

ಮಂಡ್ಯ: ರಾಜ್ಯ ಸರ್ಕಾರದ ಶ್ರವಣ ದೋಷ ಮುಕ್ತ ಕರ್ನಾಟಕ ಯೋಜನೆಯ ಅನುಕೂಲ ಹಾಗೂ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ವೈದ್ಯರ ತಂಡದ ಪರಿಶ್ರಮದಿಂದಾಗಿ ಐದು ವರ್ಷ ಎರಡು ತಿಂಗಳ ಬಾಲಕಿಗೆ ನಡೆಸಿದ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದರೊಂದಿಗೆ ಹುಟ್ಟು ಕಿವುಡತನದಿಂದ ಬಳಲುತ್ತಿದ್ದ ಕೂಲಿ ಕಾರ್ಮಿಕ ದಂಪತಿಯ ಮಗಳ ಬದುಕಲ್ಲಿ ಹೊಸ ಅಧ್ಯಾಯ ಶುರುವಾದಂತಗಿದೆ. ಇನ್ನು ಇದು ರಾಜ್ಯದಲ್ಲಿ ಮೂರನೇ ಹಾಗೂ ಮಂಡ್ಯ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಪ್ರಕರಣ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23ನೇ ಸಾಲಿನ ಬಜೆಟ್‌ನಲ್ಲಿ ಶ್ರವಣ ದೋಷ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದರು. ಅದರಂತೆ ಆರು ವರ್ಷದೊಳಗಿನ ಮಕ್ಕಳ ಶ್ರವಣ ದೋಷ ನಿವಾರಣೆಗೆ ವಿಶೇಷ ಗಮನ ಹರಿಸಲಾಗಿತ್ತು. ಯೋಜನೆಯಡಿ ರಾಜ್ಯದ 500 ಮಕ್ಕಳಿಗೆ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲು ಅನುದಾನ ಮೀಸಲಿಡಲಾಗಿತ್ತು. ಇದರಿಂದಾಗಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿತ್ತು.
ಕಲಬುರಗಿ ಮೂಲದ ದಂಪತಿ ಮಂಡ್ಯ ನಗರದಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಅವರ ಐದು ವರ್ಷದ ಮಗಳು ಹುಟ್ಟು ಕಿವುಡುತನದಿಂದ ಬಳಲುತ್ತಿದ್ದಳು. ಈ ಬಗ್ಗೆ ಹಲವು ಕಡೆ ತಪಾಸಣೆ ಮಾಡಿಸಲಾಗಿತ್ತು. ಅದರಂತೆ ಮಿಮ್ಸ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಯಾವುದೇ ಶಬ್ಧವಾದರೂ ಆಕೆಗೆ ಕೇಳಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ತೀರ್ಮಾನ ಮಾಡಲಾಯಿತು. ಪ್ರಖ್ಯಾತ ಕಾಕ್ಲಿಯರ್ ಸರ್ಜನ್ ಡಾ.ಶಂಕರ್ ಮಡಿಕೇರಿ, ಮಿಮ್ಸ್‌ನ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ.ಡಿ.ರವಿ, ಡಾ.ಬಾಲಾಜಿ, ಡಾ.ಸೌಮ್ಯ, ಡಾ.ಮನೋಜ್, ಅರವಳಿಕೆ ತಜ್ಞರಾದ ಡಾ.ಕೃಷ್ಣ, ಡಾ.ದಿವಾಕರ್, ಡಾ.ಕಿರಣ್, ಡಾ.ಅರ್ಚನಾ ನೇತೃತ್ವದ ತಂಡ ಫೆ.20ರಂದು ಮಿಮ್ಸ್‌ನಲ್ಲಿ ಮಾಡಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಆಕೆಯ ಕಿವಿಯಲ್ಲಿ ರಂಧ್ರ ಮಾಡಿ ಎಲೆಕ್ಟ್ರೋಸ್ ಡಿವೈಸ್ ಅಳವಡಿಸಲಾಗಿದೆ. ಇವರಿಗೆ ಮೈಸೂರಿನ ಭಾರತ್ ವಾಕ್ ಶ್ರವಣ ಸಂಸ್ಥೆಯ ನೇಹಾ, ಅಶ್ವಿನಿ, ಜವಾಹರ್ ಅಂಥೋನಿ ಸಾಥ್ ನೀಡಿದರು.
ಒಂದು ವರ್ಷ ನಡೆಯಲಿದೆ ಥೆರಪಿ: ಖಾಸಗಿಯಾಗಿ ಈ ಶಸ್ತ್ರಚಿಕಿತ್ಸೆಗೆ ಸುಮಾರು 8 ರಿಂದ 10 ಲಕ್ಷ ರೂ ಬೇಕಿತ್ತು. ಬಿಪಿಎಲ್ ಕಾರ್ಡ್ ಹೊಂದಿದ್ದರಿಂದ ಹಾಗೂ ಸರ್ಕಾರದ ಯೋಜನೆಯಡಿ ಮಿಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲಾಗಿದೆ. ಸದ್ಯಕ್ಕೆ ಡಿವೈಸ್ ಮೂಲಕ ಪರಿಶೀಲಿಸಿದಾಗ ಬಾಲಕಿ ಸ್ಪಂದನೆ ನೀಡುತ್ತಿದ್ದಾಳೆ. ಆದರೆ ಇಷ್ಟಕ್ಕೆ ಎಲ್ಲವೂ ಬಗೆಹರಿದಿದೆ ಎನ್ನುವಂತಿಲ್ಲ. ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಎರಡು ವಾರ ಬಾಲಕಿಗೆ ವಿಶ್ರಾಂತಿ ನೀಡಲಾಗಿದೆ. ಬಳಿಕ ಒಂದು ವರ್ಷ 104 ಥೆರಪಿ ತರಗತಿಯಲ್ಲಿ ಪಾಲ್ಗೊಳ್ಳಬೇಕಿದೆ. ನಂತರ ಹಂತ ಹಂತವಾಗಿ ಎಲ್ಲ ಶಬ್ಧಗಳನ್ನು ಮೊದಲಿನಿಂದ ಆಕೆಗೆ ಹೇಳಿಕೊಡಬೇಕು.