

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಸಾಮಾನ್ಯವಾಗಿ ಚಳಿಗಾಲ ಆರಂಭದ ಹೊತ್ತಿನಲ್ಲಿ ಕೈಗೆಟುವಂತಿರುತ್ತಿದ್ದ ಎಳನೀರು ದರ ಈ ಬಾರಿ ಗ್ರಾಹಕರ ಜೇಬು ಸುಡುತ್ತಿದೆ. ದಾಖಲೆ ಎಂಬಂತೆ ದರ ಏರಿಕೆಯಾಗಿದ್ದು, ಸಾಧಾರಣ ಗುಣಮಟ್ಟದ ಒಂದು ಎಳನೀರಿಗೂ 60 ರೂಪಾಯಿ ದರ ತೆರಬೇಕಾಗಿದೆ.
ಹೌದು. ಈ ಬಾರಿ ಎಳನೀರು ದರ ದಿಢೀರನೇ ಏರಿಕೆಯಾಗಿದೆ, ನಗರ, ಪಟ್ಟಣ ಪ್ರದೇಶಗಳಲ್ಲಿ ಕಡಿಮೆ ಎಂದರೂ 50ರಿಂದ 60 ರೂಪಾಯಿಗೆ ಎಳನೀರು ಮಾರಾಟವಾಗುತ್ತಿದೆ, ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಟ 40 ರೂಪಾಯಿಗಿಂತ ಕಡಿಮೆ ದರದಲ್ಲಿ ಎಳನೀರು ಸಿಗದಂತಾಗಿದೆ. ಮುಂದಿನ ದಿನಗಳಲ್ಲಿ ಇದರ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ನಿಚ್ಛಳವಾಗಿದೆ. ಈ ಬಾರಿ ಸೆಪ್ಟೆಂಬರ್‌ನಲ್ಲೇ ತಾಪಮಾನ ಏರಿಕೆಯಾಗಿರುವುದು, ಕಳೆದ ಬಾರಿ ಭೀಕರ ಬರ ಸೇರಿ ತೆಂಗು ಪ್ರಧಾನ ಬೆಳೆಯಾಗಿರುವ ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ ಸೇರಿ ಇನ್ನಿತರ ಭಾಗಗಳಲ್ಲಿ ಕಪ್ಪು ತಲೆ ಹುಳದ ಕಾಟ ವಿಪರೀತವಾಗಿರುವುದು ತೆಂಗು ಉತ್ಪನ್ನದ ಮೇಲೆ ದೊಡ್ಡ ಪ್ರಮಾಣದಲ್ಲಿ ಪೆಟ್ಟು ಬಿದ್ದಿದೆ.
ಕಾಡುತ್ತಿದೆ ಕಪ್ಪು ತಲೆ ಹುಳು ಕಾಟ: ತೆಂಗಿನ ಗರಿಗಳನ್ನು ನಾಶಮಾಡುವ ಕಪ್ಪುತಲೆ ಹುಳು ಕಾಟ ದಾಂಧಲೆ ಮಾಡುತ್ತಿದ್ದು, ತೆಂಗಿನ ಮರದಲ್ಲಿ ಹೂ ಬಿಡುವ ಪ್ರಕ್ರಿಯೆಗೆ ಅಡ್ಡಗಾಲು ಹಾಕುತ್ತಿದೆ. ಮಂಡ್ಯ, ಚಾಮರಾಜನಗರ, ಹಾಸನ, ತುಮಕೂರು, ರಾಮನಗರ ಸೇರಿ ಇನ್ನಿತರ ಕಡೆಗಳಲ್ಲಿ ಈ ಕೀಟಬಾಧೆ ಮಿತಿಮೀರಿದ್ದು, ತೆಂಗಿನ ಮರಗಳು ಸುಟ್ಟಂತೆ ಕಂಡುಬರುತ್ತಿವೆ. ಗರಿಗಳು ಉದುರಿ ಬೋಡಾಗಿರುವ ದೃಶ್ಯ ಕಂಡುಬರುತ್ತಿದ್ದು, ತೆಂಗಿನ ಸಲು ಕಾಣಸಿಗದಂತಾಗಿದೆ. ಪರಿಣಾಮವಾಗಿ ಮಾರುಕಟ್ಟೆಗಳಿಗೆ ಎಳನೀರು ಪೂರೈಕೆ ಕನಿಷ್ಟ ಮಟ್ಟಕ್ಕೆ ತಲುಪಿದೆ. ಜತೆಗೆ ಗುಣಮಟ್ಟದ ಎಳನೀರು ಸಿಗುವುದೂ ಅಪರೂಪ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿಡಿಬಿಯಿಂದ ಕಿಟ್: ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಆಯಾ ಜಿಲ್ಲೆಗಳ ತೋಟಗಾರಿಕೆ ಇಲಾಖೆ ವತಿಯಿಂದ ಕಪ್ಪುತಲೆ ಹುಳು ಕೀಟ ಬಾಧೆ ನಿಯಂತ್ರಣಕ್ಕೆ ನ್ಯೂಟ್ರಿಷಿಯನ್ ಸೇರಿ ಇನ್ನಿತರ ಕೀಟನಾಶಕಗಳ ಕಿಟ್ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಆದರೆ ಕಪ್ಪು ತಲೆ ಹುಳು ಕೀಟ ಬಾಧೆ ವಿಪರೀತವಾಗಿದ್ದು ನಿಯಂತ್ರಣಕ್ಕೆ ತರುವುದು ತೆಂಗು ಬೆಳೆಗಾರರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ.
