

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ರಾಜ್ಯ ಬಜೆಟ್‌ನಲ್ಲಿ ಕಾಪು ಕ್ಷೇತ್ರ ಹಾಗೂ ಕರಾವಳಿ ಜಿಲ್ಲೆ ನಿರ್ಲಕ್ಷಿಸಿರುವ ಬಗ್ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಧಾನಸಭಾ ಅಧಿವೇಶನದಲ್ಲಿ ವಿಧಾನಸಭಾಧ್ಯಕ್ಷರ ಗಮನ ಸೆಳೆದರು.
ಕಾಪು ಹೊಸದಾಗಿ ತಾಲೂಕಾಗಿ ರಚನೆಯಾಗಿದೆ. ಅಲ್ಲಿ ಇನ್ನೂ ಕೆಲವು ಕಚೇರಿಗಳೇ ಬಂದಿಲ್ಲ, ಮೂಲಸೌಕರ್ಯ ಜೋಡಣೆಯಾಗಿಲ್ಲ, ಕೃಷಿ ಇಲಾಖೆ, ಸಬ್ ರಿಜಿಸ್ಟ್ರಾರ್ ಕಚೇರಿ ಬಂದಿಲ್ಲ. ನಮಗೆ ಒಂದಿಷ್ಟು ನಿರೀಕ್ಷೆ ಇತ್ತು. ನಾವೊಂದು ಆಸ್ಪತ್ರೆ ಕೇಳಿದ್ವಿ, ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದ ಅದನ್ನು ಸಮುದಾಯ ಆಸ್ಪತ್ರೆಯನ್ನಾಗಿ ಮಾಡುವ ಮೂಲಕ ಅನ್ಯಾಯ ಮಾಡಿದ್ದಾರೆ. ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ಕಾಪುವಿನಲ್ಲಿ ಪಶ್ಚಿಮವಾಹಿನಿ ಯೋಜನೆ ಮೂಲಕ ವೆಂಟೆಡ್ ಡ್ಯಾಂ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಬೇಕು. ನದಿ ಕೊರೆತ ತಡೆಗೆ ಕ್ರಮವಹಿಸಬೇಕು. ಲೋಕೋಪಯೋಗಿ ರಸ್ತೆಗಳಲ್ಲಿ ಕಿರು ಸೇತುವೆ ನಿರ್ಮಾಣ, ಕಾಲುಸಂಕ ರಚನೆಯಾಗಬೇಕು ಎಂದು ಒತ್ತಾಯಿಸಿದರು.
ಕಾಪು ಪುರಸಭೆ ಊರ ಸಭೆಯಾಗಿ ರಚನೆಯಾದರೂ ಈವರೆಗೆ ಯುಜಿಡಿ ವ್ಯವಸ್ಥೆಯಾಗಿಲ್ಲ. ಹೊಸ ಪುರಸಭೆ, ತಾಲೂಕು ರಚನೆಯಾದಾಗ ಸಂಭ್ರಮಪಟ್ಟಿದ್ದೆ. ನಮ್ಮ ಸರ್ಕಾರವಿಲ್ಲವೆಂದು ಎಷ್ಟು ಕಷ್ಟ ಎಂದು ನಮಗೀಗ ಅರ್ಥವಾಗುತ್ತಿದೆ. ಎಲ್ಲದರೂ ಹಸ್ತಕ್ಷೇಪವಾಗುತ್ತಿದೆ. ಈ ಸಂಕಟ ಯಾರ ಮುಂದೆ ಹೇಳಿಕೊಳ್ಳಬೇಕು. ನೀವೇ ನಮ್ಮ ರಕ್ಷಣೆಗೆ ಬರಬೇಕೆಂದು ಅಂಗಲಾಚಿದರು.
