

ಉಡುಪಿ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ದ.ಕ., ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿಯ ಸಾಹಿತಿಗಳು, ಕಲಾವಿದರು, ಲೇಖಕರು,- ಕವಿಗಳು,- ಚುಟುಕು ಬರಹಗಾರರ ಸಮ್ಮೇಳನವನ್ನು ಸೆ.29 ರಂದು ಬೆಳಗ್ಗೆ 10 ಗಂಟೆಗೆ ಕುಂಜಿಬೆಟ್ಟುವಿನ ಶಾರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್ ಕೊಡವೂರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನವನ್ನು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷ ವಿಜಯ್ ಕುಮಾರ್ ಕೊಡವೂರು ವಹಿಸಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿರುವರು ಎಂದರು.
ಸಮ್ಮೇಳನದಲ್ಲಿ ಎರಡು ಗೋಷ್ಠಿಗಳು ನಡೆಯಲಿದ್ದು, 11 ಗಂಟೆಗೆ " ಬದಲಾದ ರಾಜಕಾರಣದಿಂದ ದಮನಗೊಳ್ಳುತ್ತಿರುವ ಹಿಂದೂಗಳ ಬದುಕು&ಸಾಹಿತ್ಯ ವಿಷಯ ಕುರಿತು ಬರಹಗಾರ ಪ್ರೇಮ್ ಶೇಖರ್ ಹಾಗು ಚಿಂತಕ ದಯಾನಂದ್ ಕತ್ತಲ್ಸಾರ್ ಮಾತನಾಡಲಿದ್ದಾರೆ. 12 ಗಂಟೆಗೆ " ಭಯೋತ್ಪಾದನೆಯಲ್ಲಿ ನಲುಗುತ್ತಿರುವ ಹಿಂದುತ್ವ" ವಿಷಯದ ಕುರಿತು ವಾಗ್ಮಿ ಡಾ. ಆರತಿ ಬಿ.ವಿ, ಸಂವೇದನಾ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮಲ್ಪೆ ಸಂವಾದಕರಾಗಲಿದ್ದಾರೆ. ಚಿಕ್ಕಮಗಳೂರಿನ ತನ್ಮಯಿ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರ.ಕಾ. ರವೀಂದ್ರ ತಿಂಗಳಾಯ, ಸುರೇಂದ್ರ ಕುಲಾಲ್, ಪ್ರಮುಖರಾದ ಭಾರತಿ ಚಂದ್ರಶೇಖರ್, ಅರುಣ್ ಬಾಣ, ಆದರ್ಶ ನಾಯರಿ ಉಪಸ್ಥಿತರಿದ್ದರು.