

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ಮಂಗಳವಾರ ಬೆಳಗ್ಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕೆಲವು ಮನೆಗಳಿಗೆ ನೀರು ನುಗ್ಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ನೀರು ಹರಿಯುವ ತೋಡಿನ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರು ಹರಿದ ಹಿನ್ನೆಲೆಯಲ್ಲಿ ತೋಡುಗಳು ತುಂಬಿ ಹರಿದಿದ್ದು, ಹಲವಡೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ನಗರದ ಪಡೀಲ್, ಕಣ್ಣೂರು, ಅಡ್ಯಾರ್, ಮರೋಳಿ, ಮೊದಲಾದೆಡೆಗಳಲ್ಲಿ ಹೆದ್ದಾರಿಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಕುಲಶೇಖರ ಬಜ್ಜೋಡಿಯಲ್ಲಿ ಮನೆಯೊಂದಕ್ಕೆ ನೀರು ನುಗ್ಗಿ ಮನೆ ಸಾಮಾಗ್ರಿಗಳು ಕೊಚ್ಚಿಕೊಂಡು ಹೋಗಿದೆ.
ಕುಮಾರಧಾರ ಸ್ನಾನಘಟ್ಟ ಸೋಮವಾರದಿಂದ ಮುಳುಗಡೆಯಾಗಿದೆ. ನೇತ್ರಾವತಿ, ಗುರುಪುರ ನದಿಗಳು ತುಂಬಿ ಹರಿಯುತ್ತಿವೆ.