ಇಂದು ಕರಾವಳಿಯಲ್ಲಿ ರೆಡ್ ಅಲರ್ಟ್

mng_21 may male
Published on

ಮಂಗಳೂರು: ಕರಾವಳಿಯಲ್ಲಿ ಮಳೆ ಮತ್ತೆ ವೇಗ ಪಡೆದುಕೊಂಡಿದೆ. ಇದೇ ವೇಳೆ ಭಾರತೀಯ ಹವಾಮಾನ ಇಲಾಖೆ ಜು.6 ಮತ್ತು 7ರಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಿದೆ.

ದ.ಕ.ಜಿಲ್ಲೆಯಲ್ಲಿ ಶುಕ್ರವಾರ ದಿನಪೂರ್ತಿ ಆಗಾಗ ಮಳೆಯಾಗಿದೆ. ಬೆಳಗ್ಗೆ ಉತ್ತಮ ಬಿಸಿಲು ಹೊಂದಿದ್ದರೂ ನಂತರ ಮೋಡ ಕವಿದ ವಾತಾವರಣ ನಡುವೆ ಮಳೆ ಸುರಿಯತೊಡಗಿದೆ. ಮಳೆಯ ವಾತಾವರಣ ರಾತ್ರಿಯೂ ಮುಂದುವರಿದಿದೆ. ಗ್ರಾಮೀಣ ಭಾಗಗಳಲ್ಲೂ ದಿನವಿಡೀ ಸಾಧಾರಣ ಮಳೆಯಾಗಿದೆ.

ಈಗಿನಂತೆ ರಾಜ್ಯದ ಮಲೆನಾಡು ಭಾಗಗಳಲ್ಲಿ ಹಾಗೂ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಜುಲೈ 6 ರಿಂದ ರಿಂದ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಲಕ್ಷಣಗಳಿವೆ. ಪಶ್ಚಿಮಘಟ್ಟದ ಕೆಳಭಾಗದ ಪ್ರದೇಶಗಳಾದ ಚಾರ್ಮಡಿ, ಶಿರಾಡಿ, ಆಗುಂಬೆ ಸುತ್ತಮುತ್ತ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 26.3 ಮೀಟರ್ ಹಾಗೂ ಬಂಟ್ವಾಳ ನೇತ್ರಾವತಿ ನದಿ ಮಟ್ಟ 5 ಮೀಟರ್‌ಗಳಲ್ಲಿ ಹರಿಯುತ್ತಿತ್ತು. ಕರಾವಳಿಯಲ್ಲಿ ಗಂಟೆಗೆ 35ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಕಳೆದ 24 ಗಂಟೆಗಳ ಕಾಲಾವಧಿಯಲ್ಲಿ ದ.ಕ ಜಿಲ್ಲೆಯಲ್ಲಿ ಮಳೆಯಿಂದಾಗಿ ಆಸ್ತಿಪಾಸ್ತಿ, ಪ್ರಾಣಾ ಹಾನಿ ಸಂಭವಿಸಿಲ್ಲ.

*ಮೂಡುಬಿದಿರೆ ಗರಿಷ್ಠ ಮಳೆ

ಶುಕ್ರವಾರ ಬೆಳಗ್ಗಿನ ವರೆಗೆ ದ.ಕ.ಜಿಲ್ಲೆಯ ಮೂಡುಬಿದಿರೆಯಲ್ಲಿ ಗರಿಷ್ಠ 22.9 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 12.7 ಮಿ.ಮೀ. ಆಗಿದೆ. ಬೆಳ್ತಂಗಡಿ 14.5 ಮಿ.ಮೀ, ಬಂಟ್ವಾಳ 15.3 ಮಿ.ಮೀ, ಮಂಗಳೂರು 17.3, ಪುತ್ತೂರು 8.1 ಮಿ.ಮೀ, ಸುಳ್ಯ 6.7 ಮಿ.ಮೀ, ಕಡಬ 9.1 ಮಿ.ಮೀ, ಮೂಲ್ಕಿ 15.1 ಮಿ.ಮೀ, ಉಳ್ಳಾಲ 16.6 ಮಿ.ಮೀ. ಮಳೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net