ದ.ಕ. ತೆಂಗು ರೈತ ಉತ್ಪಾದಕರ ಸಂಸ್ಥೆಯ ಮಾರುಕಟ್ಟೆ ವಿಸ್ತರಣೆ

Coconut
Published on


ಮಂಗಳೂರು : ದ.ಕ. ತೆಂಗು ರೈತ ಉತ್ಪಾದಕರ ಸಂಸ್ಥೆಯು ತನ್ನ ವ್ಯವಹಾರವನು ರಾಜ್ಯ ಮಟ್ಟಕ್ಕೆ ವಿಸ್ತರಿಸಲು ಯೋಜನೆ ರೂಪಿಸಿದ್ದು, ಪ್ರತಿ ತಾಲೂಕಿನಲ್ಲಿಯೂ ವಿತರಣಾ ಕೇಂದ್ರ ತೆರೆಯಲು ಉದ್ದೇಶಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆಯ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ 247 ಫ್ರಾಂಚೈಸಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕಡಿಮೆ ಬಂಡವಾಳದಲ್ಲಿ ಆಸಕ್ತರು ಸ್ವ ಉದ್ಯೋಗ ನಡೆಸಬಹುದಾಗಿದೆ. ರೈತರಿಂದ ತೆಗಿನಕಾಯಿಗಳನ್ನು ನೇರವಾಗಿ ಸ್ಪರ್ಧಾತ್ಮಕ ದರದಲ್ಲಿ ಖರೀದಿಸಿ ಸಿಪಿಸಿಆರ್‌ಐ ಅನುಮೋದಿತ ತಂತ್ರಜ್ಞಾನದಡಿ ತೆಂಗಿನ ಗರಿಯಿಂದ ಬೇರಿನವರೆಗೂ ಎಲ್ಲ ಭಾಗಗಳನ್ನು ಮೌಲ್ಯವರ್ಧಿತ ಉತ್ಪನ್ನವಾಗಿ
ತಯಾರಿಸಲಾಗುತ್ತಿದೆ. ಈಗಾಗಲೇ ವಿವಿಧ 32 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಬೇಡಿಕೆ ಹೆಚ್ಚುತ್ತಿದೆ. ಇದಕ್ಕಾಗಿ ಸಂಸ್ಥೆಯ ವಿತರಣಾ ಕೇಂದ್ರದ ಪರವಾನಿಗೆ ನೀಡಲು ನಿರ್ಧರಿಸಲಾಗಿದೆ. ಪದವೀಧರರು , ಸ್ವಸಹಾಯ ಸಂಘ, ಸಹಕಾರಿ ಸಂಸ್ಥೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿದಿರು.
ತೆಂಗಿನ ಐಸ್‌ಕ್ರೀಂ, ತೆಂಗಿನ ಹಾಲಿನಿಂದ ತಯಾರಿಸಿದ ಜ್ಯೂಸ್, ತೆಂಗಿನ ಎಣ್ಣೆ, ಗೊಬ್ಬರಗಳು, ಟರ್ಪಾಲಿನ್ ಉತ್ಪನ್ನಗಳು, ತೆಂಗಿನ ಮರದ ಪೀಠೋಪಕರಣಗಳು ಸೇರಿದಂತೆ ಉತ್ಪನ್ನಗಳ ಜತೆಗೆ 24 ವಿಧದ ತಳಿಯ ತೆಂಗಿನ ಸಸಿಗಳನ್ನು ಕೇಂದ್ರದ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಆಯ್ಕೆಯಾದ ಅರ್ಜಿದಾರರಿಗೆ ಉತ್ಪನ್ನಗಳ ಮಾಹಿತಿ, ಬಳಕೆ ಪ್ರಕ್ರಿಯೆ, ಬಿಲ್ಲಿಂಗ್, ಡಿಜಿಟಲ್ ಉಪಕರಣಗಳ ಬಳಕೆ ಮಾಹಿತಿ, ವ್ಯವಹಾರ ಕುರಿತ ಸಲಹೆ ಮತ್ತು ತರಬೇತಿ ಮಾತ್ರವಲ್ಲದೆ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ವ್ಯವಹಾರಕ್ಕೆ ಬೇಕಾದ ಹಣಕಾಸಿನ ಬೆಂಬಲ ನೀಡಲಾಗುವುದು ಎಂದು ಅವರು ವಿವರಿಸಿದರು.
ಸಂಸ್ಥೆಯ ನಿರ್ದೇಶಕ ಗಿರಿಧರ್ ಸ್ಕಂದ, ಕಾರ್ಯನಿರ್ವಹಣಾಧಿಕಾರಿ ಚೇತನ್ ಎ., ಮುಖ್ಯ ಸಲಹೆಗಾರ ಯತೀಶ ಕೆ.ಎಸ್., ಕೃಷಿ ಮಾಧ್ಯಮ ಸಲಹೆಗಾರ ಕುಮಾರ್ ಪೆರ್ನಾಜೆ, ರಾಜ್ಯ ರೈತ ಸಂಘದ ಯುವ ಘಟಕದ ಸಂಚಾಲಕ ಆದಿತ್ಯ ಕಲ್ಲಾಜೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net