ ನವೀನ್ ನಾಚಪ್ಪ, ನಿದೇರ್ಶಕ ಮಾಳೆಯಂಡ ಸಿ.ವಿಜಯ್ ಉಪಸ್ಥಿತರಿದ್ದರು.