

ಮಂಗಳೂರು/ಉಡುಪಿ/ಸುಳ್ಯ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುರುವಾರ ದಿನವಿಡೀ ಉತ್ತಮ ಮಳೆ ಸುರಿದಿದೆ. ಜಿಲ್ಲೆಗೆ ಹೊಂದಿಕೊಂಡಂತಿರುವ ಘಟ್ಟ ಪ್ರದೇಶ ಮತ್ತು ತಪ್ಪಲಿನಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಭಾರಿ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಸುಳ್ಯದಲ್ಲಿ ಬೆಳಗ್ಗಿನಿಂದ ಬಿಡುವಿಲ್ಲದೆ ಭಾರಿ ಮಳೆಯಾಗುತ್ತಿದ್ದು, ಜನರು ಮನೆಯಿಂದ ಹೊರಬರಲಾಗದ ಸ್ಥಿತಿಯಿತ್ತು.
ಯೆಲ್ಲೋ ಅಲರ್ಟ್ ಮುಂದುವರಿದಿದ್ದು, ಇನ್ನೂ ಕೆಲವು ದಿನ ಮಳೆ ನಿರೀಕ್ಷೆಯಿದೆ. ದ.ಕ. ಜಿಲ್ಲೆಯ ನದಿ ತಟ, ಕಡಲ ಕಿನಾರೆ, ತಗ್ಗು ಪ್ರದೇಶ ಮತ್ತು ಗುಡ್ಡಗಳ ಇಳಿಜಾರು ಪ್ರದೇಶಗಳಲ್ಲಿ ವಾಸವಾಗಿರುವ ಜನರು ಜಾಗ್ರತೆ ವಹಿಸಬೇಕು. ತುರ್ತು ಸಂದರ್ಭ ಜಿಲ್ಲಾಡಳಿತದ ಸಹಾಯವಾಣಿ 1077 ಸಂಪರ್ಕಿಸುವಂತೆ ತಿಳಿಸಲಾಗಿದೆ.
ಬೈಂದೂರು ತಾಲೂಕಿನ ಬಿಜೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ. ಹೆಬ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಮನೆಗೆ ಹಾನಿಯಾಗಿದೆ. ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದಲ್ಲಿ ಮನೆಗೆ ಮರ ಬಿದ್ದಿದೆ. ಎಳ್ಳಾರೆ ಗ್ರಾಮದಲ್ಲಿ ಬಾಳೆ ಬೆಳೆ ಹಾನಿಯಾಗಿದೆ.
ಮಳೆ ವಿವರ: ಗುರುವಾರ ಬೆಳಗ್ಗಿನಿಂದ ಸಾಯಂಕಾಲವರೆಗೆ ಸುಳ್ಯದ ಮರ್ಕಂಜದಲ್ಲಿ ಗರಿಷ್ಠ 75.5, ಉಬರಡ್ಕ ಮಿತ್ತೂರು 73, ಮಂಗಳೂರಿನ ಇರುವೈಲಿನಲ್ಲಿ 70 ಮಿ.ಮೀ. ಮಳೆ ಸುರಿದಿದೆ. ಗುರುವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 69.5, ಬೆಳ್ತಂಗಡಿ 53.1, ಮಂಗಳೂರು 57.4, ಪುತ್ತೂರು 57.7, ಸುಳ್ಯ 43.1 ಮಿ.ಮೀ. ಸಹಿತ ದ.ಕ. ಜಿಲ್ಲೆಯಲ್ಲಿ ಸರಾಸರಿ 56.2 ಮಿ.ಮೀ. ಮಳೆಯಾಗಿದೆ. ಉಡುಪಿ 82.6, ಕುಂದಾಪುರ 85.5, ಕಾರ್ಕಳ 73 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ 81 ಮಿ.ಮೀ. ಸರಾಸರಿ ಮಳೆ ದಾಖಲಾಗಿದೆ.