ಸಮುದ್ರ ತೀರ ವಾಸಿಗಳ ತೀರದ ಸಂಕಷ್ಟ

ಮೊಗ್ರಾಲ್‌ನ ಕಡಲ ತೀರ.
ಮೊಗ್ರಾಲ್‌ನ ಕಡಲ ತೀರ.
Published on

ಪ್ರಮುಖ ಮುಖ್ಯಾಂಶಗಳು

  • ಈ ವರ್ಷವೂ ಕಾಡುತ್ತಿದೆ ಕಡಲು ಕೊರೆತ ಭೀತಿ
  • ಶಾಶ್ವತ ಪರಿಹಾರಕ್ಕೆ ಆಗ್ರಹ
ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಇನ್ನೇನು ಮುಂಗಾರು ಆಗಮಿಸಲಿದ್ದು ಕಾಸರಗೋಡು ಜಿಲ್ಲೆಯ ಕರಾವಳಿ ತೀರದ ಜನರಲ್ಲಿ ಆತಂಕ ಮಡುಗಟ್ಟಿದೆ. ಪ್ರತಿ ವರ್ಷವೂ ಕಡಲತೀರದ ವಾಸಿಗಳು ಸಮುದ್ರ ಕೊರೆತ ಭೀತಿಯಲ್ಲೇ ಜೀವನ ಸಾಗಿಸುವಂತಾಗಿದೆ. ಜಿಲ್ಲೆಯ 87.65 ಕಿ.ಮೀ. ಉದ್ದದ ಕರಾವಳಿಯಲ್ಲಿ ಸಮುದ್ರ ಕೊರೆತ ತಡೆಗೆ ಈ ವರ್ಷ ಯಾವುದೇ ಮಹತ್ವದ ಯೋಜನೆಗಳನ್ನು ಕೈಗೊಂಡಿಲ್ಲ. ಕಾಸರಗೋಡು ನೀರಾವರಿ ಉಪವಿಭಾಗ ಕಡಲು ಕೊರೆತ ತಡೆಗೆ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿದ್ದರೂ ಈವರೆಗೂ ಅನುಮೋದನೆ ಸಿಕ್ಕಿಲ್ಲ.  
ಪ್ರತಿ ವರ್ಷವೂ ಅಲೆಗಳ ಅಬ್ಬರ ಕರಾವಳಿ ತೀರದ ವಾಸಿಗಳನ್ನು ಭಯಭೀತಗೊಳಿಸುತ್ತಿದೆ. ಕಳೆದೊಂದು ದಶಕದಿಂದ ಜಿಲ್ಲೆಯ ಅನೇಕ ಕರಾವಳಿ ಪ್ರದೇಶಗಳಲ್ಲಿ ಮನೆ, ಭೂಮಿಯನ್ನು ಕಳೆದುಕೊಂಡವರ ಸಂಖ್ಯೆ ಹೆಚ್ಚುತ್ತಿದೆ. ಅನಾಹುತ ಸಂಭವಿಸಿದಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಭರವಸೆ, ಪರಿಹಾರ ನೀಡಿ ಹೋಗುತ್ತಾರೆ. ಆದರೆ ಶಾಶ್ವತ ಪರಿಹಾರ ಮಾತ್ರ ಈವರೆಗೂ ಸಿಕ್ಕಿಲಿಲ್ಲ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ. 
ಜಿಲ್ಲೆಯ 87.65 ಕಿ.ಮೀ. ಕರಾವಳಿಯಲ್ಲಿ ಸುಮಾರು 50 ಕಿ.ಮೀ. ಸಮುದ್ರ ಸವೆತದ ತೀವ್ರ ಅಪಾಯದಲ್ಲಿದೆ. ತಲೆಮಾರುಗಳಿಂದ ಕರಾವಳಿಯಲ್ಲಿ ವಾಸಿಸುತ್ತಿರುವ ಅನೇಕ ಕುಟುಂಬಗಳಿಗೆ ಒಂದು ಸೆಂಟ್ ಭೂಮಿಯೂ ಉಳಿದಿಲ್ಲ. ಪ್ರತಿ ವರ್ಷವೂ ಸಮುದ್ರದ ತಡೆಗೋಡೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಆದರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅದೆಲ್ಲವೂ ನೀರಲ್ಲಿ ಹೋಮ ಮಾಡಿದಂತಾಗುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. 

ಕೈಬಿಡಲಾದ ಯೋಜನೆಗಳು

ಮೊಗ್ರಾಲ್ ನಾಂಗಿ ಪ್ರದೇಶದಲ್ಲಿ ಸಮುದ್ರ ತಡೆಗೋಡೆ ನಿರ್ಮಾಣಕ್ಕಾಗಿ ಕಲ್ಲುಗಳನ್ನು ತಂದು ಹಾಕಲಾಗಿದೆ. ಆದರೆ ಸ್ಥಳೀಯರ ವಿರೋಧದಿಂದಾಗಿ ಮೂರು ವರ್ಷಗಳಿಂದ ಯೋಜನೆ ಸಾಕಾರಗೊಂಡಿಲ್ಲ. 

ಅವೈಜ್ಞಾನಿಕ ಕಾಮಗಾರಿ

ಸಣ್ಣಕಲ್ಲುಗಳು ಮತ್ತು ಮರಳಿನ ಚೀಲಗಳಿಂದ ಮಾಡಿದ ತಡೆಗೋಡೆಗಳು ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿ ಕಡಲಿನ ಪಾಲಾಗುತ್ತವೆ. ಇದರ ಬದಲಾಗಿ ವೈಜ್ಞಾನಿಕವಾಗಿ ಕಾಮಗಾರಿ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂಬ ಕೂಗು ಕೇಳಿಬಂದಿದೆ. ರಾಜ್ಯ ಸರ್ಕಾರ ‘ಜಾಗರೂಪ ಕೈದೀವಿಗೆ’ ಅದಾಲತ್‌ನಲ್ಲಿ ತಲಪ್ಪಾಡಿಯಿಂದ ತೃಕ್ಕನ್ನಾಡುವರೆಗಿನ ಪ್ರದೇಶಗಳಲ್ಲಿ ಟೆಟ್ರಾಪಾಡ್‌ಗಳನ್ನು ಬಳಸಿ ರಕ್ಷಣಾತ್ಮಕ ಗೋಡೆ ಅಳವಡಿಸಲಾಗುವುದು ಎಂದು ಘೋಷಿಸಿತ್ತು. ಆದರೆ ಆ ಘೋಷಣೆ ಕಾಗದದಲ್ಲೇ ಉಳಿದಿದೆಯೇ ಹೊರತು ಕಾರ್ಯರೂಪಕ್ಕೆ ಇನ್ನೂ ಬಂದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net