ಬರದ ಎೆಕ್ಟ್: ಕಳೆದ ವರ್ಷ ಕಾಡಿದ ಭೀಕರ ಬರದ ಕಾರಣದಿಂದ ತೆಂಗಿನ ಇಳುವರಿ ಪಾತಾಳ ಮುಟ್ಟಿದೆ. ಕಳೆದೆರಡು ತಿಂಗಳು ಸುರಿದ ಸಾಧಾರಣ ಮಳೆ ತೆಂಗಿನ ಚೇತರಿಕೆಗೆ ಹೇಳಿಕೊಳ್ಳುವಷ್ಟು ಸಹಕಾರಿಯಾಗಲಿಲ್ಲ. ಜತೆಗೆ ಅಕ್ಟೋಬರ್‌ನಿಂದ ತಾಪಮಾನ ಏರಿಕೆಯಾಗಿರುವುದು ತೆಂಗಿನ ಚೇತರಿಗೆ ಪ್ರತಿಕೂಲವಾಗಿ ಪರಿಣಮಿಸಿದೆ. ಅತೀ ಹೆಚ್ಚು ತೆಂಗು ಉತ್ಪಾದನೆಯಾಗುತ್ತಿದ್ದ ಜಿಲ್ಲೆಗಳಲ್ಲಿಯೇ ತೆಂಗಿನ ರಪ್ತು ಗಣನೀಯವಾಗಿ ಕುಸಿದಿದ್ದು, ಮಾರುಕಟ್ಟೆಗಳಲ್ಲಿ ಎಳನೀರಿನ ದಾಸ್ತಾನು ಕಂಡುಬರುತ್ತಿಲ್ಲ. ಮಾರುಕಟ್ಟೆಗಳಲ್ಲಿ ಎಳನೀರು ಖರೀದಿಸಿ ಮಾರುವ ಚಿಲ್ಲರೆ ವ್ಯಾಪಾರಿಗಳಿಗೂ ಸಂಕಷ್ಟ ಎದುರಾಗಿದ್ದು, ಗುಣಮಟ್ಟವಲ್ಲದ ಸಣ್ಣ ಗಾತ್ರದ ಎಳನೀರನ್ನೂ ದುಬಾರಿ ದರಕ್ಕೆ ಮಾರಾಟ ಮಾಡುವಂತಾಗಿದೆ.
ಕೂಲಿ ಕಷ್ಟ: ಮರದಿಂದ ಎಳನೀರು ಕೀಳುವವ ಕೂಲಿ ದರವೂ ಹೆಚ್ಚಳವಾಗಿರುವುದು ಎಳನೀರು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ತೆಂಗಿನ ಮರ ಏರಿ ಎಳನೀರು ಕೀಳುವ ಕೌಶಲವಿರುವ ಕೂಲಿಕಾರ್ಮಿಕರು ಕಾಣಸಿಗಂತಾಗಿದೆ. ಸಿಕ್ಕ ಕೂಲಿಕಾರ್ಮಿಕರು ಹೆಚ್ಚಿನ ದರ ಕೇಳುತ್ತಿರುವುದರಿಂದ ರೈತರೂ ದರ ಏರಿಸುತ್ತಿದ್ದಾರೆ. ಇದು ಸರಪಳಿಯಾಗಿ ಗ್ರಾಹಕರ ಕೈ ಸೇರುವ ಹೊತ್ತಿಗೆ ದುಬಾರಿಯಾಗುತ್ತಿದೆ.
ಕಳೆದ ಬಾರಿಯ ಬರ, ಪ್ರಸ್ತುತ ಹೆಚ್ಚಿರುವ ತಾಪಮಾನ ಹಾಗೂ ತೆಂಗಿನ ಬೆಳೆಗೆ ಕಾಡುತ್ತಿರುವ ಕಪ್ಪುತಲೆ ಹುಳ ಕೀಟಬಾಧೆಯಿಂದ ತೆಂಗಿನ ಇಳುವರಿ ಗಣನೀಯವಾಗಿ ತಗ್ಗಿದೆ. ಮಳೆ ಕೊರತೆಯಿಂದ ಮರಗಳ ಆರೈಕೆ ಇಲ್ಲದಂತಾಗಿದೆ, ಕಪ್ಪುತಲೆ ಹುಳು ಕೀಟದಿಂದ ಗರಿಗಳು ಒಣಗಿ ಲಕಚ್ಚುವುದಕ್ಕೆ ಅಡ್ಡಿಯಾಗಿದೆ. ಕೀಟಬಾಧೆ ನಿಯಂತ್ರಣಕ್ಕೆ ಇಲಾಖೆ ವತಿಯಿಂದ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.
ಗುಣವಂತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬೆಂ.ಗ್ರಾಮಾಂತರ