33 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡು ಪಾಳು ಬಿದ್ದಿರುವ ಬೆಳಪು ಗ್ರಾಮದ ವಿಜ್ಞಾನ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಟ್ಟಡದಲ್ಲಿ ರಾತ್ರಿ ಹೊತ್ತಿನಲ್ಲಿ ಅವ್ಯವಹಾರ ನಡೆಯುತ್ತಿವೆ. ಸಣ್ಣದಾಗಿ ಕೇಂದ್ರ ತೆರೆದು ಅಲ್ಲಿನ ಅವ್ಯವಹಾರ ತಡೆಯಲು ಮುಂದಾಗುವಂತೆ ಸಂಬಂಧಿಸಿದ ಸಚಿವರನ್ನು ಗಮನ ಸೆಳೆಯಲಾಗಿದೆ. ಅಕಾಡೆಮಿ ಕೌನ್ಸಿಲ್ ಸದಸ್ಯನಾಗಿದ್ದು, ಈ ಬಗ್ಗೆ ಚರ್ಚಿಸಲು ಅಲ್ಲಿನ ಎರಡು ಸಭೆಯಲ್ಲಿ ಭಾಗವಹಿಸಿದ್ದೆ. ಆದರೆ ಅಲ್ಲಿ ವಿಶ್ವವಿದ್ಯಾಲಯದವರಿಗೆ ವೇತನ ನೀಡಲು ದುಡ್ಡಿಲ್ಲದಂತಾಗಿದೆ. ಬಳಿಕ ಸಭೆಗೆ ಹೋಗುವುದನ್ನೇ ಸ್ಥಗಿತಗೊಳಿಸಿದೆ. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನಪಡಿಸಿರುವ ಜಮೀನುಗಳಲ್ಲಿ ಆರಂಭವಾಗುವ ಘಟಕಗಳಲ್ಲಿ ಭೂಮಿ ಕಳೆದುಕೊಂಡ ಸ್ಥಳೀಯರಿಗೆ ಉದ್ಯೋಗ ನೀಡಿ ಪ್ರತಿಭಾ ಫಲಾಯನ ತಡೆಯಲು ಸರ್ಕಾರ ಮುಂದಾಗಬೇಕು.
ಕಲ್ಯಾಣ ಕರ್ನಾಟಕ, ಮಲೆನಾಡು ಹಾಗೂ ಬಯಲು ಸೀಮೆ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದ್ದರೂ, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 10 ಕೋಟಿ ರೂ. ಅನುದಾನ ನೀಡುವ ಮೂಲಕ ಅನ್ಯಾಯ ಮಾಡಲಾಗಿದೆ.
ಅವಿಭಜಿತ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವ ಮತ್ತು ಈಡಿಗ ಸಮುದಾಯಕ್ಕೆ ಮಾಡಿರುವ ನಾರಾಯಣಗುರು ಅಭಿವೃದ್ಧಿ ಮಂಡಳಿಗೆ ಕೇವಲ ಒಂದು ಲಕ್ಷ ರೂ. ಅನುದಾನ ನೀಡಿರುವುದು ಸಮುದಾಯಕ್ಕೆ ಮಾಡಿದ ಅನ್ಯಾಯವಲ್ಲವೇ. ಈ ಬಗ್ಗೆ ಜನ ಶಾಸಕರನ್ನು ಪ್ರಶ್ನೆ ಮಾಡುವಂತಾಗಿದೆ ಎಂದು ಸಭಾಧ್ಯಕ್ಷರ ಮುಂದೆ ಶಾಸಕ ಗುರ್ಮೆ ಅಲವತ್ತುಕೊಂಡರು. ತುಳು ಭಾಷೆ 8ನೇ ಪರಚ್ಛೇದಕ್ಕೆ ಸೇರ್ಪಡೆಗೆ ಎರಡು ಜಿಲ್ಲೆ ಶಾಸಕರನ್ನು ಸೇರಿಸಿಕೊಂಡು ಸಭೆ ಕರೆಯುವಂತೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರನ್ನು ಒತ್ತಾಯಿಸಿದರು.