ಕರಾವಳಿ ಬ್ಯಾಂಕ್‌ಗಳ ತವರು ಮನೆ: ಪಲಿಮಾರು ಶ್ರೀ

udp-25-mahabaleshwara 1
Published on

ಉಡುಪಿ: ಕರಾವಳಿ ಪ್ರದೇಶ ಬ್ಯಾಂಕ್‌ಗಳ ತವರು ಮನೆಯಾಗಿದೆ. ಜಿಲ್ಲೆಯ ಪ್ರಮುಖ ಬ್ಯಾಂಕ್‌ಗಳು ವಿಲೀನವಾಗಿ ಅದೃಶ್ಯವಾಗಿದ್ದು, ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಕಂಡು ದಕ್ಷಿಣದಿಂದ ಉತ್ತರದವರೆಗೆ ಪ್ರಬಲವಾಗಿ ಬೆಳೆದಿದೆ ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.

ಮಂಗಳವಾರ ಪೇಜಾವರ ಮಠದ ರಾಮವಿಠಲ ಸಭಾಭವನದಲ್ಲಿ ಯಕ್ಷಗಾನ ಕಲಾರಂಗದ ವತಿಯಿಂದ ಇತ್ತೀಚೆಗೆ ನಿವೃತ್ತರಾದ ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಎಂ. ಎಸ್. ಮಹಾಬಲೇಶ್ವರ ಅವರ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಅಧಿಕಾರದಲ್ಲಿರುವಾಗ ಎಲ್ಲರೂ ಗೌರವಿಸುತ್ತಾರೆ. ಆದರೆ ನಿವೃತ್ತಿಯ ಬಳಿಕವೂ ಅಭಿನಂದನೆ ಪಡೆಯುತ್ತಿರುವುದು ಮಹಾಬಲೇಶ್ವರ್ ಅವರ ಕರ್ತೃತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಡಾ. ಎಚ್. ಎಸ್ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹರಿಯಪ್ಪ ಕೋಟ್ಯಾನ್, ಕರ್ಣಾಟಕ ಬ್ಯಾಂಕ್ ಎಜಿಎಂ ಬಿ. ರಾಜಗೋಪಾಲ್ ಹಾಗೂ ಅನ್ನಪೂರ್ಣಾ ಮಹಾಬಲೇಶ್ವರ ಎಂ. ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ ಗುರುವಪ್ಪ ಬಾಯರ್ ಮತ್ತು ಜಗದೀಶ್ ನಲ್ಕ ಅವರ ಮನೆಯವರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net