

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದಿಂದ ಹೈನುಗಾರಿಕೆಯ ಹರಿಕಾರ, ಕೇಂದ್ರ ಮಾಜಿ ಸಚಿವ ಎಂ.ವಿ.ಕೃಷ್ಣಪ್ಪ ಹೆಸರಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗೋಲ್ಡನ್ ಡೇರಿಗೆ ಸಹಕಾರ ಸಚಿವ ಸೋಮಶೇಖರ್ ತಾತ್ವಿಕವಾಗಿ ಒಪ್ಪಿದ್ದಾರೆ ಎಂದು ಗೊತ್ತಾಗಿದೆ.
ಹಾಲು ಒಕ್ಕೂಟ ವಿಭಜನೆ ಹಾಗೂ ಎಂವಿಕೆ ಗೋಲ್ಡನ್ ಡೇರಿ ವಿಚಾರವಾಗಿ ಬುಧವಾರ ಬೆಂಗಳೂರಿನಲ್ಲಿ ಸಹಕಾರ ಸಚಿವ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡೇರಿ ನಿರ್ಮಾಣಕ್ಕೆ ಸಹಮತ ವ್ಯಕ್ತವಾಗಿದ್ದು, ಸಭೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಗೈರಿನಿಂದಾಗಿ ಅಧಿಕೃತ ಪ್ರಕಟಣೆ ಮುಂದೂಡಲಾಗಿದೆ ಎನ್ನಲಾಗಿದೆ.
ಸಚಿವರು ಕರೆದಿದ್ದ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೊರತುಪಡಿಸಿ ಬೇರೆ ಯಾರಿಗೂ ಆಹ್ವಾನವಿರಲಿಲ್ಲ. ಹಾಗಾಗಿ ಕೋಚಿಮುಲ್ ಅಧ್ಯಕ್ಷರೂ ಆಗಿರುವ ಶಾಸಕ ಕೆ.ವೈ.ನಂಜೇಗೌಡ, ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಚ್.ವಿ.ತಿಪ್ಪಾರೆಡ್ಡಿ, ನಿರ್ದೇಶಕರು ಹಾಗೂ ಜಿಲ್ಲೆಯ ಶಾಸಕರು ಕ್ಷೇತ್ರದ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು.
ಕೋಚಿಮುಲ್ ವಿಭಜನೆಗೆ ವಿರೋಧವಿಲ್ಲ, ಆದರೆ ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣದ ನಂತರ ವಿಭಜನೆಯಾಗಲಿ ಎಂಬುದು ಸರ್ವರ ಅಭಿಪ್ರಾಯವಾಗಿದೆ ಎಂದು ಸಭೆಯಲ್ಲಿದ್ದ ನಾಗೇಶ್ ಹೇಳಿದಾಗ, ಗೋಲ್ಡನ್ ಡೇರಿ ನಿರ್ಮಾಣಕ್ಕೆ ವಿರೋಧ ಸಲ್ಲ. ವಿಭಜನೆಗೂ ಹೊಸ ಡೇರಿ ನಿರ್ಮಾಣಕ್ಕೂ ಸಂಬಂಧ ಕಲ್ಪಿಸುವುದು ಬೇಡ ಎಂದು ಸಹಕಾರ ಸಚಿವರು ಅಭಿಪ್ರಾಯಿಸಿದರು ಎನ್ನಲಾಗಿದೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಎನ್‌ಡಿಡಿಬಿ ಅಧಿಕಾರಿ ಕೋಚಿಮುಲ್ ವಿಭಜನೆಯಾದರೆ ನಮಗೆ ಬರಬೇಕಾದ 60ರಿಂದ 70 ಕೋಟಿ ರೂ. ಸಾಲದ ಹಣ ವಾಪಸ್ ಪಡೆಯಲು ಕಷ್ಟವಾಗುತ್ತದೆ. ಸಾಲ ತೀರಿಸಿದ ಬಳಿಕ ವಿಭಜನೆ ಮಾಡಿಕೊಳ್ಳಲಿ ಎಂದು ವಾದ ಮಂಡಿಸಿದಾಗ, ಸಚಿವ ಡಾ.ಕೆ.ಸುಧಾಕರ್ ಸಭೆಯಲ್ಲಿ ಇಲ್ಲದಿರುವುದರಿಂದ ವಿಭಜನೆ ವಿಚಾರವಾಗಿ ನಿರ್ಧಾರ ಕೈಗೊಳ್ಳುವುದು ಬೇಡ, ಸುಧಾಕರ್ ಅವರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಮಾಡೋಣ ಎಂದು ಸಚಿವ ಸೋಮಶೇಖರ್ ತಿಳಿಸಿ ಸಭೆ ಮುಂದೂಡಿದರು ಎನ್ನಲಾಗಿದೆ.
ಗೋಲ್ಡನ್ ಡೇರಿ ನಿರ್ಮಾಣಕ್ಕೆ 2019ರ ಮಾರ್ಚ್ 5ರಂದು ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಾಮಗಾರಿ ಆರಂಭಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ವಿಳಂಬ ಹಾಗೂ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರದ ರಾಜಕೀಯ ಬದಲಾವಣೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಸಚಿವ ಸುಧಾಕರ್ ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣಕ್ಕೆ ಒಪ್ಪಿದರಾದರೂ ಕೋಚಿಮುಲ್ ವಿಭಜನೆಯಾದ ನಂತರ ಹೊಸ ಯೋಜನೆಗೆ ಚಾಲನೆ ಸಿಕ್ಕಲ್ಲಿ ಎನ್‌ಡಿಡಿಬಿ ಸಾಲ ತೀರಿಸುವ ಭಾರ ತಪ್ಪುತ್ತದೆ ಎಂಬುದು ಡಾ.ಕೆ.ಸುಧಾಕರ್ ವಾದವಾಗಿದೆ.
ಗೋಲ್ಡನ್ ಡೇರಿ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಗಿದೆ. ಇದಕ್ಕೆ ಸಹಕಾರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಇನ್ನು ಕೋಚಿಮುಲ್ ವಿಭಜನೆ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲಾ ಸಚಿವ ಡಾ.ಕೆ.ಸುಧಾಕರ್ ಗೈರಿನಿಂದ ಸಾಧ್ಯವಾಗಲಿಲ್ಲ. ಎಚ್.ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ, ಕೋಲಾರ ಸಭೆಗೆ ಆಹ್ವಾನವಿರಲಿಲ್ಲ. ಸಭೆಯಲ್ಲಿ ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣದ ಪರವಾಗಿ ಸಚಿವ ಎಚ್.ನಾಗೇಶ್ ಅವರು ಧ್ವನಿ ಎತ್ತಿರುವುದು ಸ್ವಾಗತಾರ್ಹ, ಕೋಚಿಮುಲ್ ವಿಭಜನೆ ವಿಚಾರವಾಗಿ ಏನು ನಿರ್ಧಾರ ಕೈಗೊಂಡಿದ್ದಾರೆಂಬುದು ತಿಳಿದಿಲ್ಲ. ಕೆ.ವೈ.ನಂಜೇಗೌಡ, ಅಧ್ಯಕ್ಷ, ಕೋಚಿಮುಲ್