

ಮಂಗಳೂರು: ಕೈಗಾರಿಕೆಗಳ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಗ್ರಾಪಂನಿಂದ ಪಾಲಿಕೆ ವರೆಗೆ ವಿವಿಧ ಸ್ಥಳಿಯ ಸಂಸ್ಥೆಗಳು ಹಲವು ಕಾರಣಗಳಿಗಾಗಿ ಕಿರುಕುಳ ನೀಡುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪಾವತಿ ವ್ಯವಸ್ಥೆಯನ್ನು ಸರಳೀಕರಣ ಮಾಡಬೇಕು ಎನ್ನುವ ಬೇಡಿಕೆ ಇತ್ತು. ಆದ್ದರಿಂದ 1 ಕೋಟಿ ರೂ. ವರೆಗೆ, 1ರಿಂದ 10 ಕೋಟಿ, 10ರಿಂದ 100 ಕೋಟಿ ಮತ್ತು 100 ಕೋಟಿ ರೂ. ಮೇಲ್ಪಟ್ಟು ಹೀಗೆ ವಿವಿಧ ಸ್ಲ್ಯಾಬ್‌ಗಳಲ್ಲಿ ತೆರಿಗೆ ಪಾವತಿಗೆ ಸಂಬಂಧಿಸಿ ಸರ್ಕಾರದ ಕಡೆಯಿಂದ ನೋಟಿಫಿಕೇಶನ್ ಮಾಡಿಸಿ, ನೇರವಾಗಿ ಆರ್‌ಟಿಜಿಎಸ್ ಮೂಲಕ ಪಾವತಿ ಮಾಡುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಯಾರೂ ಕೈಗಾರಿಕಾ ಆವರಣಕ್ಕೆ ಬಂದು ತೊಂದರೆ ನೀಡಲು ಅವಕಾಶ ಇರುವುದಿಲ್ಲ ಜತೆಗೆ ಡೀಮ್ಡ್ ಎನ್‌ಒಸಿ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಮತ್ತು ಕರ್ನಾಟಕ ಮೆರಿಟೈಮ್ ಬೋರ್ಡ್ ಸಹಭಾಗಿತ್ವದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಲಾದ ಕರ್ನಾಟಕ ಕೋಸ್ಟ್ ಲೈನ್ ಬಿಜಿನೆಸ್ ಮತ್ತು ಮೆರಿಟೈಮ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವೀಡಿಯೋ ಸಂದೇಶ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, 8 ಸಾವಿರ ಕೋಟಿ ರೂ. ಮೊತ್ತದ ಸಾಗರಮಾಲಾ ಯೋಜನೆಯಲ್ಲಿಯಲ್ಲಿ ರಾಜ್ಯದ ಅವಶ್ಯಕತೆಗಲ್ಲಿ ಒಂದಾಗಿರುವ ಪ್ರವಾಸಿ ಬಂದರುಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಜಲ ಮಾರ್ಗದ ಮೂಲಕ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಬರಲು ಸಾಧ್ಯವಾಗಲಿದೆ. ಗುಜರಾತ್, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಿಗೆ ಜಲ ಸಂಪರ್ಕ ಸಾಧಿಸಲು ಉದ್ದೇಶಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಇದನ್ನು ಜಾರಿಗೊಳಿಸಲಾಗುವುದು ಎಂದರು.
ನವಮಂಗಳೂರು ಬಂದರು ಪ್ರಾಧಿಕಾರ ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು ದಿಕ್ಸೂಚಿ ಭಾಷಣ ಮಾಡಿದರು. ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್, ಕರ್ನಾಟಕರ ಮರಿಟೈಮ್ ಬೋರ್ಡ್ ಸಿಇಒ ಮತ್ತು ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಗೌರವ್ ಗುಪ್ತಾ, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ ಕರ್ನಾಟಕ ಅಧ್ಯಕ್ಷ ಉಲ್ಲಾಸ್ ಕಾಮತ್ ಮೊದಲಾದವರಿದ್ದರು.